Site icon Vistara News

Amit Shah: ಕಾಶ್ಮೀರದಿಂದ ಎಎಫ್‌ಎಸ್‌ಪಿಎ ಹಿಂಪಡೆಯಲು ಚಿಂತನೆ ಎಂದ ಅಮಿತ್‌ ಶಾ; ಏನಿದು?

Amit Shah doctored video case

ನವದೆಹಲಿ: ಜಮ್ಮು-ಕಾಶ್ಮೀರಕ್ಕೆ (Jammu Kashmir) ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿ ರದ್ದುಗೊಳಿಸಿದ ಬಳಿಕ ಕಣಿವೆಯಲ್ಲಿ ಗಲಭೆಗಳು, ಸೈನಿಕರ ಮೇಲೆ ಕಲ್ಲುತೂರಾಟ, ಪ್ರತ್ಯೇಕವಾದದ ಪರ ಘೋಷಣೆ ಸೇರಿ ಹಲವು ರೀತಿಯ ಚಟುವಟಿಕೆಗಳು ನಿಯಂತ್ರಣಕ್ಕೆ ಬಂದಿವೆ. ಇದರ ಬೆನ್ನಲ್ಲೇ, “ಜಮ್ಮು ಕಾಶ್ಮೀರದಿಂದ ಸಶಸ್ತ್ರ ಪಡೆಗಳ ವಿಶೇಷಾಧಿಕಾರಿ ಕಾಯ್ದೆ (AFSPA) ಹಿಂಪಡೆಯುವ ಕುರಿತು ಚಿಂತನೆ ನಡೆದಿದೆ” ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರು ಮಹತ್ವದ ಘೋಷಣೆ ಮಾಡಿದ್ದಾರೆ.

“ಜಮ್ಮು-ಕಾಶ್ಮೀರದಲ್ಲಿ ಜಾರಿಗೆ ತಂದಿರುವ ಎಎಫ್‌ಎಸ್‌ಪಿಎ ಅನ್ನು ಹಿಂಪಡೆಯುವುದು, ಹೆಚ್ಚುವರಿ ಸೈನಿಕರನ್ನು ಹಿಂಪಡೆದು, ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆಯನ್ನು ಕಣಿವೆಯ ಪೊಲೀಸರಿಗೆ ನೀಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಈ ಕುರಿತು ಸಮಗ್ರವಾಗಿ ಚರ್ಚಿಸಿದ ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ” ಎಂದು ಜೆಕೆ ಮೀಡಿಯಾ ಗ್ರೂಪ್‌ ಜತೆ ಮಾತನಾಡುವಾಗ ಅಮಿತ್‌ ಶಾ ಹೇಳಿದ್ದಾರೆ.

ಜಮ್ಮು-ಕಾಶ್ಮೀರದ ಪೊಲೀಸರ ಮೇಲೆಯೇ ಇಡೀ ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆಯನ್ನು ಬಿಡಲು ಮೊದಲು ಆಗುತ್ತಿರಲಿಲ್ಲ. ಆದರೆ, ಈಗ ಜಮ್ಮು-ಕಾಶ್ಮೀರದ ಪೊಲೀಸರ ನೇತೃತ್ವದಲ್ಲಿಯೇ ಕಾರ್ಯಾಚರಣೆಗಳು ನಡೆಯುತ್ತಿವೆ. ಹಾಗಾಗಿ, ಸೈನಿಕರನ್ನು ಹಿಂಪಡೆದು, ಜಮ್ಮು-ಕಾಶ್ಮೀರದ ಪೊಲೀಸರಿಗೇ ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆ ನೀಡಲಾಗುತ್ತದೆ” ಎಂದು ತಿಳಿಸಿದರು.

“ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವನ್ನು ಪ್ರತಿಷ್ಠಾಪಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸು ಹಾಗೂ ಭರವಸೆಯಾಗಿದೆ. ಪ್ರಜಾಪ್ರಭುತ್ವ ಎಂದರೆ ಮೂರು ಕುಟುಂಬಗಳ ಪ್ರಭುತ್ವ ಅಲ್ಲ. ಸರ್ವಜನರೂ ಒಳಗೊಳ್ಳುವುದೇ ಪ್ರಜಾಪ್ರಭುತ್ವವಾಗಿದೆ. ಹಾಗಾಗಿ, ಜಮ್ಮು-ಕಾಶ್ಮೀರದ ನಾಗರಿಕರ ಸಹಭಾಗಿತ್ವ, ಅವರ ಒಳಗೊಳ್ಳುವಿಕೆಗೆ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ” ಎಂದರು.

ಏನಿದು ಎಎಫ್‌ಎಸ್‌ಪಿಎ?

ಆಂತರಿಕ ಗಲಭೆ, ಗಲಾಟೆ ಸೇರಿ ಯಾವುದೇ ಅಹಿತಕರ ಘಟನೆಗಳನ್ನು ನಿಯಂತ್ರಿಸಲು ದೇಶದ ಯಾವುದೇ ರಾಜ್ಯಕ್ಕೆ ಹೆಚ್ಚುವರಿ ಭದ್ರತಾ ಸಿಬ್ಬಂದಿ, ಅಧಿಕಾರ ನೀಡುವುದೇ ಎಎಫ್‌ಎಸ್‌ಪಿಎ ಆಗಿದೆ. ಎಎಫ್‌ಎಸ್‌ಪಿಎ ಜಾರಿಯಲ್ಲಿರುವ ಯಾವುದೇ ರಾಜ್ಯದಲ್ಲಿ ಸೈನಿಕರಿಗೆ ಹೆಚ್ಚಿನ ಅಧಿಕಾರಗಳು ಇರುತ್ತವೆ. ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಯಾದವರ ಮೇಲೆ ಗುಂಡು ಹಾರಿಸುವ, ವಾರೆಂಟ್‌ ಇಲ್ಲದೆಯೇ ಯಾರನ್ನು ಬೇಕಾದರೂ ಬಂಧಿಸುವ, ವಾಹನ ತಡೆದು ವಿಚಾರಣೆ ನಡೆಸುವುದು ಸೇರಿ ಹಲವು ಅಧಿಕಾರಗಳನ್ನು ಹೊಂದಿರುತ್ತಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version