ನವದೆಹಲಿ: 3000 ಕೋಟಿ ರೂ. ಮೊತ್ತದ ಸಾಲ ಅಕ್ರಮ ಪ್ರಕರಣದಲ್ಲಿ ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಚಂದಾ ಕೋಚರ್ (Chanda Kochhar) ಹಾಗೂ ಅವರ ಪತ್ನಿ ದೀಪಕ್ ಕೋಚರ್ ಅವರ ಬಂಧನವನ್ನು ಕಾನೂನುಬಾಹಿರ ಎಂದು ಹೇಳಿರುವ ಬಾಂಬೆ ಹೈಕೋರ್ಟ್(Bombay High court), ಅವರ ಬಿಡುಗಡೆಗೆ ಸೂಚಿಸಿದೆ. ಜನವರಿ 15ರಂದು ಚಂದಾ ಅವರ ಪುತ್ರನ ಮದುವೆ ನಿಗದಿಯಾಗಿದೆ. ಕಳೆದ ತಿಂಗಳು ಸಿಬಿಐ ಚಂದಾ ಕೋಚರ್ ಹಾಗೂ ಪತಿ ದೀಪಕ್ ಅವರನ್ನು ಬಂಧಿಸಿ, ಜೈಲಿಗೆ ಅಟ್ಟಿತ್ತು.
ಸಿಬಿಐ ಬಂಧನವನ್ನು ಪ್ರಶ್ನಿಸಿ ಅವರು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. ಅಲ್ಲದೇ, ಮಗನ ಮದುವೆಯ ಸಂದರ್ಭದಲ್ಲೇ ತಮ್ಮನ್ನು ಬಂಧಿಸಿರವುದನ್ನು ಅವರು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಐಸಿಐಸಿಐ ಸಾಲ ಅಕ್ರಮಕ್ಕೆ ಸಂಬಂಧಿಸಿದಂತೆ ವಿಡಿಯೋಕಾನ್ ಗ್ರೂಪ್ ಚೇರ್ಮನ್ ವೇಣುಗೋಪಾಲ್ ಅವರನ್ನೂ ಸಿಬಿಐ ಅರೆಸ್ಟ್ ಮಾಡಿತ್ತು.
ಪ್ರಕರಣದ ಸಾಕ್ಷ್ಯಗಳನ್ನು ನಾಶ ಮಾಡದಿರುವುದು ಸೇರಿದಂತೆ ತನಿಖಾ ಸಂಸ್ಥೆಯು ವಿಧಿಸಿರುವ ಎಲ್ಲ ಷರತ್ತುಗಳನ್ನು ಪಾಲನೆ ಮಾಡುತ್ತಿದ್ದರೂ ತಮ್ಮನ್ನು ಬಂಧಿಸಲಾಗಿದೆ ಎಂದು ಚಂದಾ ಕೋಚರ್ ಅವರು ಹೈಕೋರ್ಟ್‌ನಲ್ಲಿ ವಾದಿಸಿದ್ದರು. ಕೋಚರ್ ಅವರ ಅರ್ಜಿ ವಿಚಾರಣೆಗೆ ಸಮ್ಮತಿಸಿದ ಹೈಕೋರ್ಟ್, ಮಗನ ಮದುವೆ ಕಾರಣಕ್ಕೆ ಚಂದಾ ಕೋಚರ್ ಅವರ ಅರ್ಜಿ ವಿಚಾರಣೆ ನಡೆಸುತ್ತಿಲ್ಲ. ಬದಲಾಗಿ ಅವರ ಬಂಧನದಲ್ಲಿ ಕಾನೂನಿನ ನಿಯಮಗಳನ್ನು ಪಾಲಿಸಿಲ್ಲ. ಈ ಕುರಿತು ವಿಚಾರಣೆ ನಡೆಸಲು ಒಪ್ಪಿಕೊಳ್ಳಲಾಗಿದೆ ಎಂದು ಕಳೆದ ವಾರ ಹೈಕೋರ್ಟ್ ಸ್ಪಷ್ಟಪಡಿಸಿತ್ತು.
ಇದನ್ನೂ ಓದಿ | Rane Bungalow | ಕೇಂದ್ರ ಸಚಿವ ರಾಣೆಗೆ ಸೇರಿದ ಬಂಗ್ಲೆ ನೆಲಸಮಕ್ಕೆ ಬಾಂಬೆ ಹೈಕೋರ್ಟ್ ಆದೇಶ