Site icon Vistara News

Chandrayaan 3: ಚಂದ್ರನ ಅಂಗಳದಲ್ಲಿ ನೌಕೆ ಇಳಿಸುವುದು ಏಕೆ ಕಷ್ಟ? ಸವಾಲು ಏನು? ತಜ್ಞರ ವಿಶ್ಲೇಷಣೆ ಇಲ್ಲಿದೆ

Chandrayaan 3

Chandrayaan 3: Expert shares biggest challenges during landing of spacecraft on The Moon

ಬೆಂಗಳೂರು: ರಷ್ಯಾ ಕೈಗೊಂಡಿದ್ದ ಚಂದ್ರಯಾನವು (Russia Moon Mission) ಕೊನೆಯ ಕ್ಷಣದಲ್ಲಿ ವಿಫಲವಾಗಿದೆ. ರಷ್ಯಾದ ಲೂನಾ 25 ಲೂನಾರ್‌ ಮಿಷನ್‌ನ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವಲ್ಲಿ ವಿಫಲವಾಗಿದ್ದು, ಸಾಫ್ಟ್‌ ಆಗಿ ಲ್ಯಾಂಡ್‌ ಆಗದೆ ಹಿನ್ನಡೆ ಅನುಭವಿಸಿದೆ. ಇದರ ಬೆನ್ನಲ್ಲೇ ಭಾರತದ ಚಂದ್ರಯಾನ 3 (Chandrayaan 3) ಯಶಸ್ಸಿನ ಕುರಿತು ಚರ್ಚೆಗಳಾಗುತ್ತಿವೆ. ಚಂದ್ರನ ಅಂಗಳದಲ್ಲಿ ನೌಕೆಯ ಸಾಫ್ಟ್‌ ಲ್ಯಾಂಡಿಂಗ್‌ ಎಷ್ಟು ಕ್ಲಿಷ್ಟಕರ, ಸವಾಲುಗಳು ಯಾವವು ಎಂಬುದ ಕುರಿತು ತಜ್ಞರು ವಿಶ್ಲೇಷಿಸಿದ್ದಾರೆ.

“ಚಂದ್ರನ ಮೇಲ್ಮೈನಲ್ಲಿ ಲ್ಯಾಂಡರ್‌ (ನೌಕೆ)ಯನ್ನು ಅಡ್ಡವಾಗಿರುವ (Horizontal Position) ಭಂಗಿಯಿಂದ ಲಂಬವಾದ (Vertical Position) ಭಂಗಿಗೆ ತರುವುದು ತುಂಬ ಕಷ್ಟದ ಕೆಲಸ. ಈ ಅಡ್ಡವಾಗಿರುವ ನೌಕೆಯನ್ನು ಲಂಬವಾದ ಭಂಗಿಗೆ ತರುವಾಗಲೇ ಚಂದ್ರಯಾನದ ಯಶಸ್ಸು ನಿರ್ಧಾರವಾಗುತ್ತದೆ. ಇದರ ಮೇಲೆಯೇ ವಿಜ್ಞಾನಿಗಳು ಹೆಚ್ಚು ಗಮನ ಹರಿಸುತ್ತಾರೆ” ಎಂದು ಬಾಹ್ಯಾಕಾಶ ತಂತ್ರಜ್ಞ ಪಿ.ಕೆ.ಘೋಷ್‌ ತಿಳಿಸಿದ್ದಾರೆ.

“ವಿಕ್ರಮ್‌ ಲ್ಯಾಂಡರ್‌ನ ವೇಗ ತಗ್ಗಿಸುವಿಕೆಯು (Deboosting) ಕೂಡ ಮಹತ್ತರವಾಗಿದೆ. ನೌಕೆಯು ಗಂಟೆಗೆ 6 ಸಾವಿರ ಕಿಲೋಮೀಟರ್‌ ವೇಗದಲ್ಲಿ ಚಲಿಸುತ್ತಿರುತ್ತದೆ. ಅದರನ್ನು ಕನಿಷ್ಠ ಸೊನ್ನೆ ಅಥವಾ ಒಂದು ಮೀಟರ್‌ ವೇಗಕ್ಕೆ ಇಳಿಸುವ ಪ್ರಕ್ರಿಯೆಯು ಕೂಡ ಸವಾಲಿನ ಕೆಲಸವಾಗಿದೆ. ಎರಡು ಬಾರಿ ವೇಗ ತಗ್ಗಿಸಿದ ಬಳಿಕ ಚಂದ್ರನ ದಕ್ಷಿಣ ಧ್ರುವದಿಂದ ನೌಕೆಯು ಕೇವಲ 25 ಕಿಲೋಮೀಟರ್‌ ದೂರದಲ್ಲಿದೆ. ಆಗಸ್ಟ್‌ 23ರಂದು ಅದು ಇಳಿಯಲಿದೆ. ಆಗ ತುಂಬ ಸವಾಲುಗಳು ಎದುರಾಗುತ್ತವೆ” ಎಂದು ತಿಳಿಸಿದರು.

