Site icon Vistara News

Chandra Shekhar Azad: ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದ ಚಂದ್ರಶೇಖರ ಆಜಾದ್

Chandra Shekar Azad

ಮಯೂರ ಲಕ್ಷ್ಮಿ
ಜುಲೈ 23, 1906ರಲ್ಲಿ ಮಧ್ಯಪ್ರದೇಶದ ಜಬುವಾ-ತೆಹಸೀಲ್ ಜಿಲ್ಲೆಯ ಭವ್ರಾ ಎಂಬ ಹಳ್ಳಿಯಲ್ಲಿ ಪಂಡಿತ್ ಸೀತಾರಾಂ ತಿವಾರಿ ಮತ್ತು ಜಾಗ್ರಣೀ ದೇವಿಯವರ ಪುತ್ರನಾಗಿ ಜನಿಸಿದರು ಚಂದ್ರಶೇಖರ ಸೀತಾರಾಂ ತಿವಾರಿ )Chandra Shekhar Azad). ಬ್ರಿಟಿಷರ ವಿರುದ್ಧ ನಡೆಯುತ್ತಿದ್ದ ಸ್ವಾತಂತ್ರ ಸಂಗ್ರಾಮದಲ್ಲಿ ಪಾಲ್ಗೊಳ್ಳುವ ಹೆಬ್ಬಯಕೆ ಬಾಲ್ಯದಿಂದ ಅವನ ಮನದಲ್ಲಿ ಬೇರೂರಿತ್ತು. 14ರ ವಯಸ್ಸಿನಲ್ಲಿ ನಾಗರಿಕ ಅಸಹಕಾರ ಚಳವಳಿಯಲ್ಲಿ ಭಾಗವಹಿಸುತ್ತಿದ್ದಾಗ ಬ್ರಿಟಿಷರು ಅವನನ್ನು ಬಂಧಿಸಿದರು.

ಆದರೆ ಅವನ ಪುಟ್ಟ ಕೈಗಳಿಗೆ ತೊಡಿಸಲು ಅವರ ಬಳಿ ಕೋಳಗಳೇ ಇರಲಿಲ್ಲ. ಅವನನ್ನು ಪೋಲೀಸರು ಎಳೆದೊಯ್ದು ಛಡಿಯೇಟು ಕೊಟ್ಟರು. ತನ್ನ ಮೇಲೆ ಬೀಳುತ್ತಿದ್ದ ಏಟಿನ ಪ್ರಹಾರಕ್ಕೆ ರಕ್ತ ಸುರಿಯುತ್ತಿದ್ದರೂ ವಿಚಲಿತನಾಗದ ಆ ಬಾಲಕ “ಭಾರತ್ ಮಾತಾ ಕೀ ಜೈ” ಎಂದು ಜಯಕಾರ ಹಾಕುತ್ತಲೇ ಇದ್ದ. ಅವನ ಜೀವಿತದ ಧ್ಯೇಯ ಆಜಾದಿ, ಅಂದರೆ ಸ್ವಾತಂತ್ರ್ಯ ಪಡೆಯುವ ಹಂಬಲ. ತನ್ನ ದೇಶವನ್ನು ಸ್ವತಂತ್ರಗೊಳಿಸುವ ಸಂಕಲ್ಪದಿಂದ ಚಂದ್ರಶೇಖರ ತಿವಾರಿ “ಆಜಾದ್” ಆಗಿ ಬದಲಾದ.

