Site icon Vistara News

Chandrababu Naidu: ಚಂದ್ರಬಾಬು ನಾಯ್ಡು ಮೇಲೆ ಬಿತ್ತು ಮತ್ತೊಂದು ಚಾರ್ಜ್ ಶೀಟ್; ಯಾವ ಪ್ರಕರಣ?

chandrababu naidu

chandrababu naidu

ನವದೆಹಲಿ: 114 ಕೋಟಿ ರೂ.ಯ ಎಪಿ ಫೈಬರ್ ನೆಟ್ ಹಗರಣಕ್ಕೆ ಸಂಬಂಧಿಸಿದಂತೆ (AP Fibernet Scam case) ಆಂಧ್ರ ಪ್ರದೇಶದ ಸಿಐಡಿ ಪೊಲೀಸರು (Crime Investigation Departmen) ಮಾಜಿ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥ ಎನ್‌.ಚಂದ್ರಬಾಬು ನಾಯ್ಡು (Chandrababu Naidu) ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದೆ. ಶುಕ್ರವಾರ ವಿಜಯವಾಡ ಎಸಿಬಿ ನ್ಯಾಯಾಲಯಕ್ಕೆ ಸಿಐಡಿ ಸಲ್ಲಿಸಿರುವ ಜಾರ್ಜ್‌ಶೀಟ್‌ನಲ್ಲಿ ಎ 1 ಆಗಿ ಚಂದ್ರಬಾಬು ನಾಯ್ಡು ಅವರ ಹೆಸರನ್ನು ಸೇರಿಸಲಾಗಿದೆ.

ಚಂದ್ರಬಾಬು ನಾಯ್ಡು ಅವರಲ್ಲದೆ ಹೈದರಾಬಾದ್‌ ನೆಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿ.ಹರಿಕೃಷ್ಣ ಪ್ರಸಾದ್ ಮತ್ತು ಐಆರ್‌ಟಿಎಸ್‌ ಅಧಿಕಾರಿ ಕೆ.ಸಾಂಬಶಿವ ರಾವ್ ಅವರನ್ನು ಇತರ ಆರೋಪಿಗಳೆಂದು ಸಿಐಡಿ ಹೆಸರಿಸಿದೆ. ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಇಂಧನ, ಮೂಲಸೌಕರ್ಯ ಮತ್ತು ಹೂಡಿಕೆ ಇಲಾಖೆಯ ಖಾತೆಯನ್ನು ಹೊಂದಿದ್ದರು. ಈ ವೇಳೆ ಫೈಬರ್ ನೆಟ್ ಯೋಜನೆಯನ್ನು ಕಾರ್ಯಗತಗೊಳಿಸಲು ಅವರು ವೈಯಕ್ತಿಕವಾಗಿ ಶಿಫಾರಸು ಮಾಡಿದ್ದಾರೆ ಎಂದು ಸಿಐಡಿ ಹೇಳಿದೆ. ಅಲ್ಲದೆ 2014-2019ರ ಟಿಡಿಪಿ ಸರ್ಕಾರದ ಅವಧಿಯಲ್ಲಿ ಟೆಂಡರ್ ತಿರುಚುವಿಕೆ ಪ್ರಕರಣವೂ ವರದಿಯಾಗಿದೆ ಎಂದು ತಿಳಿಸಿದೆ.

330 ಕೋಟಿ ರೂ.ಯ ಎಪಿ ಫೈಬರ್ ನೆಟ್ ಯೋಜನೆಯಲ್ಲಿ ಚಂದ್ರಬಾಬು ಅವರಿಂದಾಗಿ ಸರ್ಕಾರದ ಖಜಾನೆಗೆ 114 ಕೋಟಿ ರೂ. ನಷ್ಟವಾಗಿದೆ ಎಂದು ಸಿಐಡಿ ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಎಪಿ ಫೈಬರ್ ನೆಟ್ ಯೋಜನೆಯ ಹಂತ 1ರ ಕೆಲಸದ ಆದೇಶವನ್ನು ನೆಚ್ಚಿನ ಕಂಪನಿಗೆ ಹಂಚಿಕೆ ಮಾಡಲು ಟೆಂಡರ್ ಪ್ರಕ್ರಿಯೆಯನ್ನು ತಿರುಚಲಾಗಿದೆ ಎಂದು ಸಿಐಡಿ ಹೇಳಿದೆ. ಟೆಂಡರ್ ಹಂಚಿಕೆಯಿಂದ ಹಿಡಿದು ಒಟ್ಟು ಯೋಜನೆಯನ್ನು ಪೂರ್ಣಗೊಳಿಸುವವರೆಗೆ ಹಲವು ಅಕ್ರಮಗಳು ನಡೆದಿವೆ ಎಂದೂ ತಿಳಿಸಿದೆ.

