Site icon Vistara News

Charminar Express: ಹಳಿತಪ್ಪಿದ ಚಾರ್‌ಮಿನಾರ್‌ ಎಕ್ಸ್‌ಪ್ರೆಸ್‌ ರೈಲು; 6 ಜನಕ್ಕೆ ಗಂಭೀರ ಗಾಯ

Charminar Express Train

Charminar Express derails In Telangana at Nampally Railway station, 5 injured

ಹೈದರಾಬಾದ್:‌ ತೆಲಂಗಾಣದ ನಾಂಪಳ್ಳಿ ರೈಲು ನಿಲ್ದಾಣದಲ್ಲಿ (Nampally Railway Station) ಚಾರ್‌ಮಿನಾರ್‌ ಎಕ್ಸ್‌ಪ್ರೆಸ್‌ ರೈಲು (Charminar Express) ಹಳಿ ತಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬುಧವಾರ (ಜನವರಿ 10) ಬೆಳಗ್ಗೆ 9.15ರ ಸುಮಾರಿಗೆ ರೈಲು ಹಳಿ (Train Derailed) ತಪ್ಪಿದೆ. ರೈಲಿನ ಮೂರು ಬೋಗಿಗಳು ಹಳಿ ತಪ್ಪಿದ ಕಾರಣ ಆರು ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

“ನಾಂಪಳ್ಳಿ ರೈಲು ನಿಲ್ದಾಣವು ಟರ್ಮಿನಲ್‌ ಸ್ಟೇಷನ್‌ ಆಗಿರುವ ಕಾರಣ ಇಲ್ಲಿಗೆ ರೈಲುಗಳ ಸಂಚಾರ ಕೊನೆಗೊಳ್ಳುತ್ತದೆ. ಹಾಗಾಗಿ, ಎಲ್ಲ ರೈಲುಗಳು ರೈಲು ನಿಲ್ದಾಣಗಳು ಇಲ್ಲಿ ನಿಲುಗಡೆಯಾಗುತ್ತವೆ. ಆದರೆ, ಚಾರ್‌ಮಿನಾರ್‌ ಎಕ್ಸ್‌ಪ್ರೆಸ್‌ ರೈಲು ನಿಲ್ದಾಣದಲ್ಲಿ ನಿಂತಿಲ್ಲ. ಇದರಿಂದಾಗಿ ರೈಲಿನ ಮೂರು ಬೋಗಿಗಳು ಹಳಿ ತಪ್ಪಿವೆ. ಬೋಗಿಗಳ ಬಾಗಿಲಿನ ಬಳಿ ನಿಂತವರಿಗೆ ಇದರಿಂದ ಗಾಯಗಳಾಗಿವೆ. ರೈಲ್ವೆ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಸೌತ್‌ ಸೆಂಟ್ರಲ್‌ ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ (PRO) ರಾಕೇಶ್ ಮಾಹಿತಿ ನೀಡಿದ್ದಾರೆ.

ರೈಲು ನಿಲ್ದಾಣ ಇದ್ದ ಕಾರಣ ವೇಗವು ಜಾಸ್ತಿ ಇರಲಿಲ್ಲ. ಹಾಗೊಂದು ವೇಳೆ ಅತಿ ವೇಗದಲ್ಲಿ ರೈಲು ಬಂದಿದ್ದರೆ ಭೀಕರ ದುರಂತ ಸಂಭವಿಸುತ್ತಿತ್ತು ಎಂದು ಹೇಳಲಾಗುತ್ತಿದೆ. ಆದರೂ, ಸರಿಯಾದ ಸ್ಥಳದಲ್ಲಿ ರೈಲು ನಿಲ್ಲದ ಕಾರಣ ಟರ್ಮಿನಲ್‌ಗೆ ಡಿಕ್ಕಿಯಾಗಿದೆ. ಬಾಗಿಲಿನ ಬಳಿ ನಿಂತವರಿಗೆ ಮಾತ್ರ ಗಾಯಗಳಾಗಿವೆ. ಪ್ರಕರಣದ ಕುರಿತು ರೈಲ್ವೆ ಇಲಾಖೆಯು ತನಿಖೆಗೆ ಆದೇಶಿಸಿದೆ ಎಂದು ತಿಳಿದುಬಂದಿದೆ. ರೈಲು ಚೆನ್ನೈನಿಂದ ಆಗಮಿಸಿತ್ತು ಎಂಬುದಾಗಿ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Andhra Train Accident: ಆಂಧ್ರಪ್ರದೇಶ ರೈಲು ಅಪಘಾತದಲ್ಲಿ ಮಡಿದವರ ಸಂಖ್ಯೆ 13ಕ್ಕೆ ಏರಿಕೆ, ಮೃತರಿಗೆ 12 ಲಕ್ಷ ರೂ. ಪರಿಹಾರ

ಕಳೆದ ಕೆಲ ತಿಂಗಳ ಹಿಂದೆ ತಮಿಳುನಾಡಿನ ಚೆಂಗಲ್‌ಪಟ್ಟು ಜಿಲ್ಲೆಯಲ್ಲಿ (Chengalpattu District) ರೈಲು ಹರಿದು ಕರ್ನಾಟಕದ (Karnataka) ಮೂವರು ಬಾಲಕರು ಮೃತಪಟ್ಟಿದ್ದರು. ಜಿಲ್ಲೆಯ ಹೊರವಲಯದ ಊರಪಕ್ಕಂ ಬಳಿ ಮೂವರು ಬಾಲಕರು ರೈಲು ಹಳಿ ದಾಟುವಾಗ ವೇಗವಾಗಿ ಬಂದ ರೈಲು (Train) ಅವರ ಮೇಲೆ ಹರಿದಿತ್ತು. ಮೂವರು ಬಾಲಕರು ಕೂಡ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಮೂವರು ಬಾಲಕರು ಕೂಡ ವಿಶೇಷ ಚೇತನರಾಗಿದ್ದಾರೆ. ಸುರೇಶ್‌ಗೆ (15) ಕಿವಿ ಕೇಳಿಸುತ್ತಿರಲಿಲ್ಲ. ರವಿಗೆ (10) ಮಾತು ಬರುತ್ತಿರಲಿಲ್ಲ. ಹಾಗೆಯೇ, 10 ವರ್ಷದ ಮಂಜುನಾಥ್‌ಗೂ ಕಿವಿ ಕೇಳಿಸುತ್ತಿರಲಿಲ್ಲ. ಇವರಿಗೆ ಕಿವಿ ಕೇಳಿಸದಿರುವುದೇ ದುರಂತಕ್ಕೆ ಕಾರಣ ಎನ್ನಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version