“ಆಜಾದ್ ಹೀ ರಹೇ ಹೈ… ಆಜಾದ್ ಹೀ ರಹೇಂಗೇ… ನಾವು ಸ್ವತಂತ್ರರು… ಸ್ವತಂತ್ರರಾಗಿಯೇ ಬದುಕುತ್ತೇವೆ!” ಎಂದು ಸಾರಿದ ಧೀಮಂತ ಸಾಹಸಿ ಚಂದ್ರಶೇಖರ ಆಜಾದ್. ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿ ಬೆಳೆದು ಬನಾರಸ್‍ನಲ್ಲಿ ಶಿಕ್ಷಣ ಪಡೆದ. ಅವನ ವಾಕ್ಚಾತುರ್ಯ, ಕಾರ್ಯವೈಖರಿ, ಸಾಹಸ ಪ್ರವೃತ್ತಿ ಮತ್ತು ಉತ್ತಮ ನಾಯಕತ್ವದ ಗುಣಗಳು ಅಪಾರವಾಗಿದ್ದವು. ಇದೇ ಸ್ಥೈರ್ಯದಿಂದ ಮುಂದೆ ಕ್ರಾಂತಿಕಾರೀ ಸಂಘಟನೆ ಹಿಂದೂಸ್ಥಾನ್ ರಿಪಬ್ಲಿಕ್ ಅಸೋಸಿಯೇಶನ್ (ಎಚ್‌.ಎಸ್.ಆರ್.ಏ) ಕೇಂದ್ರಬಿಂದುವಾದನು. ಭಗತ್ ಸಿಂಗ್, ರಾಜಗುರು ಮತ್ತು ಸುಖದೇವರ ಒಡನಾಟದೊಂದಿಗೆ ಸಂಘಟನೆಯಲ್ಲಿ ಹೆಚ್ಚು ಕಾರ್ಯಪ್ರವೃತ್ತನಾದನು. ಕಾಕೋರಿಯ ರೈಲಿನ ಘಟನೆಯಲ್ಲಿ ಕ್ರಾಂತಿಕಾರಿಗಳು ಸರ್ಕಾರದ ಹಣವನ್ನು ಅಪಹರಿಸಿದ ನಂತರ ಅವರ ಚಟುವಟಿಕೆಗಳ ಮೇಲೆ ಬ್ರಿಟಿಷ್ ಅಧಿಕಾರಿಗಳು ಗಮನವಿಟ್ಟರು.

ರಹಸ್ಯವಾಗಿ ಸಂಘಟನೆಯ ಕಾರ್ಯಾಚರಣೆಗಳು ನಡೆಯುತ್ತಿದ್ದವು.ಅವರು ಅತ್ಯಂತ ಅವಶ್ಯಕವಾಗಿದ್ದ ಬಾಂಬ್ ತಯಾರಿಕೆಗಾಗಿ ಹಣ ಸಂಗ್ರಹಣೆಯಲ್ಲಿ ತೊಡಗಿದ್ದರು. ಇನ್ನೊಂದೆಡೆ ಸ್ಯಾಂಡರ್ಸ್ ಕೊಲೆ ಮತ್ತು ಬಾಂಬ್ ಸ್ಫೋಟದ ಘಟನೆಯಲ್ಲಿ ಭಗತ್ ಮತ್ತು ಸಂಗಡಿಗರ ಮೇಲೆ ಆಪಾದನೆ ಹಾಗೂ ಬಂಧನದೊಂದಿಗೆ ವಿಚಾರಣೆ ನಡೆದಿತ್ತು. ಭಾರತದಲ್ಲಿ ಅಧಿರಾಜ್ಯದ (ಡೊಮೀನಿಯನ್ ಸ್ಟೇಟಸ್) ಘೋಷಣೆಗಾಗಿ ಬ್ರಿಟಿಷರು ವೈಸ್‍ರಾಯ್‍ನನ್ನು ಭಾರತಕ್ಕೆ ಕಳುಹಿಸಿದ್ದರು. ಅವನು ಲಾಹೋರ್ ಅಧಿವೇಶನದಲ್ಲಿ ಪಾಲ್ಗೊಂಡು ಘೋಷಣೆ ನೀಡುವವನಿದ್ದ. ಬ್ರಿಟಿಷರು ಭಾರತೀಯರ ಮೇಲೆಸಗಿರುವ ದೌರ್ಜನ್ಯ ಮತ್ತು ಬಲಿದಾನಿಗಳ ತ್ಯಾಗಕ್ಕೆ ಶಾಂತಿಯಿಂದ ಕೂಡಿದ ಪ್ರತಿಭಟನೆಯಿಂದ ಫಲವಿಲ್ಲ ಎಂದು ಮನಗಂಡಿದ್ದರು.

