ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನೆ ಕೇಂದ್ರ (ISRO)ದ ಮಹತ್ವಾಕಾಂಕ್ಷೆಯ ಚಂದ್ರಯಾನ 3 (Chandrayaan 3) ಮಿಷನ್ ಯಶಸ್ಸಿಗೆ ಇನ್ನೊಂದೇ ಹೆಜ್ಜೆ ಬಾಕಿ ಉಳಿದಿದೆ. ಚಂದ್ರಯಾನ 3 ನೌಕೆಯಿಂದ (ಪ್ರಾಪಲ್ಶನ್ ಮಾಡ್ಯೂಲ್) ವಿಕ್ರಮ್ ಲ್ಯಾಂಡರ್‌ಅನ್ನು ಬೇರ್ಪಡಿಸಲಾಗಿದ್ದು, ಇದರೊಂದಿಗೆ ಚಂದ್ರನ ಅಂಗಳದಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗಲು ದಿನಗಣನೆ ಆರಂಭವಾಗಿದೆ.
ಚಂದ್ರಯಾನ-3 ಮಿಷನ್‌ಅನ್ನು ಬೆಂಗಳೂರಿನಲ್ಲಿರುವ ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಆ್ಯಂಡ್ ಕಮಾಂಡ್ ನೆಟ್‌ವರ್ಕ್ (ISRO Telemetry, Tracking and Command Network-ISTRAC) ಗಮನಿಸುತ್ತಿದೆ. ಇಸ್ರೋ ವಿಜ್ಞಾನಿಗಳು ಗುರುವಾರ ಪ್ರೊಪಲ್ಶನ್ ಮಾಡ್ಯೂಲ್‌ನಿಂದ ಲ್ಯಾಂಡರ್‌ಅನ್ನು ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ. ಇನ್ನು ಲ್ಯಾಂಡರ್ ಸಾಫ್ಟ್‌ಲ್ಯಾಂಡ್ ಆಗುವ ದಿಸೆಯಲ್ಲಿ ಗುರುವಾರದ ಪ್ರಕ್ರಿಯೆಯು ಮಹತ್ವ ಪಡೆದಿದೆ.
ಟ್ವೀಟ್ ಮೂಲಕ ಇಸ್ರೋ ಮಾಹಿತಿ
ಮುಂದೇನಾಗಲಿದೆ?
ಚಂದ್ರನಿಂದ ಲ್ಯಾಂಡರ್ ಕೇವಲ 163 ಕಿಲೋಮೀಟರ್ ದೂರದಲ್ಲಿದೆ. ಗುರುವಾರ ಲ್ಯಾಂಡರ್ ಬೇರ್ಪಟ್ಟರೆ ಅದರ ವೇಗ ಕಡಿಮೆಯಾಗಲಿದೆ. ಸಾಫ್ಟ್ ಲ್ಯಾಂಡಿಂಗ್ ದೃಷ್ಟಿಯಿಂದ ವೇಗವನ್ನು ಕಡಿಮೆಗೊಳಿಸಲಾಗುತ್ತದೆ. ಹೀಗೆ ನಿಯಮಿತವಾಗಿ ವೇಗ ಕಡಿಮೆಗೊಳಿಸುತ್ತ ವಿಕ್ರಮ್ ಲ್ಯಾಂಡರ್‌ಅನ್ನು ಚಂದ್ರನಿಗೆ ಮತ್ತಷ್ಟು ಸಮೀಪಗೊಳಿಸಲಾಗುತ್ತದೆ. ಆಗಸ್ಟ್ 23ರಂದು ಸಂಜೆ 5.47ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡ್ ಆದರೆ ಭಾರತ ಇತಿಹಾಸ ಸೃಷ್ಟಿಸಲಿದೆ. ಹಾಗಾಗಿ, ಮುಂದಿನ ಪ್ರಕ್ರಿಯೆಗಳು ಕುತೂಹಲ ಕೆರಳಿಸಿವೆ.
ಇದನ್ನೂ ಓದಿ: Fact Check: ಚಂದ್ರಯಾನ 3 ವಿಜ್ಞಾನಿಗಳಿಗೆ ಕೇಂದ್ರ ಸರ್ಕಾರ 3 ತಿಂಗಳಿಂದ ಸಂಬಳ ನೀಡಿಲ್ಲವೇ? ಇಲ್ಲಿದೆ ವಾಸ್ತವ
ಪ್ರೊಪಲ್ಷನ್ ಮಾಡ್ಯೂಲ್ ಸುಮಾರು ಮೂರರಿಂದ ಆರು ತಿಂಗಳ ಕಾಲ ಚಂದ್ರನ ಕಕ್ಷೆಯಲ್ಲಿ ಉಳಿಯಲಿದೆ. ಸ್ಪೆಕ್ಟ್ರೋ-ಪೋಲಾರಿಮೆಟ್ರಿ ಆಫ್ ಹ್ಯಾಬಿಟಬಲ್ ಪ್ಲಾನೆಟ್ ಅರ್ಥ್ (SHAPE) ಅನ್ನು ಬಳಸಿಕೊಂಡು ಚಂದ್ರನ ಕಕ್ಷೆಯಿಂದ ಭೂಮಿಯ ಸ್ಪೆಕ್ಟ್ರೋ-ಪೋಲಾರಿಮೆಟ್ರಿಕ್ ಚಹರೆಗಳನ್ನು ಅಧ್ಯಯನ ಮಾಡುತ್ತದೆ. ಎಕ್ಸೋಪ್ಲಾನೆಟ್‌ಗಳು ಮತ್ತು ಅವುಗಳ ಮೇಲೆ ಜೀವದ ಚಿಹ್ನೆಗಳ ಹುಡುಕಾಟದಲ್ಲಿ ಸಹಾಯ ಮಾಡಲು ಅನುಕೂಲವಾಗುವಂತೆ ಭೂಮಿಯ ಸ್ಪೆಕ್ಟ್ರಮ್ ಚೆಹರೆಗಳನ್ನು ಅಧ್ಯಯನ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ.