ಬೆಂಗಳೂರು: ಚಂದ್ರಯಾನ-3 (Chandrayaan 3)ರ ಭರ್ಜರಿ ಯಶಸ್ಸು ಕಂಡಿದೆ. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ವಿಕ್ರಮ್ ಲ್ಯಾಂಡರ್ ಸೇಫ್ ಆಗಿ ಲ್ಯಾಂಡ್ ಆಗಿದೆ. ಈ ಮೂಲಕ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಅಮೆರಿಕ, ರಷ್ಯಾ ಮತ್ತು ಚೀನಾದ ಬಳಿಕ ಚಂದ್ರನಲ್ಲಿ ಇಳಿದ ನಾಲ್ಕನೇ ದೇಶ ಎನಿಸಿಕೊಂಡಿದೆ. ಅದರಲ್ಲೂ ಕ್ಲಿಷ್ಟಕರ ದಕ್ಷಿಣ ಧ್ರುವ ಪ್ರದೇಶದಲ್ಲಿ ಲ್ಯಾಂಡರ್ ಇಳಿಸಿದ ಮೊದಲ ದೇಶ ಎನಿಸಿಕೊಂಡಿದೆ.
ಕಳೆದ ಜುಲೈ 14ರಂದು ಶ್ರೀಹರಿ ಕೋಟಾದಿಂದ ನಭಕ್ಕೆ ಜಿಗಿದಿದ್ದ ಚಂದ್ರಯಾನ ಮಿಷನ್ ಅಲ್ಲಿಂದ ನಾನಾ ಹಂತಗಳನ್ನು ದಾಟಿ ಇದೀಗ ಚಂದ್ರನ ಮೇಲೆ ಕಾಲಿಟ್ಟಿದೆ. ಅತ್ಯಂತ ಕಡಿಮೆ ಖರ್ಚಿನದಲ್ಲಿ ಅಂತರಿಕ್ಷ ಯಾನ ಮಾಡಿದ ಹಾಗೂ ಚಂದ್ರನ ಮೇಲೆ ಕಾಲಿಟ್ಟಿರುವ ಮೊದಲ ದೇಶ ಭಾರತ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಇಸ್ರೋ ಬಳಿ ಪ್ಲಾನ್ ಬಿ ಕೂಡ ಇದೆ!
ಇಂದು ಕೊನೆಯ ಕ್ಷಣದಲ್ಲಿ ಅನಿವಾರ್ಯ ಪರಿಸ್ಥಿತಿಗಳಿಂದಾಗಿ ಸಾಫ್ಟ್ ಲ್ಯಾಂಡಿಂಗ್ ಸಾಧ್ಯವಾಗದೆ ಹೋದರೆ, ಲ್ಯಾಂಡಿಂಗ್ ಅನ್ನು ಆ.27ಕ್ಕೆ ನಿಗದಿಪಡಿಸಲಾಗುತ್ತದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.
ಇಸ್ರೋ ಕಚೇರಿಯ ಚಿತ್ರಗಳು ಇಲ್ಲಿವೆ!
ಚಂದ್ರಯಾನದ ಲ್ಯಾಂಡಿಂಗ್‌ನ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿರುವ ಇಸ್ರೋ ಸಂಸ್ಥೆಯಲ್ಲಿ ಕಾತರ, ಕುತೂಹಲ, ಉದ್ವಿಗ್ನತೆ ಮಡುಗಟ್ಟಿದೆ. ಕಚೇರಿಯ ಕೆಲವು ಫೋಟೋಗಳನ್ನು ಇಸ್ರೋ ಎಕ್ಸ್ (ಟ್ವೀಟ್) ಮಾಡಿದೆ.
ಕೊನೆಯ 15 ನಿಮಿಷಗಳೇ ನಿರ್ಣಾಯಕ!
ಲ್ಯಾಂಡಿಂಗ್‌ಗೆ ಕೊನೆಯ 15 ನಿಮಿಷಗಳೇ ನಿರ್ಣಾಯಕವಾಗಿರಲಿವೆ. ಮೊದಲ ಹತ್ತು ನಿಮಿಷಗಳಲ್ಲಿ ಲ್ಯಾಂಡರ್ ತಾನೀಗ ಇರುವ 30 ಕಿಮೀ ಮೇಲಿನ ಕಕ್ಷೆಯಿಂದ 7.42 ಕಿಮೀ ಎತ್ತರಕ್ಕೆ ಗಂಟೆಗೆ 7 ಕಿಮೀ ವೇಗದಲ್ಲಿ ಇಳಿಯಲಿದೆ. ನಂತರ ಸಮತಲ ಸ್ಥಿತಿಯಿಂದ ಲಂಬ ಸ್ಥಿತಿಗೆ ಪರಿವರ್ತಿತಗೊಂಡು, ಬಹು ನಿಧಾನವಾಗಿ ನೆಲವನ್ನು ಸ್ಪರ್ಶಿಸಲಿದೆ. ಈ ಒಟ್ಟೂ ಪ್ರಕ್ರಿಯೆ ಕಂಪ್ಯೂಟರ್ ನಿರ್ದೇಶಿತವಾಗಿರಲಿದೆ.
ಅಜ್ಮೇರ್ ಶರೀಫ್ ದರ್ಗಾದಲ್ಲಿ ಪ್ರಾರ್ಥನೆ
ಅಜ್ಮೇರ್: ರಾಜಸ್ಥಾನದ ಅಜ್ಮೇರ್ ಶರೀಫ್ ದರ್ಗಾದಲ್ಲಿ ಚಂದ್ರಯಾನ 3ರ ಲ್ಯಾಂಡಿಂಗ್ ಯಶಸ್ವಿಯಾಗುವಂತೆ ಪ್ರಾರ್ಥಿಸಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ ಮುಸ್ಲಿಮರು ಮಿಷನ್ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿದರು.