ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರು ಚೆನ್ನೈಗೆ ಗುರುವಾರ ಭೇಟಿ ನೀಡುತ್ತಿದ್ದು, ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಸೇರಿದಂತೆ ಒಟ್ಟು 31,500 ಕೋಟಿ ರೂ. ಮೌಲ್ಯದ 11 ಯೋಜನೆಗಳ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ.
ಚೆನ್ನೈನ ಜವಹರಲಾಲ್ ನೆಹರೂ ಒಳಾಂಗಣ ಸ್ಟೇಡಿಯಂನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಭದ್ರೆತೆಗೆ ಕನಿಷ್ಠ 22 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.
ಚೆನ್ನೈ ಮತ್ತು ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ 262 ಕಿ.ಮೀ ಉದ್ದದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಹೆದ್ದಾರಿಯನ್ನು 14,870 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದು ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ನಡುವೆ ಹಾದು ಹೋಗಲಿದೆ. ಬೆಂಗಳೂರು ಮತ್ತು ಚೆನ್ನೈ ನಡುವಣ ಪ್ರಯಾಣದ ಅವಧಿ ಎರಡೂವರೆ ಗಂಟೆಗೆ ಇಳಿಯಲಿದೆ. ಎನ್‌ಎಚ್‌ಎಐ ಈ ಯೋಜನೆಯನ್ನು ನಾಲ್ಕು ಹಂತಗಳು ಹಾಗೂ 11 ಸೆಕ್ಷನ್‌ಗಳಲ್ಲಿ ನಡೆಯಲಿದೆ. ಈಗಾಗಲೇ ಎಲ್ಲ ಟೆಂಡರ್ ಪ್ರಕ್ರಿಯೆ ಪೂರ್ಣವಾಗಿದೆ.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಹೆದ್ದಾರಿಯು ಕರ್ನಾಟಕದಲ್ಲಿ 71 ಕಿ.ಮೀ, ಆಂಧ್ರಪ್ರದೇಶದಲ್ಲಿ 85 ಕಿ.ಮೀ ಮತ್ತು ತಮಿಳುನಾಡಿನಲ್ಲಿ 106 ಕಿ.ಮೀ ಪ್ರದೇಶದಲ್ಲಿ ಹಾದು ಹೋಗಲಿದೆ. ಭಾರತ್ ಮಾಲಾ ಪರಿಯೋಜನಾ ಅಡಿಯಲ್ಲಿ ಇದನ್ನು ಹಮ್ಮಿಕೊಳ್ಳಲಾಗಿದೆ. ಮೂರೂ ರಾಜ್ಯಗಳ ಆರ್ಥಿಕ ಅಭಿವೃದ್ಧಿಗೆ ಇದು ಸಹಕರಿಸಲಿದೆ.
ನಾಲ್ಕು ಲೇನ್ ಗಳ ಚೆನ್ನೈ-ಮಧುರಾವೊಯಾಲ್ ರಸ್ತೆ ಅಗಲೀಕರಣ ಯೋಜನೆಯು 21 ಕಿ.ಮೀಗಳ ಯೋಜನೆಯಾಗಿದೆ. ಚೆನ್ನೈ ಬಂದರಿನ ರಸ್ತೆ ಮತ್ತು ಇತರ ಮೂಲಸೌಕರ್ಯ ವೃದ್ಧಿಸಲಿದೆ. 5,850 ಕೋಟಿ ರೂ. ವೆಚ್ಚವಾಗಲಿದೆ. ಪಿಎಂ ಗತಿ ಶಕ್ತಿ ಯೋಜನೆಯಡಿಯಲ್ಲಿ ಇದನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಎಗ್ಮೋರ್, ರಾಮೇಶ್ವರಂ, ಮಧುರೈ, ಕಟಪಾಡಿ, ಕನ್ಯಾಕುಮಾರಿಯ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಯೋಜನೆಯ ಶಂಕುಸ್ಥಾಪನೆ ಆಗಲಿದೆ. ನೆರಲೂರು-ಧರ್ಮಪುರಿ ವಲಯದ 31 ಕಿ.ಮೀ ರಾಷ್ಟ್ರೀಯ ಹೆದ್ದಾರಿ 4 ಲೇನ್ ಗಳಲ್ಲಿ ಅಗಲೀಕರಣವಾಗಲಿದೆ. ಮಲ್ಟಿ ಮಾಡೆಲ್ ಲಾಜಿಸ್ಟಿಕ್ಸ್ ಪಾರ್ಕ್ ಯೋಜನೆಯ ಶಂಕುಸ್ತಾಪನೆ ನಡೆಯಲಿದೆ.