ಚಂದ್ರನ ಅಂಗಳದ‌ ಹೊಸ ಫೋಟೊ ಕಳುಹಿಸಿದ ವಿಕ್ರಮ್‌ ಲ್ಯಾಂಡರ್

ರಷ್ಯಾ ಚಂದ್ರಯಾನ ವಿಫಲವಾಗಲು ಕಾರಣವೇನು?

ರಷ್ಯಾದ ಲೂನಾ 25 ಚಂದ್ರಯಾನ ವಿಫಲವಾಗಲು ಕಾರಣ ತಿಳಿಸಿದ ಅವರು, “ಚಂದ್ರಯಾನ ಕೈಗೊಳ್ಳುವಾಗ ನೀವು ಚಂದ್ರನ ಅಂಗಳದಲ್ಲಿ ಯಾವುದೇ ರೀತಿಯ ಪ್ರಯೋಗ ಮಾಡಲು ಹೋದರೆ ಕಷ್ಟವಾಗುತ್ತದೆ. ರಷ್ಯಾ ಮೊದಲು ಆಗಸ್ಟ್‌ 23ರಂದು ನೌಕೆ ಇಳಿಸುವುದಾಗಿ ತಿಳಿಸಿತ್ತು. ಆದರೆ, ಅದು ನೌಕೆಯ ವೇಗವನ್ನು ಹೆಚ್ಚಿಸಿ ಆಗಸ್ಟ್‌ 21ರಂದು ಇಳಿಸಲು ಯತ್ನಿಸಿತು. ಇದರಿಂದಾಗಿ ವಿಫಲವಾಗಿರುವ ಸಾಧ್ಯತೆ ಹೆಚ್ಚಿದೆ. ಚಂದ್ರನ ಅಂಗಳದಲ್ಲಿ ಸಣ್ಣ ಸಣ್ಣ ವಿಷಯಗಳು ಕೂಡ ನಿರ್ಣಾಯಕ” ಎಂದು ತಿಳಿಸಿದರು.

ಇದನ್ನೂ ಓದಿ: Russia Moon Mission: ಕೊನೇ ಕ್ಷಣದಲ್ಲಿ ರಷ್ಯಾ ಚಂದ್ರಯಾನ ವಿಫಲ; ಭಾರತದ ನೌಕೆಗೆ ಇನ್ನಿಲ್ಲ ಯಾವುದೇ ಅಡ್ಡಿ!

ಚಂದ್ರಯಾನ 3 ಲ್ಯಾಂಡ್‌ ಆಗುವುದು ಯಾವಾಗ?

ಎಲ್ಲರೂ ಕೌತುಕದಿಂದ ಕಾಯುವ ಚಂದ್ರಯಾನದ-3ರ ಸಾಫ್ಟ್​ ಲ್ಯಾಂಡಿಂಗ್​ ಆಗಸ್ಟ್ 23, 2023 ರಂದು ಸಂಜೆ 5:27 ರಿಂದ ನೇರ ಪ್ರಸಾರವಾಗಲಿದೆ. ಇಸ್ರೋದ ಅಧಿಕೃತ ವೆಬ್ಸೈಟ್, ಅದರ ಅಧಿಕೃತ ಯೂಟ್ಯೂಬ್ ಚಾನೆಲ್, ಅದರ ಅಧಿಕೃತ ಫೇಸ್‌ಬುಕ್‌ ಪೇಜ್‌ ಮತ್ತು ಡಿಡಿ ನ್ಯಾಷನಲ್ ಟಿವಿ ಚಾನೆಲ್ ಸೇರಿದಂತೆ ಅನೇಕ ವೇದಿಕೆಗಳಲ್ಲಿ ನೇರ ಪ್ರಸಾರವಾಗಲಿದೆ. ಆಗಸ್ಟ್ 23, 2023 ರಂದು ಸಂಜೆ 6:04 ರ ಸುಮಾರಿಗೆ ಚಂದ್ರಯಾನ -3 ಚಂದ್ರನ ಮೇಲೆ ಇಳಿಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.

Exit mobile version