ರಾಯ್‌ಪುರ: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ (Lok Sabha Election 2024), ಕೆಲವೇ ದಿನಗಳಲ್ಲಿ ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೂ ಮೊದಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಹತ್ವದ ಘೋಷಣೆ ಮಾಡಿದ್ದಾರೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (PMGKY) ಅಡಿಯಲ್ಲಿ ಇನ್ನೂ 5 ವರ್ಷ ದೇಶದ 80 ಕೋಟಿ ಬಡವರಿಗೆ ಉಚಿತವಾಗಿ (Free Ration) ಆಹಾರ ಧಾನ್ಯ ನೀಡಲಾಗುವುದು ಎಂದು ಹೇಳಿದ್ದಾರೆ.
ಛತ್ತೀಸ್‌ಗಢದಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ಮಾತನಾಡಿದ ಅವರು, “ನಮ್ಮ ಸರ್ಕಾರದ ಐದು ವರ್ಷದ ಆಡಳಿತದ ಅವಧಿಯಲ್ಲಿಯೇ ದೇಶದ 13.5 ಕೋಟಿ ಜನ ಬಡತನದಿಂದ ಹೊರಬಂದಿದ್ದಾರೆ. ನಿಮ್ಮ ಆಶೀರ್ವಾದ, ಸ್ಫೂರ್ತಿಯೇ ನನಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಇನ್ನೂ ಐದು ವರ್ಷಗಳವರೆಗೆ ಪಿಎಂಜೆಕೆವೈ ಯೋಜನೆ ಅಡಿಯಲ್ಲಿ 80 ಕೋಟಿ ಜನರಿಗೆ ಉಚಿತವಾಗಿ ಆಹಾರ ಧಾನ್ಯ ವಿತರಿಸಲಾಗುತ್ತದೆ” ಎಂದು ಘೋಷಣೆ ಮಾಡಿದರು.
Free Ration scheme to 80 crore Bharatiyas extended for the next 5 years till 2028 …
— BALA (@erbmjha) November 4, 2023
This is huge @narendramodi 🔥 pic.twitter.com/hzQI9oyFn2
ಏನಿದು ಪಿಎಂಜೆಕೆವೈ ಸ್ಕೀಮ್?
ದೇಶದಲ್ಲಿ ಕೊರೊನಾ ಬಿಕ್ಕಟ್ಟು ಎದುರಾದಾಗ ಬಡವರಿಗೆ ಅನುಕೂಲವಾಗಲಿ ಎಂದು ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಘೋಷಿಸಿದೆ. ದೇಶದ 80 ಕೋಟಿ ಬಡವರಿಗೆ ಮಾಸಿಕ 5 ಕೆಜಿ ಆಹಾರ ಧಾನ್ಯ ನೀಡುವ ಯೋಜನೆ ಇದಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಯೋಜನೆ ಜಾರಿಗೆ ತರಲಾಗಿದೆ. ಕೊರೊನಾ ಬಿಕ್ಕಟ್ಟಿನ ನಂತರವೂ ಕೇಂದ್ರ ಸರ್ಕಾರವು ಉಚಿತ ಪಡಿತರ ಯೋಜನೆಯನ್ನು ವಿಸ್ತರಿಸಿತ್ತು. ಈಗ ಇನ್ನೂ ಐದು ವರ್ಷಗಳಿಗೆ ಯೋಜನೆಯನ್ನು ವಿಸ್ತರಣೆ ಮಾಡಿದೆ.
ಇದನ್ನೂ ಓದಿ: Chhattisgarh Polls: ಸ್ತ್ರೀಯರಿಗೆ 12 ಸಾವಿರ ರೂ., 500 ರೂ.ಗೆ ಎಲ್‌ಪಿಜಿ ಸಿಲಿಂಡರ್; ಇದು ‘ಮೋದಿ’ ಗ್ಯಾರಂಟಿ
ಭಾಷಣದ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಕಾಂಗ್ರೆಸ್‌ಗೆ ಬಡವರ ಹಣವನ್ನು ಲೂಟಿ ಮಾಡುವುದು ಬಿಟ್ಟರೆ ಬೇರೇನೂ ಬರುವುದಿಲ್ಲ. ಅಭಿವೃದ್ಧಿ, ಬದಲಾವಣೆಗಾಗಿ ನೀವು ಬಿಜೆಪಿಯನ್ನು ಗೆಲ್ಲಿಸಬೇಕು. ಇನ್ನೂ ಒಂದು ತಿಂಗಳು ಸಮಯ ಇದೆ. ಬಿಜೆಪಿಯನ್ನು ಗೆಲ್ಲಿಸಿ ಹಾಗೂ ಎಲ್ಲ ಸಮಸ್ಯೆಗಳಿಂದ ಹೊರಬನ್ನಿ” ಎಂದು ಹೇಳಿದರು. ಛತ್ತೀಸ್‌ಗಢದಲ್ಲಿ ನವೆಂಬರ್ 7 ಹಾಗೂ ನವೆಂಬರ್ 17ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಲಿದೆ.