Site icon Vistara News

‌Chandrayaan- 3: ಚಂದ್ರನ ಸುತ್ತ ಅಂತಿಮ ಸುತ್ತು ಪೂರ್ಣ, ನಾಳೆ ಚಂದ್ರನತ್ತ ಇಳಿಯಲಿದೆ ಲ್ಯಾಂಡರ್

Chandrayaan 3

Chandrayaan-3 Completes Lunar-bound Manoeuvre, Separation Today: What's next?

ಹೊಸದಿಲ್ಲಿ: ಚಂದ್ರಯಾನ-3 (‌Chandrayaan- 3) ನೌಕೆಯು ಬುಧವಾರ ಚಂದ್ರನ (Lunar mission) ಸುತ್ತ ತನ್ನ ನಿಗದಿತ ಐದು ಸುತ್ತುಗಳಲ್ಲಿ ಕೊನೆಯ ಸುತ್ತನ್ನು ಇಂದು ಪೂರ್ಣಗೊಳಿಸಿದೆ. ನಾಳೆ ಮುಖ್ಯ ನೌಕೆಯಿಂದ ಲ್ಯಾಂಡರ್‌ (lander) ಪ್ರತ್ಯೇಕಗೊಳ್ಳಲಿದ್ದು, ಚಂದ್ರನ ದಕ್ಷಿಣ ಧ್ರುವದತ್ತ (south pole) ಇಳಿಯಲಿದೆ.

ಬಾಹ್ಯಾಕಾಶ ನೌಕೆಯ ಕಕ್ಷೆಯ ವ್ಯಾಪ್ತಿ ಮತ್ತು ವೇಗವನ್ನು ಕಡಿಮೆ ಮಾಡುವ ಉದ್ದೇಶದಿಂದ ನಿಗದಿಪಡಿಸಲಾದ ಚಂದ್ರನ ಕಕ್ಷೆ (lunar orbit) ಸುತ್ತುವಿಕೆಯನ್ನು ಇಂದು ಅದು ಪೂರ್ಣಗೊಳಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ – ISRO) ತಿಳಿಸಿದೆ. ನೌಕೆಯ ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಲ್ಯಾಂಡರ್-ರೋವರ್ ಮಾಡ್ಯೂಲ್ ಗುರುವಾರ ಪ್ರತ್ಯೇಕಗೊಳ್ಳಲಿದೆ. “ಪ್ರೊಪಲ್ಷನ್ ಮಾಡ್ಯೂಲ್ ಮತ್ತು ಲ್ಯಾಂಡರ್ ಮಾಡ್ಯೂಲ್ ತಮ್ಮ ಪ್ರತ್ಯೇಕ ಪ್ರಯಾಣಕ್ಕೆ ಸಜ್ಜಾಗುತ್ತಿವೆ” ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಬೇರ್ಪಟ್ಟ ನಂತರ, ಲ್ಯಾಂಡರ್-ರೋವರ್ ಮಾಡ್ಯೂಲ್ ಚಂದ್ರನ ಮೇಲ್ಮೈ ಮೇಲೆ ಇಳಿಯಲು ಆಗಸ್ಟ್ 23 ದಿನಾಂಕವನ್ನು ನಿಗದಿಪಡಿಸಲಾಗಿದೆ.

ಪ್ರೊಪಲ್ಷನ್ ಮಾಡ್ಯೂಲ್ ಸುಮಾರು ಮೂರರಿಂದ ಆರು ತಿಂಗಳ ಕಾಲ ಚಂದ್ರನ ಕಕ್ಷೆಯಲ್ಲಿ ಉಳಿಯಲಿದೆ. ಸ್ಪೆಕ್ಟ್ರೋ-ಪೋಲಾರಿಮೆಟ್ರಿ ಆಫ್ ಹ್ಯಾಬಿಟಬಲ್ ಪ್ಲಾನೆಟ್ ಅರ್ಥ್ (SHAPE) ಅನ್ನು ಬಳಸಿಕೊಂಡು ಚಂದ್ರನ ಕಕ್ಷೆಯಿಂದ ಭೂಮಿಯ ಸ್ಪೆಕ್ಟ್ರೋ-ಪೋಲಾರಿಮೆಟ್ರಿಕ್ ಚಹರೆಗಳನ್ನು ಅಧ್ಯಯನ ಮಾಡುತ್ತದೆ. ಎಕ್ಸೋಪ್ಲಾನೆಟ್‌ಗಳು ಮತ್ತು ಅವುಗಳ ಮೇಲೆ ಜೀವದ ಚಿಹ್ನೆಗಳ ಹುಡುಕಾಟದಲ್ಲಿ ಸಹಾಯ ಮಾಡಲು ಅನುಕೂಲವಾಗುವಂತೆ ಭೂಮಿಯ ಸ್ಪೆಕ್ಟ್ರಮ್ ಚೆಹರೆಗಳನ್ನು ಅಧ್ಯಯನ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ.

ಈ ಹಿಂದಿನ ಲ್ಯಾಂಡರ್‌ನ (ವಿಕ್ರಮ್‌) ವೈಫಲ್ಯವನ್ನು ಸರಿಪಡಿಸಿಕೊಂಡು ಇಳಿಯುವಿಕೆ ಸಾಧಿಸಲು ಇಸ್ರೋ ಯೋಜಿಸಿದೆ. ಚಂದ್ರನ ದಕ್ಷಿಣ ಧ್ರುವದದಲ್ಲಿ ಲ್ಯಾಂಡರ್‌ ಮೃದುವಾಗಿ ಇಳಿಯಬೇಕಿದೆ. ಇದಕ್ಕಾಗಿ ಲ್ಯಾಂಡರ್ ವಿನ್ಯಾಸಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಏನು ತಪ್ಪಾಗಬಹುದು ಮತ್ತು ಅದನ್ನು ಹೇಗೆ ತಡೆಯಬೇಕು ಎಂಬುದನ್ನು ದೃಷ್ಟಿಯಲ್ಲಿಟ್ಟುಕೊಂಡು ಇದನ್ನು ವಿನ್ಯಾಸಗೊಳಿಸಲಾಗಿದೆ.

ಇಳಿಯುವಿಕೆಯ ಸಮಯದಲ್ಲಿ ಲ್ಯಾಂಡರ್‌ಗೆ ಹೆಚ್ಚು ಕುಶಲತೆಯಿಂದ ಚಲಿಸುವ ಸಾಮರ್ಥ್ಯವನ್ನು ನೀಡಲಾಗಿದೆ. ಲ್ಯಾಂಡಿಂಗ್‌ಗಾಗಿ 4 ಕಿಮೀ x 2.4 ಕಿಮೀ ವ್ಯಾಪ್ತಿಯ ದೊಡ್ಡ ಪ್ರದೇಶವನ್ನು ಹುಡುಕಲಾಗಿದೆ. ಹೆಚ್ಚಿನ ಸೆನ್ಸರ್‌ಗಳನ್ನು ಸೇರಿಸಲಾಗಿದೆ. ಲ್ಯಾಂಡರ್‌ನ ಕಾಲುಗಳನ್ನು ತೆಗೆದುಹಾಕಲಾಗಿದೆ. ಸ್ವಲ್ಪ ಹೆಚ್ಚಿನ ವೇಗದಲ್ಲಿ ಇಳಿದರೂ ಧಕ್ಕೆಯಾಗದಂತೆ ಗಟ್ಟಿಮುಟ್ಟಾಗಿಸಲಾಗಿದೆ. ಸೂರ್ಯನಿಗೆ ಮುಖ ಮಾಡಿದರೂ ಕಾರ್ಯಾಚರಣೆ ಮುಂದುವರಿಯುವಂತೆ ಹೆಚ್ಚಿನ ಸೌರ ಫಲಕಗಳನ್ನು ಸೇರಿಸಲಾಗಿದೆ.

ಇದನ್ನೂ ಓದಿ: Russia Moon Mission: ಭಾರತ ಬೆನ್ನಲ್ಲೇ ರಷ್ಯಾದಿಂದಲೂ ಚಂದ್ರಯಾನ; ಮೊದಲು ತಲುಪುವವರು ಯಾರು?

Exit mobile version