ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಕಾವು ದಿನೇದಿನೆ ಜಾಸ್ತಿಯಾಗುತ್ತಿದೆ. ರಾಜಕಾರಣಿಗಳ ಹೇಳಿಕೆಗಳು, ಅವರು ಮಾತನಾಡುವ ವಿಷಯಗಳು ಇನ್ನಷ್ಟು ಕಾವು ಪಡೆದುಕೊಳ್ಳುತ್ತಿವೆ. “ನಾವು ಅಧಿಕಾರಕ್ಕೆ ಬಂದರೆ ಕಾಶ್ಮೀರದಲ್ಲಿ 370ನೇ ವಿಧಿ ಮತ್ತೆ ಜಾರಿಗೆ ತರುತ್ತೇವೆ. ಪೌರತ್ವ ತಿದ್ದುಪಡಿ ಕಾಯ್ದೆ (CAA) ಜಾರಿಯನ್ನು ತಡೆಯುತ್ತೇವೆ” ಎಂದು ಪ್ರತಿಪಕ್ಷಗಳು ಹೇಳುತ್ತಿವೆ. ಇದರ ಬೆನ್ನಲ್ಲೇ, ಪ್ರತಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸವಾಲು ಹಾಕಿದ್ದಾರೆ. “ತಾಕತ್ತಿದ್ದವರು 370ನೇ ವಿಧಿಯನ್ನು ಮತ್ತೆ ಜಾರಿಗೆ ತರಲಿ. ತಾಕತ್ತಿದ್ದವರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಡೆಯಲಿ” ಎಂದು ನ್ಯೂಸ್ 18ಗೆ ನೀಡಿದ ಸಂದರ್ಶನದ ವೇಳೆ ನರೇಂದ್ರ ಮೋದಿ ಹೇಳಿದ್ದಾರೆ.
“ಪಶ್ಚಿಮ ಬಂಗಾಳದಲ್ಲಿ ಸಿಎಎ ಜಾರಿಯಾಗಲು ಬಿಡುವುದಿಲ್ಲ. ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ಮತ್ತೆ ಜಾರಿಗೆ ತರಲಾಗುವುದು” ಎಂಬುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿರುವ ಕುರಿತು ಸಂದರ್ಶನದ ವೇಳೆ ಪ್ರಶ್ನೆಗೆ ನರೇಂದ್ರ ಮೋದಿ ಉತ್ತರಿಸಿದರು. “ನಾನು ಕಾಂಗ್ರೆಸ್ ಸೇರಿ ಯಾವುದೇ ಪ್ರತಿಪಕ್ಷಗಳಿಗೆ ಸವಾಲು ಹಾಕುತ್ತೇನೆ. ತಾಕತ್ತಿದ್ದವರು 370ನೇ ವಿಧಿಯನ್ನು ಜಾರಿಗೆ ತರಲಿ. ಹಾಗೆಯೇ, ಸಿಎಎ ಜಾರಿಯನ್ನು ಯಾರಿಗೂ ತಡೆಯಲು ಆಗುವುದಿಲ್ಲ” ಎಂದು ಹೇಳಿದರು.
In an #exclusive conversation, PM Narendra Modi talks about CAA and dares the Congress party to say, 'they will restore Article 370' #pmmodi #narendramodi #modi #loksabhaelections #article370 #caa #bjp #congress #politics #PMModiToNews18 | @narendramodi pic.twitter.com/zBD0fKEJu2
— News18 (@CNNnews18) April 29, 2024
“ಯಾರು ಸಂವಿಧಾನವನ್ನು ಸರಿಯಾಗಿ ಓದಿರುತ್ತಾರೋ, ಯಾರು ಒಕ್ಕೂಟ ವ್ಯವಸ್ಥೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುತ್ತಾರೋ, ಅವರು ಇಂತಹ ಹೇಳಿಕೆ ನೀಡುವುದಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ 370ನೇ ವಿಧಿಯು ರಾಜ್ಯಗಳಿಗೆ ಸಂಬಂಧಿಸಿದ ವಿಷಯವಲ್ಲ. ರಾಜ್ಯಗಳ ಪಟ್ಟಿಯಲ್ಲಿ ಇವು ಬರುವುದಿಲ್ಲ. ನರೇಂದ್ರ ಮೋದಿ ಕೂಡ ಯಾವುದೇ ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ, ಇಂತಹ ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ. ಇದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ವಿಷಯವಾಗಿದೆ” ಎಂದು ತಿಳಿಸಿದರು.
“ಯಾವುದೇ ರಾಜ್ಯಗಳಿಗೆ 370ನೇ ವಿಧಿ ಮರು ಜಾರಿಗೊಳಿಸಲು ಆಗುವುದಿಲ್ಲ. ಕಾಂಗ್ರೆಸ್ ಸೇರಿ, ಯಾವುದೇ ಪಕ್ಷಗಳಿಗೆ ನಾನು ಸವಾಲು ಹಾಕುತ್ತೇನೆ. ತಾಕತ್ತಿದ್ದರೆ, 370ನೇ ವಿಧಿಯನ್ನು ಮತ್ತೆ ಜಾರಿಗೊಳಿಸುತ್ತೇವೆ ಎಂದು ಘೋಷಿಸಲಿ ನೋಡೋಣ. ಡಾ.ಬಿ.ಆರ್.ಅಂಬೇಡ್ಕರ್ ಅವರು ಹೆಸರು ಹೇಳಿಕೊಂಡು ನಮ್ಮ ವಿರುದ್ಧ ಟೀಕೆ ಮಾಡುತ್ತಾರೆ. ಆದರೆ, ಸ್ವಾತಂತ್ರ್ಯದ ಬಳಿಕ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವು ಜಮ್ಮು-ಕಾಶ್ಮೀರದಲ್ಲಿ ಅನ್ವಯವಾಗಿರಲಿಲ್ಲ. 370ನೇ ವಿಧಿ ರದ್ದುಗೊಳಿಸಿ, ನಾವು ಅಂಬೇಡ್ಕರ್ ಸಂವಿಧಾನವು ಜಮ್ಮು-ಕಾಶ್ಮೀರದಲ್ಲೂ ಜಾರಿಯಾಗುವಂತೆ ಮಾಡಿದ್ದೇವೆ” ಎಂದು ತಿಳಿಸಿದರು.
ಇದನ್ನೂ ಓದಿ: PM Narendra Modi: ಶಿರಸಿಗೆ ಬಂದಾಗ ಮೋದಿ ಭೇಟಿ ಮಾಡಿದ ನಾಲ್ವರು ವಿಶೇಷ ವ್ಯಕ್ತಿಗಳಿವರು! ಏನಿವರ ಸಾಧನೆ?