Site icon Vistara News

Rajya Sabha | ಬಿಜೆಪಿ ವಿರುದ್ದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಟೀಕೆ, ರಾಜ್ಯಸಭೆಯಲ್ಲಿ ಕೋಲಾಹಲ!

Kharge and Piyush @ Rajya Sabha

ನವದೆಹಲಿ: ಬಿಜೆಪಿ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಆಡಿರುವ ಮಾತುಗಳು ಮಂಗಳವಾರ ಸಂಸತ್ತಿನಲ್ಲಿ ಪ್ರತಿಧ್ವನಿಸಿದವು. ಖರ್ಗೆ ಅವರಿಗೆ ತಿರುಗೇಟು ನೀಡಿರುವ ಬಿಜೆಪಿ, ಕಾಂಗ್ರೆಸ್ ಅಧ್ಯಕ್ಷರು ಸದನದಲ್ಲಿ ಬೇಷರತ್ ಆಗಿ ಕ್ಷಮೆ ಕೋರಬೇಕೆಂದು ಆಗ್ರಹಿಸಿದೆ. ಆದರೆ, ಸಂಸತ್ತಿನ ಹೊರಗೆ ಟೀಕೆ ಮಾಡಿದ್ದರಿಂದ ಯಾವುದೇ ಕಾರಣಕ್ಕೂ ಸದನದಲ್ಲಿ ಕ್ಷಮೆ ಕೋರುವುದಿಲ್ಲ ಎಂದು ಖರ್ಗೆ ಅವರು ಹೇಳಿದ್ದು, ರಾಜ್ಯಸಭೆಯಲ್ಲಿ(Rajya Sabha) ಗಲಾಟೆಗೆ ಕಾರಣವಾಯಿತು.

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯನ್ನು ಬಿಜೆಪಿ ಭಾರತ್ ತೋಡೋ ಯಾತ್ರೆ ಎಂದು ಟೀಕಿಸುತ್ತಿತ್ತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜಸ್ಥಾನದ ಅಲವರ್‌ನಲ್ಲಿ ಸೋಮವಾರ ಮಾತನಾಡಿ, ಈ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರಂಥ ನಾಯಕರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಆದರೆ, ದೇಶಕ್ಕಾಗಿ ಬಿಜೆಪಿಯ ಒಂದು ನಾಯಿಯಾದರೂ ಸತ್ತಿದೆಯೇ? ಹಾಗಿದ್ದೂ ಅವರು(ಬಿಜೆಪಿ) ತಮ್ಮನ್ನು ತಾವು ದೇಶಭಕ್ತರು ಎಂದು ಕರೆದುಕೊಳ್ಳುತ್ತಾರೆ. ನಾವೇನಾದರೂ ಹೇಳಿದರೆ ನಮ್ಮನ್ನು ದೇಶದ್ರೋಹಿಗಳೆಂದು ಜರಿಯುತ್ತಾರೆಂದು ಟೀಕಿಸಿದ್ದರು.

ಇದೇ ವೇಳೆ, ಸಂಸತ್ತಿನಲ್ಲಿ ಚೀನಾ-ಭಾರತ ಗಡಿ ವಿಷಯ ಕುರಿತು ಚರ್ಚೆಗೆ ಬಿಜೆಪಿ ಅವಕಾಶ ನೀಡುತ್ತಿಲ್ಲ. ಹೊರಗೆ ಅವರು(ಬಿಜೆಪಿ) ಸಿಂಹದಂತೆ ವರ್ತಿಸುವ ಅವರು, ಇಲ್ಲಿ ಇಲಿಯಂತೆ ಇರುತ್ತಾರೆಂದು ಉಗ್ರವಾಗಿ ಟೀಕಿಸಿದ್ದರು.

ಮಂಗಳವಾರ ರಾಜ್ಯಸಭೆ ಕಲಾಪ ಶುರುವಾಗುತ್ತಿದ್ದಂತೆ ಬಿಜೆಪಿಯು ಖರ್ಗೆ ಅವರ ಹೇಳಿಕೆಯನ್ನು ಖಂಡಿಸಿ, ಕ್ಷಮೆ ಕೋರುವಂತೆ ಆಗ್ರಹಿಸಿತು. ”ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಅವರು ಆಕ್ಷೇಪಾರ್ಹ ಭಾಷೆ ಬಳಸಿದ್ದು ಮತ್ತು ಸುಳ್ಳು ಹರಡಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ವಿರುದ್ಧ ಅಲವರ್‌ನಲ್ಲಿ ಆಕ್ಷೇಪಾರ್ಹ ಮಾತನಾಡಿದ್ದಕ್ಕೆ ಅವರು ಕ್ಷಮೆಯಾಚಿಸಬೇಕು” ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಒತ್ತಾಯಿಸಿದರು.

