ನವದೆಹಲಿ: 2024ರ ಲೋಕಸಭೆ ಚುನಾವಣೆಗೆ (Lok Sabha Election 2024) ದಿನಗಣನೆ ಆರಂಭವಾಗಿದೆ. ಈಗಾಗಲೇ 26 ಪ್ರತಿಪಕ್ಷಗಳು ಒಗ್ಗೂಡಿ ಇಂಡಿಯಾ ಒಕ್ಕೂಟ (INDIA Bloc) ರಚಿಸಿದ್ದು, ರಣತಂತ್ರ ರೂಪಿಸುತ್ತಿವೆ. ಅತ್ತ, ಎನ್‌ಡಿಎ ಮೈತ್ರಿಕೂಟವೂ ಸಭೆ ನಡೆಸಿ ಒಗ್ಗಟ್ಟು ಪ್ರದರ್ಶಿಸಿದೆ. ಇದರ ಬೆನ್ನಲ್ಲೇ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ದೇಶಾದ್ಯಂತ ಜನಕಲ್ಯಾಣ ಯೋಜನೆಗಳ ಸಮಗ್ರ ಜಾರಿಗೆ ಮೋದಿ 6 ತಿಂಗಳು ಗಡುವು ನೀಡಿದ್ದಾರೆ. ಆ ಮೂಲಕ ಬಡವರು ಹಾಗೂ ಮಧ್ಯಮ ವರ್ಗದವರ ಮತ ಸೆಳೆಯಲು ರಣತಂತ್ರ ಹೆಣೆದಿದ್ದಾರೆ ಎಂದು ತಿಳಿದುಬಂದಿದೆ.
ದೇಶಾದ್ಯಂತ ಸಂಕಲ್ಪ ಯಾತ್ರೆ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನಕಲ್ಯಾಣ ಯೋಜನೆಗಳ ಯಾವುದೇ ಸೌಕರ್ಯಗಳು, ಸೌಲಭ್ಯಗಳು ಜನರಿಗೆ ವಿಳಂಬವಾಗಬಾರದು. ಆರು ತಿಂಗಳಲ್ಲಿ ಅರ್ಹ ಫಲಾನುಭವಿಗಳಿಗೆ ಸಕಲ ಸೌಲಭ್ಯಗಳು ಕೂಡ ದೊರೆತಿರಬೇಕು ಎಂಬುದಾಗಿ ನರೇಂದ್ರ ಮೋದಿ ಅವರು ಸಚಿವರು, ಸಂಸದರು, ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ. ಅಷ್ಟೇ ಅಲ್ಲ, ದೇಶಾದ್ಯಂತ 2.7 ಲಕ್ಷ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕೈಗೊಳ್ಳುವ ಮೂಲಕ ಜನರಿಗೆ ಯೋಜನೆಗಳ ಮಾಹಿತಿ, ಯೋಜನೆಗಳ ಸೌಲಭ್ಯ ಪಡೆಯುವ ಕುರಿತು ಜಾಗೃತಿ ಮೂಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಯಾವ ಯೋಜನೆಗಳ ಜಾರಿಗೆ ಡೆಡ್‌ಲೈನ್?
ಪ್ರಮುಖ 10 ಜನಕಲ್ಯಾಣ ಯೋಜನೆಗಳ ಜಾರಿಗೆ ಮೋದಿ ಗಡುವು ನೀಡಿದ್ದಾರೆ ಎನ್ನಲಾಗಿದೆ. ಪ್ರಧಾನಮಂತ್ರಿ ಜನಧನ್ ಯೋಜನೆ (PMJDY), ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY), ಪ್ರಧಾನಮಂತ್ರಿ ಆವಾಸ್ ಯೋಜನೆ (PMAY), ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ (PMGSY), ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ (PM-KISAN), ಸ್ವಚ್ಛ ಭಾರತ ಮಿಷನ್ (ಗ್ರಾಮೀಣ)… ಹೀಗೆ ಜನರಿಗೆ ನೀರು, ಬ್ಯಾಂಕ್ ಖಾತೆ, ಉದ್ಯೋಗ, ನಗದು ಸೇರಿ ಹಲವು ಸೌಕರ್ಯಗಳು ಸಿಗುವ ಜನಕಲ್ಯಾಣ ಯೋಜನೆಗಳ ಜಾರಿಗೆ ಮೋದಿ ಡೆಡ್‌ಲೈನ್ ನೀಡಿದ್ದಾರೆ.
ಇದನ್ನೂ ಓದಿ: Lingayat CM : ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಲಿಂಗಾಯತ ಅಸ್ತ್ರ ಡ್ಯಾಮೇಜ್? ಸಾಫ್ಟ್ ಆದ ಸಿದ್ದರಾಮಯ್ಯ!
ಜನಕಲ್ಯಾಣ ಯೋಜನೆಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಜಾರಿಯಲ್ಲಿವೆ ಹಾಗೂ ಫಲಾನುಭವಿಗಳ ಸಂಖ್ಯೆ ಗ್ರಾಮೀಣ ಪ್ರದೇಶಗಳಲ್ಲಿಯೇ ಹೆಚ್ಚಿದೆ. ಹಾಗಾಗಿ, ಕೇಂದ್ರದ ಯೋಜನೆಗಳನ್ನು ತಲುಪಿಸುವ ಮೂಲಕ ಗ್ರಾಮೀಣ ರೈತರು, ಹಿಂದುಳಿದವರು, ಬಡವರು ಸೇರಿ ಎಲ್ಲ ವರ್ಗದವರ ಭರವಸೆ ಗಳಿಸುವುದು ನರೇಂದ್ರ ಮೋದಿ ಅವರ ಚಿಂತನೆಯಾಗಿದೆ. ಇದರಿಂದ ಲೋಕಸಭೆ ಚುನಾವಣೆಯಲ್ಲಿ ಗೆಲುವಿಗೆ ಅನುಕೂಲವಾಗಲಿದೆ ಎಂಬುದು ಮೋದಿ ನಂಬಿಕೆಯಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ದೀಪಾವಳಿ ಬಳಿಕ ಅಭಿಯಾನ ಆರಂಭವಾಗುತ್ತದೆ ಎಂದು ಕೂಡ ತಿಳಿದುಬಂದಿದೆ.