ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮಹತ್ವಾಕಾಂಕ್ಷೆಯ ಚಂದ್ರಯಾನ 3 (Chandrayaan 3) ಯಶಸ್ಸನ್ನು ಕಣ್ತುಂಬಿಕೊಳ್ಳಲು ದೇಶಕ್ಕೆ ದೇಶವೇ ಕಾಯುತ್ತಿದೆ. ಆಗಸ್ಟ್ 23ರಂದು ವಿಕ್ರಮ್ ಲ್ಯಾಂಡರ್ (Vikram Lander) ಚಂದ್ರನ ಅಂಗಳದಲ್ಲಿ ಸಾಫ್ಟ್ ಲ್ಯಾಂಡ್ ಆದರೆ, ಭಾರತವು ಇತಿಹಾಸ ಸೃಷ್ಟಿಸಲಿದೆ. ಇದರ ಬೆನ್ನಲ್ಲೇ, ಸುರಕ್ಷಿತ ಸ್ಥಳಕ್ಕಾಗಿ ವಿಕ್ರಮ್ ಲ್ಯಾಂಡರ್ ಜಾಗ ಹುಡುಕುತ್ತಿದೆ ಎಂದು ಇಸ್ರೋ ತಿಳಿಸಿದೆ. ಹಾಗೆಯೇ, ಚಂದ್ರನ ಅಂಗಳದ ಫೋಟೊಗಳನ್ನು ಕೂಡ ಕಳುಹಿಸಿದೆ.
“ವಿಕ್ರಮ್ ಲ್ಯಾಂಡರ್‌ನ ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಆ್ಯಡ್ ಅವಾಯ್ಡನ್ಸ್ ಕ್ಯಾಮೆರಾ (Lander Hazard Detection and Avoidance Camera-LHDAC) ಚಂದ್ರನ ಅಂಗಳದ ಫೋಟೊಗಳನ್ನು ಕಳುಹಿಸಿದೆ. ಸಾಫ್ಟ್ ಲ್ಯಾಂಡಿಂಗ್‌ಗೆ ಸುರಕ್ಷಿತ ಸ್ಥಳ ಹುಡುಕಲು ಈ ಕ್ಯಾಮೆರಾ ಸಹಾಯ ಮಾಡುತ್ತದೆ. ಸಾಫ್ಟ್ ಆಗಿ ಲ್ಯಾಂಡ್ ಆಗಲಿ ಎಂಬ ಕಾರಣಕ್ಕಾಗಿ ಇಸ್ರೋ ಇದನ್ನು ಅಭಿವೃದ್ಧಿಪಡಿಸಿದೆ” ಎಂದು ಇಸ್ರೋ ತಿಳಿಸಿದೆ. ನಾಲ್ಕು ಫೋಟೊಗಳನ್ನು ಕೂಡ ಇಸ್ರೋ ಶೇರ್ ಮಾಡಿದೆ.
ವಿಕ್ರಮ್ ಲ್ಯಾಂಡರ್ ಕಳುಹಿಸಿದ ಫೋಟೊಗಳು
ಚಂದ್ರನ ಅಂಗಳದಲ್ಲಿ ನೌಕೆಯ ಸಾಫ್ಟ್ ಲ್ಯಾಂಡಿಂಗ್ ಸವಾಲು ಕುರಿತು ಈಗಾಗಲೇ ತಜ್ಞರು ಮಾಹಿತಿ ನೀಡಿದ್ದಾರೆ. “ಚಂದ್ರನ ಮೇಲ್ಮೈನಲ್ಲಿ ಲ್ಯಾಂಡರ್ (ನೌಕೆ)ಯನ್ನು ಅಡ್ಡವಾಗಿರುವ (Horizontal Position) ಭಂಗಿಯಿಂದ ಲಂಬವಾದ (Vertical Position) ಭಂಗಿಗೆ ತರುವುದು ತುಂಬ ಕಷ್ಟದ ಕೆಲಸ. ಈ ಅಡ್ಡವಾಗಿರುವ ನೌಕೆಯನ್ನು ಲಂಬವಾದ ಭಂಗಿಗೆ ತರುವಾಗಲೇ ಚಂದ್ರಯಾನದ ಯಶಸ್ಸು ನಿರ್ಧಾರವಾಗುತ್ತದೆ. ಇದರ ಮೇಲೆಯೇ ವಿಜ್ಞಾನಿಗಳು ಹೆಚ್ಚು ಗಮನ ಹರಿಸುತ್ತಾರೆ” ಎಂದು ಬಾಹ್ಯಾಕಾಶ ತಂತ್ರಜ್ಞ ಪಿ.ಕೆ.ಘೋಷ್ ತಿಳಿಸಿದ್ದಾರೆ.
ಇದನ್ನೂ ಓದಿ: Chandrayana – 3 : ಆ. 23ರಂದು ಸಂಜೆ 6:04ಕ್ಕೆ ಚಂದ್ರಯಾನ 3 ಲ್ಯಾಂಡ್; ಇನ್ನಷ್ಟು ಮಾಹಿತಿ ಪ್ರಕಟಿಸಿದ ಇಸ್ರೊ
ಚಂದ್ರಯಾನ 3 ಲೈವ್ ವೀಕ್ಷಿಸಿ
ಎಲ್ಲರೂ ಕೌತುಕದಿಂದ ಕಾಯುವ ಚಂದ್ರಯಾನದ-3ರ ಸಾಫ್ಟ್ ಲ್ಯಾಂಡಿಂಗ್ ಆಗಸ್ಟ್ 23, 2023 ರಂದು ಸಂಜೆ 5:27 ರಿಂದ ನೇರ ಪ್ರಸಾರವಾಗಲಿದೆ. ಇಸ್ರೋದ ಅಧಿಕೃತ ವೆಬ್ಸೈಟ್, ಅದರ ಅಧಿಕೃತ ಯೂಟ್ಯೂಬ್ ಚಾನೆಲ್, ಅದರ ಅಧಿಕೃತ ಫೇಸ್‌ಬುಕ್ ಪೇಜ್ ಮತ್ತು ಡಿಡಿ ನ್ಯಾಷನಲ್ ಟಿವಿ ಚಾನೆಲ್ ಸೇರಿದಂತೆ ಅನೇಕ ವೇದಿಕೆಗಳಲ್ಲಿ ನೇರ ಪ್ರಸಾರವಾಗಲಿದೆ. ಆಗಸ್ಟ್ 23, 2023 ರಂದು ಸಂಜೆ 6:04 ರ ಸುಮಾರಿಗೆ ಚಂದ್ರಯಾನ -3 ಚಂದ್ರನ ಮೇಲೆ ಇಳಿಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.