ಅಮರಾವತಿ: ತೆಲುಗುದೇಶಂ ಪಕ್ಷದ (TDP) ಮುಖ್ಯಸ್ಥ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಅವರ 31 ತಿಂಗಳ ಶಪಥವು ಶುಕ್ರವಾರ ಅಂತ್ಯಗೊಂಡಿದೆ. “ನಾನು ಮುಖ್ಯಮಂತ್ರಿಯಾಗಿಯೇ ಮತ್ತೆ ವಿಧಾನಸಭೆ ಪ್ರವೇಶಿಸುವೆ” ಎಂಬುದಾಗಿ 31 ತಿಂಗಳ ಹಿಂದೆ ಪ್ರತಿಜ್ಞೆ ಮಾಡಿ ವಿಧಾನಸಭೆಯಿಂದ ಹೊರನಡೆದಿದ್ದ ಚಂದ್ರಬಾಬು ನಾಯ್ಡು, ಈಗ ಚುನಾವಣೆಯಲ್ಲಿ ಗೆದ್ದು, ಮುಖ್ಯಮಂತ್ರಿಯಾಗಿಏ ಶುಕ್ರವಾರ (ಜೂನ್ 21) ವಿಧಾನಸಭೆ ಪ್ರವೇಶಿಸಿದ್ದಾರೆ.
ಆಂದ್ರಪ್ರದೇಶದಲ್ಲಿ ಟಿಡಿಪಿ ಸರ್ಕಾರ ರಚನೆಯಾಗಿದ್ದು, ನೂತನ ಸರ್ಕಾರ ರಚನೆಯಾದ ಬಳಿಕ ಮೊದಲ ಅಧಿವೇಶನ ನಡೆಯಿತು. ಚಂದ್ರಬಾಬು ನಾಯ್ಡು ಅವರು ವಿಧಾನಸಭೆ ಪ್ರವೇಶಿಸುತ್ತಲೇ ಎಲ್ಲ ಸದಸ್ಯರು ಎದ್ದು ನಿಂತು ಗೌರವ ಸಲ್ಲಿಸಿದರು. ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಇದಾದ ಬಳಿಕ ಅವರು ಮುಖ್ಯಮಂತ್ರಿಯಾಗಿ ಮೊದಲ ಭಾಷಣ ಮಾಡಿದರು. ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುವೆ ಎಂಬುದಾಗಿ ತಿಳಿಸಿದರು. ಇದರೊಂದಿಗೆ 31 ತಿಂಗಳ ಹಿಂದೆ ಮಾಡಿದ ಪ್ರತಿಜ್ಞೆಯನ್ನು ಅವರು ಈಡೇರಿಸಿದ್ದಾರೆ.
#WATCH | Hon'ble Chief Minister Nara Chandrababu Naidu Garu takes oath as MLA as Assembly session commences. pic.twitter.com/7MlbbqtQ5A
— CMO Andhra Pradesh (@AndhraPradeshCM) June 21, 2024
31 ತಿಂಗಳ ಹಿಂದೆ ಏನಾಗಿತ್ತು?
ಅದು 2021ರ ನವೆಂಬರ್ 19. ವಿಧಾನಸಭೆಯಲ್ಲಿ ಚಂದ್ರಬಾಬು ನಾಯ್ಡು ಅವರು ಮಾತನಾಡುತ್ತಿದ್ದರು. ಆಗ ಅವರು ಪ್ರತಿಪಕ್ಷ ನಾಯಕರಾಗಿದ್ದರು. ಇದೇ ವೇಳೆ ಆಡಳಿತಾರೂಢ ವೈಎಸ್‌ಆರ್‌ಸಿಪಿ ಸದಸ್ಯರು ಚಂದ್ರಬಾಬು ನಾಯ್ಡು ಅವರ ಕುಟುಂಬಸ್ಥರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರು ಎಂದು ಅವರು ಆರೋಪಿಸಿದರು. ನನ್ನ “ಹೆಂಡತಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ನನ್ನ ಕುಟುಂಬಸ್ಥರಿಗೆ ವೈಎಸ್‌ಆರ್‌ಸಿಪಿ ಸದಸ್ಯರು ಅವಮಾನ ಮಾಡಿದ್ದಾರೆ. ನಾನು ಮತ್ತೆ ಸಿಎಂ ಆಗಿಯೇ ವಿಧಾನಸಭೆ ಪ್ರವೇಶಿಸುತ್ತೇನೆ” ಎಂಬುದಾಗಿ ಚಂದ್ರಬಾಬು ನಾಯ್ಡು ಪ್ರತಿಜ್ಞೆ ಮಾಡಿದ್ದರು. ಕಣ್ಣಿರು ಹಾಕುತ್ತಲೇ ಅವರು ವಿಧಾನಸಭೆಯಿಂದ ಹೊರನಡೆದಿದ್ದರು. ಅದಾದ ಬಳಿಕ ಅವರು ಒಂದು ದಿನವೂ ವಿಧಾನಸಭೆಗೆ ಕಾಲಿಟ್ಟಿರಲಿಲ್ಲ.
ಆಂಧ್ರ ಪ್ರದೇಶ ವಿಧಾನ ಸಭೆಯ 175 ಸೀಟುಗಳ ಪೈಕಿ ಎನ್‌ಡಿಎ 164 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಈ ಪೈಕಿ ಟಿಡಿಪಿ 135, ಜನಸೇನಾ ಪಾರ್ಟಿ 21 ಮತ್ತು ಬಿಜೆಪಿ 8 ಕಡೆ ಗೆದ್ದಿದೆ. ಚಂದ್ರಬಾಬು ನಾಯ್ಡು 2014ರಲ್ಲಿ ವಿಭಜಿತ ಆಂಧ್ರಪ್ರದೇಶದ ಮೊದಲ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದರು. ಅವರು 2019ರ ಚುನಾವಣೆಯಲ್ಲಿ ಸೋತು 2024ರವರೆಗೆ ವಿರೋಧ ಪಕ್ಷದ ನಾಯಕರಾಗಿದ್ದರು. ಇದೀಗ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಮರಳಿದ್ದಾರೆ.
ಇದನ್ನೂ ಓದಿ: Tirupati Temple : ತಿರುಪತಿ ದೇಗುಲವನ್ನು ಹಿಂದೂ ನಂಬಿಕೆಯಂತೆ ಪವಿತ್ರಗೊಳಿಸುವೆ; ಸಿಎಂ ಚಂದ್ರಬಾಬು ನಾಯ್ಡು ಶಪಥ