Site icon Vistara News

Chandrayaan 3 : ಬ್ರಿಕ್ಸ್ ಶೃಂಗ ಸಭೆಯಲ್ಲೂ ಚಂದ್ರಯಾನ ಯಶಸ್ಸಿನ ಅಲೆ; ಮೋದಿಗೆ ಅಭಿನಂದನೆಗಳ ಸುರಿಮಳೆ

Ramphosa

ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಬ್ರಿಕ್ಸ್​ ಶೃಂಗ ಸಭೆಯಲ್ಲೂ ಚಂದ್ರಯಾನದ ಯಶಸ್ಸಿನ ಸಂಭ್ರಮ ಅನುರಣಿಸಿದೆ. ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಬುಧವಾರ ಚಂದ್ರಯಾನ -3ರ ಯಶಸ್ಸಿಗಾಗಿ ಭಾರತವನ್ನು ಅಭಿನಂದಿಸಿದ್ದಾರೆ ಹಾಗೂ ಇದು ಬ್ರಿಕ್ಸ್​ಗೆ ಮಹತ್ವದ ಸಂದರ್ಭ ಎಂದು ಕರೆದಿದ್ದಾರೆ.

15ನೇ ಬ್ರಿಕ್ಸ್ ಶೃಂಗಸಭೆಯ ಮುಕ್ತ ಅಧಿವೇಶನದಲ್ಲಿ ಮಾತನಾಡಿದ ರಾಮ್​​ಫೋಸಾ, “ನಾನು ಭಾರತವನ್ನು ಅಭಿನಂದಿಸಲು ಬಯಸುತ್ತೇನೆ, ವಿಶೇಷವಾಗಿ ಬಾಹ್ಯಾಕಾಶ ಸಾಧನೆ ಬಗ್ಗೆ ಅಭಿನಂದನೆಗಳಿವೆ. ಚಂದ್ರಯಾನ -3 ಚಂದ್ರನ ಮೇಲೆ ಇಳಿದಿದ್ದು ನಾವು ನಿಮ್ಮನ್ನು ಅಭಿನಂದಿಸುತ್ತೇವೆ ಎಂದು ಹೇಳಿದ್ದಾರೆ.

ಬ್ರಿಕ್ಸ್ ಕುಟುಂಬವಾಗಿ ಇದು ನಮಗೆ ಒಂದು ಮಹತ್ವದ ಸಂದರ್ಭವಾಗಿದೆ ಮತ್ತು ನಿಮ್ಮೊಂದಿಗೆ ನಾವು ಸಂತೋಷಪಡುತ್ತೇವೆ. ಈ ಮಹಾನ್ ಸಾಧನೆಯ ಸಂತೋಷದಲ್ಲಿ ನಾವು ನಿಮ್ಮೊಂದಿಗೆ ಸೇರುತ್ತೇವೆ ಎಂದು ಅವರು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು ಬ್ರಿಕ್ಸ್ ರಾಷ್ಟ್ರಗಳು ಜಾಗತಿಕ ದಕ್ಷಿಣದ ಹಿತಾಸಕ್ತಿಗಳನ್ನು ಮುನ್ನಡೆಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ಬ್ರಿಕ್ಸ್ ರಾಷ್ಟ್ರಗಳು ಜಾಗತಿಕ ಹಿತಾಸಕ್ತಿಗಳನ್ನು ಮುನ್ನಡೆಸಬೇಕಾಗಿದೆ ಮತ್ತು ಆರ್ಥಿಕ ಪ್ರಗತಿಯನ್ನು ಅಭಿವೃದ್ಧಿಪಡಿಸುವ ಮೂಲಕ ಹವಾಮಾನ ಬದಲಾವಣೆ ಬದ್ಧತೆಗಳನ್ನು ಪ್ರದರ್ಶಿಸಬೇಕಾಗಿದೆ ಎಂದು ಹೇಳಿದ್ದಾರೆ.

