ಬೆಂಗಳೂರು: ಶತಕೋಟಿ ಭಾರತೀಯರ ಚಂದ್ರಯಾನದ ಕನಸು ನನಸಾಗಲು ಕ್ಷಣಗಣನೆ ಆರಂಭವಾಗಿದೆ. ಚಂದ್ರಯಾನ-3 (Chandrayaan- 3) ನೌಕೆಯು ಚಂದ್ರನ (Lunar mission) ಸುತ್ತ ತನ್ನ ನಿಗದಿತ ಐದು ಸುತ್ತುಗಳಲ್ಲಿ ಕೊನೆಯ ಸುತ್ತನ್ನು ಪೂರ್ಣಗೊಳಿಸಿದೆ. ಇದರೊಂದಿಗೆ ಚಂದ್ರನಿಗೆ ಭಾರತದ ನೌಕೆ ಇನ್ನಷ್ಟು ಹತ್ತಿರವಾಗಿದೆ. ಅಷ್ಟೇ ಅಲ್ಲ, ಗುರುವಾರ (ಆಗಸ್ಟ್ 17) ನೌಕೆಯಿಂದ ಲ್ಯಾಂಡರ್‌ಅನ್ನು ಬೇರ್ಪಡಿಸುವ ಪ್ರಕ್ರಿಯೆ ನಡೆಯಲಿದ್ದು, ಇದರೊಂದಿಗೆ ಚಂದ್ರಯಾನ-3 ಕೊನೆಯ ಹಂತ ತಲುಪಿದಂತಾಗಿದೆ.
ಚಂದ್ರಯಾನ-3 ಮಿಷನ್‌ಅನ್ನು ಬೆಂಗಳೂರಿನಲ್ಲಿರುವ ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಆ್ಯಂಡ್ ಕಮಾಂಡ್ ನೆಟ್‌ವರ್ಕ್ (ISRO Telemetry, Tracking and Command Network-ISTRAC) ಗಮನಿಸುತ್ತಿದೆ. ಇಸ್ರೋ ವಿಜ್ಞಾನಿಗಳು ಗುರುವಾರ ಪ್ರೊಪಲ್ಶನ್ ಮಾಡ್ಯೂಲ್‌ನಿಂದ ಲ್ಯಾಂಡರ್‌ಅನ್ನು ಬೇರ್ಪಡಿಸಲಿದ್ದಾರೆ. ರೋವರ್‌ಅನ್ನು ಇಟ್ಟುಕೊಂಡು ಲ್ಯಾಂಡರ್ ಸಾಫ್ಟ್‌ಲ್ಯಾಂಡ್ ಆಗುವ ದಿಸೆಯಲ್ಲಿ ಗುರುವಾರದ ಪ್ರಕ್ರಿಯೆಯು ಮಹತ್ವ ಪಡೆದಿದೆ.
ಮುಂದೇನಾಗಲಿದೆ?
ಚಂದ್ರನಿಂದ ಲ್ಯಾಂಡರ್ ಕೇವಲ 163 ಕಿಲೋಮೀಟರ್ ದೂರದಲ್ಲಿದೆ. ಗುರುವಾರ ಲ್ಯಾಂಡರ್ ಬೇರ್ಪಟ್ಟರೆ ಅದರ ವೇಗ ಕಡಿಮೆಯಾಗಲಿದೆ. ಸಾಫ್ಟ್ ಲ್ಯಾಂಡಿಂಗ್ ದೃಷ್ಟಿಯಿಂದ ವೇಗವನ್ನು ಕಡಿಮೆಗೊಳಿಸಲಾಗುತ್ತದೆ. ಹೀಗೆ ನಿಯಮಿತವಾಗಿ ವೇಗ ಕಡಿಮೆಗೊಳಿಸುತ್ತ ವಿಕ್ರಮ್ ಲ್ಯಾಂಡರ್‌ಅನ್ನು ಚಂದ್ರನಿಗೆ ಮತ್ತಷ್ಟು ಸಮೀಪಗೊಳಿಸಲಾಗುತ್ತದೆ. ಆಗಸ್ಟ್ 23ರಂದು ಸಂಜೆ 5.47ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡ್ ಆದರೆ ಭಾರತ ಇತಿಹಾಸ ಸೃಷ್ಟಿಸಲಿದೆ. ಹಾಗಾಗಿ, ಮುಂದಿನ ಪ್ರಕ್ರಿಯೆಗಳು ಕುತೂಹಲ ಕೆರಳಿಸಿವೆ.
ಇದನ್ನೂ ಓದಿ: Aditya L1 Mission: ಚಂದ್ರನ ಬೆನ್ನಲ್ಲೇ ಸೂರ್ಯನ ಅಂಗಳದಲ್ಲಿ ಇತಿಹಾಸ ಬರೆಯಲು ಇಸ್ರೋ ಸಜ್ಜು; ಏನಿದು ಮಿಷನ್?
ಪ್ರೊಪಲ್ಷನ್ ಮಾಡ್ಯೂಲ್ ಸುಮಾರು ಮೂರರಿಂದ ಆರು ತಿಂಗಳ ಕಾಲ ಚಂದ್ರನ ಕಕ್ಷೆಯಲ್ಲಿ ಉಳಿಯಲಿದೆ. ಸ್ಪೆಕ್ಟ್ರೋ-ಪೋಲಾರಿಮೆಟ್ರಿ ಆಫ್ ಹ್ಯಾಬಿಟಬಲ್ ಪ್ಲಾನೆಟ್ ಅರ್ಥ್ (SHAPE) ಅನ್ನು ಬಳಸಿಕೊಂಡು ಚಂದ್ರನ ಕಕ್ಷೆಯಿಂದ ಭೂಮಿಯ ಸ್ಪೆಕ್ಟ್ರೋ-ಪೋಲಾರಿಮೆಟ್ರಿಕ್ ಚಹರೆಗಳನ್ನು ಅಧ್ಯಯನ ಮಾಡುತ್ತದೆ. ಎಕ್ಸೋಪ್ಲಾನೆಟ್‌ಗಳು ಮತ್ತು ಅವುಗಳ ಮೇಲೆ ಜೀವದ ಚಿಹ್ನೆಗಳ ಹುಡುಕಾಟದಲ್ಲಿ ಸಹಾಯ ಮಾಡಲು ಅನುಕೂಲವಾಗುವಂತೆ ಭೂಮಿಯ ಸ್ಪೆಕ್ಟ್ರಮ್ ಚೆಹರೆಗಳನ್ನು ಅಧ್ಯಯನ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ.