Site icon Vistara News

Chandrayaan 4: ಚಂದ್ರಯಾನ 4ಕ್ಕೆ ಇಸ್ರೋ ಸಜ್ಜು; ಚಂದ್ರನ ವಿಶೇಷ ಸ್ಥಳದಲ್ಲಿ ಬಾಹ್ಯಾಕಾಶ ನೌಕೆ ಲ್ಯಾಂಡಿಂಗ್!

Chandrayaan 4

Chandrayaan 4's landing site on the Moon revealed

ಬೆಂಗಳೂರು: ಚಂದ್ರಯಾನ 3 ಮಿಷನ್‌ (Chandrayaan 3) ಮೂಲಕ ಇತಿಹಾಸ ಸೃಷ್ಟಿಸಿರುವ ಇಸ್ರೋ (ISRO) ಈಗ ಬಾಹ್ಯಾಕಾಶದಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಲು ಮುಂದಾಗಿದೆ. ಚಂದ್ರಯಾನ 3 ಮಿಷನ್‌ ಕೈಗೊಂಡು ಜಗತ್ತಿನಲ್ಲೇ ದಕ್ಷಿಣ ಧ್ರುವಕ್ಕೆ ಬಾಹ್ಯಾಕಾಶ ನೌಕೆ ಕಳುಹಿಸಿದ ಮೊದಲ ದೇಶ ಎಂಬ ಖ್ಯಾತಿಗೆ ಭಾಜನವಾದ ಬಳಿಕ ಇಸ್ರೋ ಈಗ ಚಂದ್ರಯಾನ 4 ಮಿಷನ್‌ಗೆ ಸಜ್ಜಾಗಿದೆ. ಅಷ್ಟೇ ಅಲ್ಲ, ಚಂದ್ರಯಾನ 4 ಮಿಷನ್‌ನ (Chandrayaan 4) ಬಾಹ್ಯಾಕಾಶ ನೌಕೆಯು ಚಂದ್ರನ ಅಂಗಳದಲ್ಲಿ ಎಲ್ಲಿ ಇಳಿಯಬೇಕು ಎಂಬುದನ್ನೂ ಇಸ್ರೋ ಘೋಷಿಸಿದೆ.

ಚಂದ್ರಯಾನ 4 ಮಿಷನ್‌ ಕುರಿತು ಸ್ಪೇಸ್‌ ಅಪ್ಲಿಕೇಷನ್ಸ್‌ ಸೆಂಟರ್‌ನ (SAC) ನಿರ್ದೇಶಕ ನೀಲೇಶ್‌ ದೇಸಾಯಿ (Nilesh Desai) ಅವರು ಮಾಹಿತಿ ನೀಡಿದ್ದಾರೆ. “ಚಂದ್ರಯಾನ 4 ಮಿಷನ್‌ನ ಬಾಹ್ಯಾಕಾಶ ನೌಕೆಯು ಚಂದ್ರಯಾನ 3ರ ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಜ್ಞಾನ್‌ ರೋವರ್‌ ಸಾಫ್ಟ್‌ ಲ್ಯಾಂಡ್‌ ಆದ, ಶಿವಶಕ್ತಿ ಪಾಯಿಂಟ್‌ ಎಂದೇ ಖ್ಯಾತಿಯಾದ ಪ್ರದೇಶದ ಬಳಿಯೇ ಲ್ಯಾಂಡ್‌ ಆಗಲಿದೆ. ಚಂದ್ರಯಾನ 4ರಲ್ಲಿ ಚಂದ್ರನ ಅಂಗಳದಿಂದ ಕಲ್ಲು ಹಾಗೂ ಮಣ್ಣನ್ನು ಭಾರತಕ್ಕೆ ತರುವುದು ಪ್ರಮುಖ ಉದ್ದೇಶವಾಗಿದೆ” ಎಂದು ತಿಳಿಸಿದ್ದಾರೆ.

“ಚಂದ್ರನ ಅಂಗಳದಲ್ಲಿ ವೈಜ್ಞಾನಿಕವಾಗಿ ಸಂಶೋಧನೆ ಕೈಗೊಳ್ಳಲು ಸಾಧ್ಯವಿರುವ ಪ್ರದೇಶಗಳಿಂದ ಕಲ್ಲು ಹಾಗೂ ಮಣ್ಣಿನ ಮಾದರಿಗಳನ್ನು ತಂದು, ಅದರ ಕುರಿತು ಅಧ್ಯಯನ ಮಾಡಲಾಗುತ್ತದೆ. ಇದು ಚಂದ್ರನ ಅಂಗಳದ ಕಾಲಮಾನದ ಪ್ರಕಾರ ಒಂದು ದಿನ ಆದರೆ, ಭೂಮಿಯ 14 ದಿನ ಕಾರ್ಯಾಚರಣೆ ಕೈಗೊಳ್ಳಲಿದೆ. ಹಲವು ಸವಾಲುಗಳ ಮಧ್ಯೆ ಯಶಸ್ಸು ಸಾಧಿಸಲು ಇಸ್ರೋ ಹೊರಟಿದೆ” ಎಂದು ಮಾಹಿತಿ ನೀಡಿದರು.

2023ರ ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ LVM3 ರಾಕೆಟ್‌ನ ಮೂಲಕ ಉಡಾವಣೆಗೊಂಡ ಚಂದ್ರಯಾನ-3, ಒಂದು ತಿಂಗಳ ಕಾಲ ಬಾಹ್ಯಾಕಾಶ ಹಾರಾಟದ ನಂತರ ಆಗಸ್ಟ್ 23ರಂದು ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿಯಿತು. ಆ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್‌ ಲ್ಯಾಂಡ್‌ ಆದ ಜಗತ್ತಿನ ಮೊದಲ ಮಿಷನ್‌ ಎಂಬ ಖ್ಯಾತಿಗೆ ಭಾಜನವಾಯಿತು. ಇದರೊಂದಿಗೆ ಇಸ್ರೋ ಮೈಲುಗಲ್ಲು ಸ್ಥಾಪಿಸಿತು.

ಅಷ್ಟೇ ಅಲ್ಲ, ಚಂದ್ರಯಾನ 3 ಮಿಷನ್‌ ಲ್ಯಾಂಡ್‌ ಆದ ಪ್ರದೇಶವನ್ನು ಶಿವಶಕ್ತಿ ಎಂಬುದಾಗಿ ಕರೆಯಲು ಅಂತಾರಾಷ್ಟ್ರೀಯ ಖಗೋಳ ಒಕ್ಕೂಟವು (International Astronomical Union) ಮಾರ್ಚ್‌ 19ರಂದು ಅನುಮತಿ ನೀಡಿದೆ. ಇದರೊಂದಿಗೆ ಬಾಹ್ಯಾಕಾಶ ನೌಕೆ ಇಳಿದ ಪ್ರದೇಶವೀಗ ಅಧಿಕೃತವಾಗಿ ಶಿವಶಕ್ತಿ ಪಾಯಿಂಟ್‌ ಎನಿಸಿದೆ. ಚಂದ್ರಯಾನ 3 ಮಿಷನ್‌ನ ಯಶಸ್ಸು ಇಸ್ರೋ ಆತ್ಮವಿಶ್ವಾಸವನ್ನು ನೂರ್ಮಡಿಗೊಳಿಸುವ ಜತೆಗೆ ಜಾಗತಿಕ ಖ್ಯಾತಿಯನ್ನೂ ತಂದುಕೊಟ್ಟಿದೆ. ಚಂದ್ರಯಾನ 4 ಮಿಷನ್‌ ಕೈಗೊಳ್ಳಲು ಇಷ್ಟೊಂದು ಆತ್ಮವಿಶ್ವಾಸ, ಉತ್ಸಾಹ ಬರಲು ಚಂದ್ರಯಾನ 3 ಮಿಷನ್‌ನ ಯಶಸ್ಸೇ ಕಾರಣವಾಗಿದೆ.

ಇದನ್ನೂ ಓದಿ: Chandrayaan 3: ಚಂದ್ರಯಾನ 3 ಆಗುತ್ತಿತ್ತು ಛಿದ್ರ; ಆ 4 ಸೆಕೆಂಡ್‌ಗಳಲ್ಲೇ ಮಿಷನ್‌ ಬಚಾವ್‌ ಆಗಿದ್ದು ಹೇಗೆ?

Exit mobile version