ನವದೆಹಲಿ: ಆಂಧ್ರಪ್ರದೇಶದ ತೆಲುಗುದೇಶಂ ಪಕ್ಷದ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು (Chandrababu Naidu) ಅವರ ಅದೃಷ್ಟವು ಖುಲಾಯಿಸಿದೆ. ಆಂಧ್ರಪ್ರದೇಶದ (Andhra Pradesh) 175 ವಿಧಾನಸಭೆ ಕ್ಷೇತ್ರಗಳ ಪೈಕಿಯು ಟಿಡಿಪಿ 135 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಹಾಗಾಗಿ, ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿಯಾಗಲಿದ್ದಾರೆ. ಇನ್ನು, ಲೋಕಸಭೆಯ 25 ಕ್ಷೇತ್ರಗಳ ಪೈಕಿ 16ರಲ್ಲಿ ಗೆಲುವು ಸಾಧಿಸಿದ್ದು, ಕೇಂದ್ರದಲ್ಲೂ ಕಿಂಗ್ ಮೇಕರ್ ಆಗಿದ್ದಾರೆ. ಅಷ್ಟೇ ಅಲ್ಲ, ಚಂದ್ರಬಾಬು ನಾಯ್ಡು ಅವರ ಕುಟುಂಬವು ಕಳೆದ 5 ದಿನಗಳಲ್ಲಿಯೇ 870 ಕೋಟಿ ರೂ. ಗಳಿಸಿದೆ. ಅಧಿಕಾರ, ಹಣ, ಗೌರವ, ಹುದ್ದೆ… ಹೀಗೆ ಒಂದೇ ವಾರದಲ್ಲಿ ಚಂದ್ರಬಾಬು ನಾಯ್ಡು ಅದೃಷ್ಟವು ಸಕಲ ರೀತಿಯಲ್ಲಿ ಬದಲಾಗಿದೆ.
ಹೌದು, ಚಂದ್ರಬಾಬು ನಾಯ್ಡು ಅವರ ಪಕ್ಷವು ಐತಿಹಾಸಿಕ ಗೆಲುವು ದಾಖಲಿಸಿದ ಕಾರಣ ಚಂದ್ರಬಾಬು ನಾಯ್ಡು ಅವರ ಕುಟುಂಬದ ಒಡೆತನದ ಹೆರಿಟೇಟ್ ಫುಡ್ಸ್ (Heritage Foods) ಕಂಪನಿಯ ಷೇರುಗಳ ಮೌಲ್ಯವು ಚುನಾವಣೆ ಫಲಿತಾಂಶದ ಬಳಿಕ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದಾಗಿ ಚಂದ್ರಬಾಬು ನಾಯ್ಡು ಅವರ ಕುಟುಂಬಸ್ಥರು ಕಳೆದ 5 ದಿನಗಳಲ್ಲಿಯೇ 870 ಕೋಟಿ ರೂ. ಗಳಿಸಿದ್ದಾರೆ. ಇದರೊಂದಿಗೆ ಚಂದ್ರಬಾಬು ನಾಯ್ಡು ಅವರ ಕುಟುಂಬದ ಒಟ್ಟು ಆಸ್ತಿಯ ಮೌಲ್ಯುವ 1,319 ಕೋಟಿ ರೂ.ನಿಂದ 2,190 ಕೋಟಿ ರೂ.ಗೆ ಏರಿಕೆಯಾಗಿದೆ.
ನಾಯ್ಡು ಕುಟುಂಬ
ನಾಯ್ಡು ಕುಟುಂಬದ ಪಾಲೆಷ್ಟು?