ಆಜಾದ್ ಮತ್ತವನ ಸಹಚರರು ಅಧಿವೇಶನಕ್ಕೆ ಬರಲಿರುವ ವೈಸ್‍ರಾಯ್‍ನನ್ನು ಮುಗಿಸುವ ಆಲೋಚನೆ ಮಾಡಿದ್ದರು. ವೈಸ್‍ರಾಯ್ ಪಯಣಿಸುತ್ತಿದ್ದ ರೈಲು ನಿಜಾಮುದ್ದೀನ್‍ನಿಂದ ಹೊರಟಿತ್ತು. ಡಿಸೆಂಬರ್ ತಿಂಗಳ ಚಳಿಯಲ್ಲಿ ಸರಿರಾತ್ರಿ ರೈಲು ಹಳಿಗಳ ಮೇಲೆ ಸರಿಯಾಗಿ ವೈಸ್‍ರಾಯ್ ಕುಳಿತಿದ್ದ ಬೋಗಿಗೆ ಬಾಂಬ್ ಸಿಡಿಸಲು ಗುರಿಯಿಟ್ಟಿದ್ದರು. ದುರದೃಷ್ಟವಶಾತ್ ಹಿಮದ ಇರುಳಲ್ಲಿ ಸರಿಯಾಗಿ ರೈಲು ಗೋಚರಿಸದ ಕಾರಣ ಅವನ ಪಕ್ಕದ ಬೋಗಿ ಸಿಡಿಯಿತು.
ವೈಸ್‍ರಾಯ ಅಪಾಯದಿಂದ ಪಾರಾದ. ನಿರಾಶರಾದ ಆಜಾದ್ ಮತ್ತವನ ಸ್ನೇಹಿತರು ಮುಂದಿನ ಯೋಜನೆಗೆ ಸಿದ್ಧರಾದರು. ಬಾಂಬ್ ಸ್ಫೋಟದ ಸುದ್ದಿ ಎಲ್ಲೆಡೆ ಮಿಂಚಿನಂತೆ ಹರಡಿತು. ಲಾಹೋರ್ ಅಧಿವೇಶನದಲ್ಲಿ ಚರ್ಚೆಗೆ ಗ್ರಾಸವಾಯಿತು. “ನಿಜವಾದ ಸತ್ಯಾಗ್ರಹವೆಂದರೆ ಸತ್ಯಕ್ಕೆ ಆಗ್ರಹ.

ಭಾರತ ಸ್ವತಂತ್ರವಾಗಬೇಕೆಂಬುದು ಸತ್ಯ”, ಸ್ವಾತಂತ್ರಕ್ಕಾಗಿ ನಮ್ಮ ಬಲಿದಾನದ ಅಗತ್ಯವಿದೆ ಎಂದು “ಬಾಂಬ್‍ಗಳ ಸಿದ್ಧಾಂತ” ಎನ್ನುವ ಬರಹದ ಮೂಲಕ ಕ್ರಾಂತಿಕಾರಿಗಳು ಸಾರಿದರು. ಆಜಾದ್ ಹೀ ರಹೇ ಹೈ, ಆಜಾದ್ ಹೀ ರಹೇಂಗೇ ಎಂದು ಆಜಾದ್ ಸಾರಿದನು. ಬ್ರಿಟಿಷರ ಕೈಗೆ ಸಿಗದೆ ತನ್ನ ರಹಸ್ಯ ಕಾರ್ಯದಲ್ಲಿ ತೊಡಗಿದ್ದ. ಬ್ರಿಟಿಷರು ಅವನ ಚಟುವಟಿಕೆಗಳ ಮೇಲೆ ಕಣ್ಣಿಟ್ಟರು. ದೆಹಲಿಯಲ್ಲಿ ಸಾಬೂನಿನ ಕಾರ್ಖಾನೆಯೊಂದರಲ್ಲಿ ರಹಸ್ಯವಾಗಿ ಬಾಂಬ್‍ಗಳ ತಯಾರಿಕೆ ನಡೆದಿತ್ತು.

