ಭೋಪಾಲ್: ನಶಿಸಿ ಹೋಗಿದ್ದ ಚೀತಾಗಳಿಗೆ ಮತ್ತೆ ಆಶ್ರಯ ಕಲ್ಪಿಸುವ ನಿಟ್ಟಿನಲ್ಲಿ ಭಾರತವು ಕಳೆದ ವರ್ಷ ನಮೀಬಿಯಾದಿಂದ 8 ಚೀತಾಗಳನ್ನು ತಂದು, ಮಧ್ಯ ಪ್ರದೇಶದ ಕುನೋ ನ್ಯಾಷನಲ್ ಪಾರ್ಕ್‌ನಲ್ಲಿ (kuno national park) ಬಿಡುಲಾಗಿತ್ತು. ಈ ಎಂಟು ಚೀತಾಗಳ ಪೈಕಿ ಸಾಶಾ ಎಂಬ ಚೀತಾ ಅನಾರೋಗ್ಯಕ್ಕೀಡಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸಾಶಾ ಚೀತಾ ಕಿಡ್ನಿಗೆ ಸೋಂಕು ತಗುಲಿದೆ. ಇದರೊಂದಿಗೆ ಚೀತಾ ಮರುಪರಿಚಯ ಕಾರ್ಯಕ್ರಮ ವಿಫಲವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ(Kuno Cheetah Health Update).
ಸೋಮವಾರದಂದು ದೈನಂದಿನ ಮೇಲ್ವಿಚಾರಣೆಯ ಸಂದರ್ಭದಲ್ಲಿ ಸಾಶಾ ಚೀತಾ ಆಯಾಸ ಮತ್ತು ಬಳಲುತ್ತಿದ್ದು ಗೊತ್ತಾಗಿದೆ. ಕೂಡಲೇ ಈ ಚೀತಾಗೆ ಟ್ರಾನ್ಸ್‌ಕ್ವಿಲೈಸ್ ಮಾಡಿ, ಕ್ವಾರಂಟೈನ್ ಆವರಣಕ್ಕೆ ಸ್ಥಳಾಂತರಿಸಲಾಯಿತು. ಆರೋಗ್ಯ ತಪಾಸಣೆಯಲ್ಲಿ ಚೀತಾಗಿ ಕಿಡ್ನಿ ಸಂಬಂಧಿ ಸಮಸ್ಯೆ ಇರುವುದು ಗೊತ್ತಾಯಿತು. ಸದ್ಯಕ್ಕೆ ವೈದ್ಯರ ನಿಗಾದಲ್ಲಿ ಸಾಶಾ ಚೀತಾ ಇದ್ದು, ಉಳಿದ ಚೀತಾಗಳಿಗೆ ಯಾವುದೇ ಆರೋಗ್ಯ ಸಮಸ್ಯೆ ಕಂಡು ಬಂದಿಲ್ಲ ಎಂದು ಕುನೋ ನ್ಯಾಷನಲ್ ಪಾರ್ಕ್‌ನ ವಿಭಾಗೀಯ ಅರಣ್ಯಾಧಿಕಾರಿ(ಡಿಎಫ್ಒ) ಕುಮಾರ್ ವರ್ಮಾ ಅವರು ಹೇಳಿದ್ದಾರೆ.
ಕಳೆದ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಬಂದಿದ್ದ ಚೀತಾಗಳು
ಭಾರತದಲ್ಲಿ ಮತ್ತೆ ಚೀತಾಗಳ ಸಂತತಿ ಹೆಚ್ಚಿಸುವುದಕ್ಕಾಗಿ, ನಮೀಬಿಯಾದಿಂದ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಚೀತಾಗಳನ್ನು ಅಧಿಕೃತವಾಗಿ ತರಿಸಿಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಕುನೊ ವನ್ಯಧಾಮದಲ್ಲಿ ಈ ಚೀತಾಗಳನ್ನು ರಿಲೀಸ್ ಮಾಡುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
ಇದನ್ನೂ ಓದಿ: ಮತ್ತೆ ಭಾರತಕ್ಕೆ ಬರಲಿವೆ 12 ಚೀತಾಗಳು; ಕರೆತರಲು ದಕ್ಷಿಣ ಆಫ್ರಿಕಾಕ್ಕೆ ಹೊರಟ ಪ್ರಮುಖ ಅಧಿಕಾರಿಗಳು
ಮೊದಲ ಹಂತದಲ್ಲಿ ಬಂದಿರುವ ಚೀತಾಗಳು 8. ಇನ್ನೂ 12 ಚೀತಾಗಳು ಬರಲಿವೆ. ಇದರಲ್ಲಿ 3 ಗಂಡು, 5 ಹೆಣ್ಣು. ಮುಂದಿನ ಹಂತದಲ್ಲಿ ಈ ವರ್ಷದ ಕೊನೆಯಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳು ಆಗಮಿಸಲಿವೆ ಎಂದು ಹೇಳಲಾಗಿತ್ತಾದರೂ, ಬಂದಿಲ್ಲ. ಈಗ ಭಾರತದಲ್ಲಿರುವ ಚೀತಾಗಳಲ್ಲಿ ಎರಡು ಸಹೋದರರು- 5.5 ವರ್ಷದವು. ನಮೀಬಿಯಾದ ಒಜಿವರಾಂಗೊ (Otjiwarongo) ಖಾಸಗಿ ವನ್ಯಧಾಮದಿಂದ ಬಂದಿವೆ.
ಇನ್ನೊಂದು ಎರಿಂಡಿ ಖಾಸಗಿ ಗೇಮ್ ರಿಸರ್ವ್‌ನಿಂದ ಬಂದ 4.5 ವರ್ಷದ ಗಂಡು ಚೀತಾ. ಹೆಣ್ಣು ಚೀತಾಗಳಲ್ಲಿ 5 ವರ್ಷದ ಒಂದು 2017ರಲ್ಲಿ ನಮೀಬಿಯಾದ ಒಂದು ಹೊಲದ ಸಮೀಪ ಪತ್ತೆಯಾಗಿದ್ದು. ಅಷ್ಟೇ ಪ್ರಾಯದ ಇನ್ನೊಂದು ಕಂಜಾಬ್ ಗ್ರಾಮದ ಬಳಿ ದೊರೆಯಿತು. 2.5 ವರ್ಷದ ಹೆಣ್ಣು ಎರಿಂಡಿ ವನ್ಯಧಾಮದ್ದು. ಗೊಬಾಬಿಸ್‌ನ ನೀರಿನ ಝರಿಯ ಬಳಿ ದೊರೆತ 2 ವರ್ಷದ ಹೆಣ್ಣು ಹಾಗೂ ಪಂಜರದಲ್ಲಿ ಸಿಕ್ಕಬಿದ್ದ 3 ವರ್ಷದ ಹೆಣ್ಣು ಜತೆಗಿವೆ. ಈ ಎಂಟು ಚೀತಾಗಳು ಸದ್ಯ ಭಾರತದ ಅರಣ್ಯದಲ್ಲಿವೆ.