ಹೆರಿಟೇಜ್ ಫುಡ್ಸ್ ಕಂಪನಿಯಲ್ಲಿ ಚಂದ್ರಬಾಬು ನಾಯ್ಡು ಅವರ ಕುಟುಂಬಸ್ಥರ ಷೇರುಗಳ ಪ್ರಮಾಣವು ಶೇ.35.7ರಷ್ಟಿದೆ. ಚಂದ್ರಬಾಬು ನಾಯ್ಡು ಅವರ ಪತ್ನಿ ಭುವನೇಶ್ವರಿ ಅವರು ಶೇ.24.37, ಪುತ್ರ ಲೋಕೇಶ್ ಶೇ.10.82ರಷ್ಟು ಹಾಗೂ ಸೊಸೆ ಬ್ರಹ್ಮಿಣಿ 0.46ರಷ್ಟು ಷೇರುಗಳನ್ನು ಹೊಂದಿದ್ದಾರೆ. ಚಂದ್ರಬಾಬು ನಾಯ್ಡು ಅವರ ಮೊಮ್ಮಗ ದೇವಾಂಶ್ ಕೂಡ ಡೇರಿ ಕಂಪನಿಯಲ್ಲಿ 0.06ರಷ್ಟು ಷೇರುಗಳನ್ನು ಹೊಂದಿದ್ದಾನೆ.
ಹೆರಿಟೇಜ್ ಫುಡ್ಸ್ ಕಂಪನಿಯನ್ನು 1992ರಲ್ಲಿ ಸ್ಥಾಪನೆ ಮಾಡಲಾಗಿದ್ದು, ಡೇರಿ ಉತ್ಪನ್ನಗಳ ಪೂರೈಕೆಗೆ ಹೆಸರುವಾಸಿಯಾಗಿದೆ. ಹಾಲು, ಹಾಲಿನ ಉತ್ಪನ್ನಗಳಾದ ಮೊಸರು, ತುಪ್ಪ, ಪನೀರ್, ಇಮ್ಯುನಿಟಿ ಮಿಲ್ಕ್ ಸೇರಿ ಹಲವು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ದೇಶದ 11 ರಾಜ್ಯಗಳಲ್ಲಿ ಸುಮಾರು 1.5 ಕೋಟಿ ಮನೆಗಳಲ್ಲಿ ಹೆರಿಟೇಜ್ ಫುಡ್ಸ್ ಕಂಪನಿಯ ಉತ್ಪನ್ನಗಳನ್ನು ಬಳಸಲಾಗುತ್ತದೆ.
ಇದರ ಮಾರುಕಟ್ಟೆ ಬಂಡವಾಳ ಮೊತ್ತವು ಸುಮಾರು 3,700 ಕೋಟಿ ರೂ.ನಿಂದ 6,136 ಕೋಟಿ ರೂ.ಗೆ ಏರಿಕೆಯಾಗಿದೆ. ಚುನಾವಣೆ ಫಲಿತಾಂಶದ ಬಳಿಕ ಕಂಪನಿಯ ಷೇರುಗಳ ಮೌಲ್ಯದಲ್ಲಿ ಶೇ.55ರಷ್ಟು ಏರಿಕೆಯಾಗಿದ್ದು, ಹೂಡಿಕೆದಾರರೂ ಬಂಪರ್ ಲಾಭ ಗಳಿಸಿದ್ದಾರೆ. ಜೂನ್ 7ರಂದು ಹೆರಿಟೇಜ್ ಫುಡ್ಸ್‌ನ ಒಂದು ಷೇರಿನ ಬೆಲೆಯಲ್ಲಿ ಶೇ.10ರಷ್ಟು ಏರಿಕೆಯಾಗಿದ್ದು, ಒಂದು ಷೇರಿನ ಮೌಲ್ಯವು 661 ರೂ. ಆಗಿದೆ. ಜೂನ್ 3ರಂದು ಒಂದು ಷೇರಿನ ಬೆಲೆ 424 ರೂ. ಇತ್ತು.
ಇದನ್ನೂ ಓದಿ: Modi 3.0 Government: ನರೇಂದ್ರ ಮೋದಿ ಮುಂದೆ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಇಟ್ಟಿರುವ ಬೇಡಿಕೆಗಳು ಇಷ್ಟು!