ಇತ್ತ ಭಾರತದಲ್ಲಿ ಪಂಡಿತ್ ನೆಹರೂ, ಆಚಾರ್ಯ ಕೃಪಲಾನಿ ಮುಂತಾದ ನಾಯಕರು ಆಜಾದ್‍ನ ತಾರ್ಕಿಕ ಆಲೋಚನೆಗಳನ್ನು ಅನುಮೋದಿಸುತ್ತಿದ್ದರು. ಮುಂದೆ ನಡೆಯಲಿರುವ ದುಂಡು ಮೇಜಿನ ಅಧಿವೇಶನಕ್ಕೆ ಅವನನ್ನು ಕಳುಹಿಸುವ ಆಲೋಚನೆಯೂ ಇತ್ತು. ಭಗತ್ ಸಿಂಗ್ ಮತ್ತು ಸಂಗಡಿಗರು ಬ್ರಿಟಿಷರ ಸೆರೆಯಾಗಿದ್ದರು.
ಆಜಾದನಿಗೆ ಸಂಘಟನೆಯ ಜವಾಬ್ದಾರಿ ಹೆಚ್ಚಾಗಿತ್ತು. ಆಜಾದ್‍ನನ್ನು ಜೀವಂತವಾಗಿ ಸೆರೆಹಿಡಿಯಬೇಕು, ಸಾಧ್ಯವಾಗದಿದ್ದರೆ ಕೊಲ್ಲಬೇಕು ಎಂದು ಬ್ರಿಟಿಷ್ ಸರಕಾರ ನಿರ್ಧರಿಸಿತ್ತು. ಆಜಾದ್ ಸ್ನೇಹಿತ ಯಶಪಾಲ್ ಮತ್ತು ಸುರೇಂದ್ರ ಪಾಂಡೇ ಸಂಘಟನೆಯನ್ನು ರಾಜಕೀಯವಾಗಿ ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ರಷ್ಯಾ ತೆರಳುವವರಿದ್ದರು.

ಆದರೆ ವಿಧಿಲಿಖಿತ ಬೇರೆಯೇ ಆಗಿತ್ತು. 27 ಫೆಬ್ರವರಿ, 1931ರಂದು ಅಲಹಾಬಾದಿನ ಆಲ್ಫ್ರೆಡ್ ಪಾರ್ಕಿನಲ್ಲಿ ತನ್ನ ಸಹಚರರಾದ ಯಶಪಾಲ್ ಮತ್ತು ಸುರೇಂದ್ರ ಪಾಂಡೆ ಅವರೊಂದಿಗೆ ರಹಸ್ಯ ಸಮಾಲೋಚನೆ ನಡೆಯುತ್ತಿತ್ತು. ಮುಂದಿನ ಯೋಜನೆಯ ನಿರ್ಧಾರದ ನಂತರ ಯಶಪಾಲ್ ಮತ್ತು ಸುರೇಂದ್ರ ಪಾಂಡೆ ಹೊರಡಲನುವಾದರು. ಆಜಾದ್ ಸ್ನೇಹಿತ ಸುಖದೇವ ರಾಜ್ ಅಲ್ಲಿಗೆ ಬಂದ. ಅವರ ಪರಿಚಯದ ವೀರ ಭದ್ರ ತಿವಾರಿ ಆಜಾದ್‍ನ ಇರುವಿಕೆಯ ಕುರಿತು ಪೋಲಿಸರಿಗೆ ಮಾಹಿತಿ ನೀಡಿದ. ಪೋಲೀಸ್ ಮುಖ್ಯಸ್ಥ ಹಾಲಿನ್ಸ್ ಎಲ್ಲಿಯೂ ತಪ್ಪಿಸಿಕೊಳ್ಳದಂತೆ ಪಾರ್ಕನ್ನು ಸುತ್ತುವರಿಯಲು ತನ್ನವರಿಗೆ ಆದೇಶ ನೀಡಿದ.

ಜಾಲದ ಸುಳಿವು ಸಿಕ್ಕ ಕೂಡಲೇ ತನ್ನ ಸ್ನೇಹಿತ ಸುಖದೇವ ರಾಜ್‍ನನ್ನು ಅಲ್ಲಿಂದ ತಪ್ಪಿಸಿಕೊಂಡು ಹೋಗಲು ತಿಳಿಸಿದ. ಆಜಾದ್ ತನ್ನ ಬಳಿಯಿದ್ದ ಎರಡೂ ರಿವಾಲ್ವರ್‌ಗಳನ್ನು ಎರಡೂ ಕೈಯಲ್ಲಿ ಹಿಡಿದ ಒಂದೇ ಸಮನೆ ಪೋಲೀಸರ ಮೇಲೆ ಗುಂಡಿನ ಮಳೆಗೆರೆದ. ಅವನ ನಿಶ್ಚಿತ ಗುರಿಯನ್ನೂ ಮತ್ತು ರಿವಾಲ್ವರನ್ನು ಬಳಸಿದ ಚಾಕಚಕ್ಯತೆಯನ್ನು ಕಂಡು ಬ್ರಿಟಿಷ್ ಅಧಿಕಾರಿ ಹಾಲಿನ್ಸ್ ದಂಗುಬಡಿದಂತಾದ ಕೆಲವೇ ಕ್ಷಣಗಳಲ್ಲಿ ಅವನ ಸಮೀಪಕ್ಕೆ ಪೋಲಿಸರು ಬರಲಾರಂಭಿಸಿದರು. ಅವನ ಮೇಲೆ ಗುಂಡು ಹಾರಿಸಲು ಅನುವಾದರು. ತನ್ನ ರಿವಾಲ್ವರಿನಲ್ಲಿದ್ದ ಕೊನೆಯ ಗುಂಡನ್ನು ಸರಿಯಾಗಿ ತನ್ನ ಹಣೆಯ ಮೇಲೆ ಗುರಿಯಿಟ್ಟ. ಸಮಾಧಾನದ ಉಸಿರೆಳೆದು ತಾಯಿ ಭಾರತಿಯನ್ನು ನೆನೆದು ಭೂಮಿಗೆ ನಮಸ್ಕರಿಸಿದ. ಮಣ್ಣನ್ನು ಕಣ್ಣಿಗೊತ್ತಿಕೊಂಡು ನಿಧಾನವಾಗಿ ಟ್ರಿಗರನ್ನು ಒತ್ತಿದ.

ಇದನ್ನೂ ಓದಿ: Chandra Shekhar Azad: ಸ್ಮರಣೆ: ಅಪ್ರತಿಮ ಬಲಿದಾನಿ ಚಂದ್ರಶೇಖರ್‌ ಆಜಾದ್

ರಕ್ತದೋಕುಳಿ ಹರಿಯಿತು ಉಸಿರು ನಿಂತರೂ ಅವನ ಮುಖದ ಮಂದಹಾಸ ಮಾತ್ರ ಹಾಗೆಯೇ ಇತ್ತು. ಬೆಳಕು ಹರಿದು ಬೆಳಗಾದ ಮೇಲೆ ವಿಚಾರ ತಿಳಿದು ಸಾವಿರಾರು ಸಂಖ್ಯೆಯಲ್ಲಿ ಪಾರ್ಕಿನ ಬಳಿ ಜನ ಸೇರಿದರು. ಬ್ರಿಟಿಷ್ ಪೋಲೀಸರ ಆಜ್ಞೆಯಿಂದಾಗಿ ಅಂತಿಮ ದರ್ಶನ ಪಡೆಯಲು ಯಾರಿಗೂ ಆಗಲಿಲ್ಲ. ಗಂಗೆಯ ದಡದಲ್ಲಿ ಅವನ ಅಂತ್ಯಕ್ರಿಯೆ ರಹಸ್ಯವಾಗಿ ನಡೆಯಿತು. ಬ್ರಿಟಿಷರ ಭಯದಿಂದ ದೂರದಲ್ಲೆಲ್ಲೋ ನಿಂತು ಜನರು ಅಶ್ರುತರ್ಪಣ ನೀಡಿದರು. ಅವನ ಬಲಿದಾನದಿಂದ ಆಲ್ಫ್ರೆಡ್ ಪಾರ್ಕ್ “ಆಜಾದ್” ಉದ್ಯಾನವನ ಎಂದು ಹೆಸರಾಯಿತು. “ಕೊನೆಯ ಉಸಿರಿನವರೆಗೂ ಬ್ರಿಟಿಷರು ಈ ಕೈಗಳಿಗೆ ಕೋಳ ತೊಡಿಸಲಾರರು. ನನ್ನ ಕೈಯಲ್ಲಿ ಎಂಟು ಗುಂಡುಗಳಿರುವ ರಿವಾಲ್ವರ್ ಮತ್ತು ಜೇಬಿನಲ್ಲಿ ಇನ್ನೆಂಟು ಗುಂಡುಗಳು ಸದಾ ಜೊತೆಗಿರಬೇಕು.” “ಸೆರೆಯಾಗುವ ಬದಲು ಸಾಯುವ ಸಮಯ ಬಂದರೆ ಅವರನ್ನು ಸುಟ್ಟು ಕೊನೆಯದೊಂದನ್ನು ನನ್ನ ತಲೆಗೆ ಗುರಿಯಿಟ್ಟು ಹೊಡೆದುಕೊಂಡು ಸಾಯಬೇಕು..” ಎಂದು ಪ್ರತಿಜ್ಞೆ ಮಾಡಿದ್ದ ಆಜಾದ್ ನುಡಿದಂತೆ ನಡೆದುಕೊಂಡ ಮಹಾನ್ ಬಲಿದಾನಿ.

Exit mobile version