ಸಂಘರ್ಷ ಕೊನೆಗೊಳಿಸಿ

ಬ್ರಿಕ್ಸ್ ಒಗ್ಗಟ್ಟಿನಿಂದ ನಿಲ್ಲುವ ಮತ್ತು ಹೆಚ್ಚು ಸಮಾನ ಜಾಗತಿಕ ವ್ಯವಸ್ಥೆಯನ್ನು ಉತ್ತೇಜಿಸಲು ಪ್ರಯತ್ನಿಸುವ ವಿಶ್ವಾಸಾರ್ಹ ಘಟಕವೆಂದು ಸಾಬೀತುಪಡಿಸಿದೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷವನ್ನು ಶಾಂತಿಯುತವಾಗಿ ಕೊನೆಗೊಳಿಸಲು ಹಲವಾರು ಬ್ರಿಕ್ಸ್ ದೇಶಗಳು ಮಾಡುತ್ತಿರುವ ಪ್ರಯತ್ನಗಳಿಗಾಗಿ ನಾವು ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು 15 ನೇ ಬ್ರಿಕ್ಸ್ ಶೃಂಗಸಭೆಯ ಮುಕ್ತ ಪೂರ್ಣ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ರಾಮಫೋಸಾ ಹೇಳಿದರು.

ಸಂಘರ್ಷಗಳನ್ನು ಮಾತುಕತೆಗಳ ಮೂಲಕ ಕೊನೆಗೊಳಿಸುವುದು ಉತ್ತಮ. ಮಾತುಕತೆ, ಮಧ್ಯಸ್ಥಿಕೆ ಮತ್ತು ಸಮಾಲೋಚನೆಯ ಮೂಲಕ ಈ ಸಂಘರ್ಷವನ್ನು ಕೊನೆಗೊಳಿಸುವ ವಿವಿಧ ಪ್ರಯತ್ನಗಳಿಗೆ ಬ್ರಿಕ್ಸ್ ಸದಸ್ಯರು ಬೆಂಬಲ ನೀಡುವುದನ್ನು ಮುಂದುವರಿಸಲಿದೆ ಎಂದು ಹೇಳಿದರು.

ಮೋದಿ, ರಾಮ್​ಫೋಸ ಮಾತುಕತೆ

ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಮತ್ತು ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು ಫಲಪ್ರದ ಸಭೆ ನಡೆಸಿ ವಿವಿಧ ಕ್ಷೇತ್ರಗಳಲ್ಲಿ ಭಾರತ-ದಕ್ಷಿಣ ಆಫ್ರಿಕಾ ಪಾಲುದಾರಿಕೆಯನ್ನು ಬಲಪಡಿಸುವ ಬಗ್ಗೆ ಚರ್ಚಿಸಿದರು.

ಇದನ್ನೂ ಓದಿ : Chandrayaan 3: ಚಂದ್ರಯಾನ 3 ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಸಕ್ಸೆಸ್! ಇತಿಹಾಸ ಸೃಷ್ಟಿಸಿದ ಇಸ್ರೋ

ಪ್ರಧಾನಮಂತ್ರಿ ಅವರು ಜೋಹಾನ್ಸ್ ಬರ್ಗ್ ನಲ್ಲಿ ಅಧ್ಯಕ್ಷ ಸಿರಿಲ್​ ರಾಮ್​ಫೋಸಾ ಅವರೊಂದಿಗೆ ಫಲಪ್ರದ ಸಭೆ ನಡೆಸಿದರು. ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸುವುದು, ಭದ್ರತೆ ಮತ್ತು ಜನರ ನಡುವಿನ ಸಂಪರ್ಕದಂತಹ ವೈವಿಧ್ಯಮಯ ಕ್ಷೇತ್ರಗಳಲ್ಲಿ ಭಾರತ-ದಕ್ಷಿಣ ಆಫ್ರಿಕಾ ಪಾಲುದಾರಿಕೆಯನ್ನು ಬಲಪಡಿಸುವ ಬಗ್ಗೆ ಅವರು ಚರ್ಚಿಸಿದರು ಎಂದು ಪ್ರಧಾನಿ ಕಚೇರಿ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ತಿಳಿಸಿದೆ.

Exit mobile version