ಹರಿ ಕೃಷ್ಣ ಪ್ರಸಾದ್ ಅವರನ್ನು ವಿವಿಧ ಟೆಂಡರ್ ಮೌಲ್ಯಮಾಪನ ಸಮಿತಿಗಳಿಗೆ ಸೇರಿಸಲು, ಟೆರಾಸಾಫ್ಟ್ ಪ್ರೈವೇಟ್ ಲಿಮಿಟೆಡ್‌ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸುವುದನ್ನು ತಡೆಯಲು ಮತ್ತು ಅಂತಿಮವಾಗಿ ಅದೇ ಕಂಪೆನಿಗೆ ಟೆಂಡರ್ ನೀಡುವಂತೆ ಚಂದ್ರಬಾಬು ನಾಯ್ಡು ಹಿರಿಯ ಸರ್ಕಾರಿ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು ಎಂದು ಸಿಐಡಿ ತಿಳಿಸಿದೆ. ಸದ್ಯ ಇವರ ವಿರುದ್ಧ ಐಪಿಸಿ ಸೆಕ್ಷನ್ 166, 167, 418, 465, 468, 471, 409, 506 ಮತ್ತು 120 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: Chandrababu Naidu: ಚಂದ್ರಬಾಬು ನಾಯ್ಡುವಿಗೆ ಕಣ್ಣಿನ ಚಿಕಿತ್ಸೆಗಾಗಿ ಜಾಮೀನು ನೀಡಿದ ಆಂಧ್ರ ಹೈಕೋರ್ಟ್‌

ಮಧ್ಯಂತರ ಜಾಮೀನು

ಕೌಶಲ್ಯಾಭಿವೃದ್ಧಿ ಪ್ರಕರಣದಲ್ಲಿ ಬಂಧಿತರಾಗಿ ಜೈಲುಪಾಲಾಗಿದ್ದ ಚಂದ್ರಬಾಬು ನಾಯ್ಡು ಅವರಿಗೆ ಆಂಧ್ರಪ್ರದೇಶ ಹೈಕೋರ್ಟ್‌ ಇತ್ತೀಚೆಗೆ 4 ವಾರಗಳ ಮಧ್ಯಂತರ ಜಾಮೀನು ನೀಡಿತ್ತು. ನಾಯ್ಡು ಪರ ವಕೀಲರು, ಮಾಜಿ ಮುಖ್ಯಮಂತ್ರಿ ಅವರು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಹೀಗಾಗಿ ಜಾಮೀನು ಮಂಜೂರಾಗಿತ್ತು. ನಾಯ್ಡು ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದಿರುವ 3,300 ಕೋಟಿ ರೂ. ಆಂಧ್ರಪ್ರದೇಶ ಕೌಶಲ್ಯ ಅಭಿವೃದ್ಧಿ ನಿಗಮ (ಎಪಿಎಸ್‌ಎಸ್‌ಡಿಸಿ) ಹಗರಣಕ್ಕೆ ಸಂಬಂಧಿಸಿದಂತೆ 2023ರ ಸೆಪ್ಟೆಂಬರ್ 9ರಂದು ಅವರನ್ನು ಬಂಧಿಸಲಾಗಿತ್ತು.  ಇದೀಗ ಅವರಿಗೆ ಇನ್ನೊಂದು ಪ್ರಕರಣ ಸುತ್ತಿಕೊಂಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version