Site icon Vistara News

Shiva Shakti: ಚಂದ್ರಯಾನ 3 ಇಳಿದ ಜಾಗ ಈಗ ಶಿವಶಕ್ತಿ ಪಾಯಿಂಟ್‌; ಜಾಗತಿಕ ಸಂಸ್ಥೆ ಒಪ್ಪಿಗೆ

Chandrayaan 3

Chandrayaan-3 would have crashed into a satellite, How Isro saved it?

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಐತಿಹಾಸಿಕ ಚಂದ್ರಯಾನ 3 ಮಿಷನ್‌ ಲ್ಯಾಂಡ್‌ ಆದ ಪ್ರದೇಶವೀಗ ಅಧಿಕೃತವಾಗಿ ಶಿವ ಶಕ್ತಿ (Shiva Shakti) ಪಾಯಿಂಟ್‌ ಎನಿಸಿದೆ. ಚಂದ್ರಯಾನ 3 ಮಿಷನ್‌ ಲ್ಯಾಂಡ್‌ ಆದ ಪ್ರದೇಶವನ್ನು ಶಿವಶಕ್ತಿ ಎಂಬುದಾಗಿ ಕರೆಯಲು ಅಂತಾರಾಷ್ಟ್ರೀಯ ಖಗೋಳ ಒಕ್ಕೂಟವು (International Astronomical Union) ಮಾರ್ಚ್‌ 19ರಂದು ಅನುಮತಿ ನೀಡಿದೆ. ಇದರೊಂದಿಗೆ ಬಾಹ್ಯಾಕಾಶ ನೌಕೆ ಇಳಿದ ಪ್ರದೇಶವೀಗ ಅಧಿಕೃತವಾಗಿ ಶಿವಶಕ್ತಿ ಪಾಯಿಂಟ್‌ ಎನಿಸಿದೆ.

“ಭಾರತೀಯ ಪುರಾಣಶಾಸ್ತ್ರದ ಪ್ರಕಾರ, ಶಿವ ಎಂಬ ಪುಲ್ಲಿಂಗ ಹೆಸರು ಹಾಗೂ ಶಕ್ತಿ ಎಂಬ ಸ್ತ್ರೀಲಿಂಗದ ಹೆಸರು ಸಮೀಕರಣಗೊಂಡು ಶಿವಶಕ್ತಿಯಾಗಿದೆ. ಇಸ್ರೋದ ಚಂದ್ರಯಾನ 3 ಮಿಷನ್‌ನ ವಿಕ್ರಮ್‌ ಲ್ಯಾಂಡರ್‌ ಇಳಿದ ಜಾಗವೀಗ ಶಿವಶಕ್ತಿ ಎಂದು ಕರೆಯಲಾಗುತ್ತದೆ” ಎಂಬುದಾಗಿ ಅಂತಾರಾಷ್ಟ್ರೀಯ ಖಗೋಳ ಒಕ್ಕೂಟವು ಪ್ರಕಟಣೆ ತಿಳಿಸಿದೆ. ಇದರೊಂದಿಗೆ ಚಂದ್ರಯಾನ 3 ಮಿಷನ್‌ ಯಶಸ್ವಿಯಾದ ಏಳು ತಿಂಗಳ ಬಳಿಕ ಶಿವಶಕ್ತಿ ಎಂಬ ಹೆಸರು ಅಧಿಕೃತವಾದಂತಾಗಿದೆ.

ಮೋದಿ ಘೋಷಣೆ ಮಾಡಿದ್ದರು

ಚಂದ್ರಯಾನ 3 ಯಶಸ್ಸಿನ ಬಳಿಕ ಮಿಷನ್‌ ಲ್ಯಾಂಡ್‌ ಆದ ಪ್ರದೇಶಕ್ಕೆ ಶಿವಶಕ್ತಿ ಪಾಯಿಂಟ್‌ ಎಂಬುದಾಗಿ ಕರೆಯೋಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ (ISRO) ಕಮಾಂಡ್‌ ಪಾಯಿಂಟ್‌ ಪೀಣ್ಯದ ಇಸ್ಟಾಕ್‌ನಲ್ಲಿ ಇಸ್ರೋ ವಿಜ್ಞಾನಿಗಳನ್ನು ಉದ್ದೇಶಿಸಿ ಅವರು ಮಾತನಾಡಿದ್ದರು. ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಗ್ಯಾನ್‌ ರೋವರ್‌ಗಳನ್ನು ಶಿವ ಮತ್ತು ಶಕ್ತಿಗೆ ಹೋಲಿಸಿದ್ದರು. ವಿಜ್ಞಾನ ಮತ್ತು ತಂತ್ರಜ್ಞಾನದ ಬಲದಿಂದ ಈ ಸಾಧನೆ ಸಾಧ್ಯವಾಗಿದೆ. ವಿಕ್ರಮ್‌ನ ವಿಶ್ವಾಸದ ಜತೆಗೆ ಪ್ರಗ್ಯಾನ್‌ನ ಪರಾಕ್ರಮ ಇದೆ. ಹೀಗಾಗಿ ವಿಕ್ರಮ್‌ ಲ್ಯಾಂಡರ್‌ ಇಳಿದ ಜಾಗವನ್ನು ಶಿವಶಕ್ತಿ ಪಾಯಿಂಟ್‌ ಎಂದು ಕರೆಯೋಣ ಎಂದಿದ್ದರು.

ಹಾಗೆಯೇ ಚಂದ್ರಯಾನ 3 ಚಂದ್ರನಲ್ಲಿ ವಿಜಯಧ್ವಜ ಊರಿದ ದಿನವಾದ ಆಗಸ್ಟ್‌ 23ನ್ನು ಪ್ರತಿವರ್ಷವೂ ಸಂಭ್ರಮಿಸಲು ʼಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ದಿನ (ಹಿಂದೂಸ್ತಾನ್‌ ನ್ಯಾಷನಲ್‌ ಸ್ಪೇಸ್‌ ಡೇ) ಎಂದು ಕರೆಯೋಣ ಎಂದು ತಿಳಿಸಿದ್ದರು.

ಇದನ್ನೂ ಓದಿ: IPL 2024 : ಚಂದ್ರಯಾನ 3 ಮಿಷನ್​ಗೆ ಗೌರವ ಸಲ್ಲಿಸಿದ ಬಿಸಿಸಿಐ

2023ರ ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ನಿಲ್ದಾಣದಿಂದ LVM3 ರಾಕೆಟ್‌ನ ಮೂಲಕ ಉಡಾವಣೆಗೊಂಡ ಚಂದ್ರಯಾನ-3, ಒಂದು ತಿಂಗಳ ಕಾಲ ಬಾಹ್ಯಾಕಾಶ ಹಾರಾಟದ ನಂತರ ಆಗಸ್ಟ್ 23ರಂದು ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿಯಿತು. ಆ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್‌ ಲ್ಯಾಂಡ್‌ ಆದ ಜಗತ್ತಿನ ಮೊದಲ ಮಿಷನ್‌ ಎಂಬ ಖ್ಯಾತಿಗೆ ಭಾಜನವಾಯಿತು. ಇದರೊಂದಿಗೆ ಇಸ್ರೋ ಮೈಲುಗಲ್ಲು ಸ್ಥಾಪಿಸಿತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version