ಇದರಿಂದ ರಾಜ್ಯಸಭೆಯಲ್ಲಿ ಗದ್ದಲ ಶುರುವಾಯಿತು. ಆಗ ಮಧ್ಯಪ್ರವೇಶಿಸಿದ ರಾಜ್ಯಸಭೆ ಚೇರ್ಮನ್ ಜಗದೀಪ್ ಧನಕರ್ ಅವರು, ಸಂಸತ್ತಿನ ಹೊರಗೆ ಟೀಕೆ ಮಾಡಲಾಗಿದೆ ಎಂದು ಪರಿಸ್ಥಿತಿಯನ್ನು ನಿಯಂತ್ರಿಸುವ ಪ್ರಯತ್ನ ಮಾಡಿದರು. ಅಲ್ಲದೇ, ದೇಶದ 135 ಕೋಟಿ ಜನರು ನಮ್ಮನ್ನು ನೋಡುತ್ತಿದ್ದಾರೆ ಎಂದು ಸಂಸದರನ್ನು ಎಚ್ಚರಿಸುವ ಪ್ರಯತ್ನ ಮಾಡಿದರು.

ಕ್ಷಮೆ ಕೇಳಲ್ಲ ಎಂದ ಖರ್ಗೆ
ಬಿಜೆಪಿಯ ಕ್ಷಮೆ ಆಗ್ರಹದ ಕುರಿತು ವ್ಯಂಗ್ಯ ಮಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಒಂದು ವೇಳೆ ಅದೇ ಟೀಕೆಯನ್ನು ನಾನೀಗ ಮತ್ತೆ ಮಾಡಿದರೆ ಅವರಿಗೆ(ಬಿಜೆಪಿ) ಬಹಳ ಕಷ್ಟವಾಗುತ್ತದೆ. ಯಾಕೆಂದರೆ, ಸ್ವಾತಂತ್ರ ಹೋರಾಟದಲ್ಲಿ ಕ್ಷಮೆ ಕೇಳಿದವರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಿಂದ ಕ್ಷಮೆಗೆ ಆಗ್ರಹಿಸುತ್ತಿದ್ದಾರೆ. ಈ ದೇಶಕ್ಕಾಗಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಪ್ರಾಣ ನೀಡಿದ್ದಾರೆ. ನೀವೇನು ಮಾಡಿದ್ದೀರಿ? ದೇಶಕ್ಕಾಗಿ ಯಾರು ಪ್ರಾಣ ತೆತ್ತಿದ್ದಾರೆಂಬುದು ಗೊತ್ತೆ ನಿಮಗೆ ಎಂದು ಮತ್ತೆ ವಾಗ್ದಾಳಿ ನಡೆಸಿದರು.

ಪಿಯೂಷ್ ತಿರುಗೇಟು
ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿರುಗೇಟು ನೀಡಿದ ಪಿಯೂಷ್ ಗೋಯಲ್ ಅವರು, ಅವರಿಗೆ(ಕಾಂಗ್ರೆಸ್) ಅವರ ಇತಿಹಾಸ ಮರೆತಿರುವ ಹಾಗಿದೆ. ಕಾಂಗ್ರೆಸ್‌ನಿಂದಾಗಿಯೇ ಇಂದು ಜಮ್ಮು ಮತ್ತು ಕಾಶ್ಮೀರ ಯಾವ ಪರಿಸ್ಥಿತಿಯಲ್ಲಿದೆ ಎಂಬುದನ್ನು ಮೆರತಿದ್ದಾರೆ, ಪಾಕಿಸ್ತಾನದ ಬೆದರಿಕೆ, ಚೀನಾದ ಸಂಘರ್ಷ ಹಾಗೂ ಬಿ.ಆರ್ ಅಂಬೇಡ್ಕರ್ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಅವಮಾನ ಮಾಡಿದ್ದು ಯಾರೆಂದು ಕಾಂಗ್ರೆಸ್‌ಗೆ ಕಟುಕಿದರು.

ಇದನ್ನೂ ಓದಿ | Mallikarjun Kharge | ಬಿಜೆಪಿಯ ಒಂದು ನಾಯಿಯಾದರೂ ದೇಶಕ್ಕಾಗಿ ಸತ್ತಿದೆಯೇ? ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ ವಾಗ್ದಾಳಿ

Exit mobile version