ನವ ದೆಹಲಿ: ದಕ್ಷಿಣ ಆಫ್ರಿಕಾದಿಂದ ತಂದ ಉದಯ್ ಎಂಬ ಚೀತಾ ಭಾನುವಾರ ಸಾವಿಗೀಡಾಗಿದೆ. ಇದು ಒಂದು ತಿಂಗಳಲ್ಲಿ ಸಂಭವಿಸುತ್ತಿರುವ 2ನೇ ಚೀತಾದ ಸಾವಾಗಿದೆ.
ಫೆಬ್ರವರಿ 18ರಂದು ದಕ್ಷಿಣ ಆಫ್ರಿಕಾದ ವಾಟರ್‌ಬರ್ಗ್ ಬಯೋಸ್ಫಿಯರ್‌ನಿಂದ ಇತರ ಇತರ 11 ಚೀತಾಗಳೊಂದಿಗೆ ಇದನ್ನು ತರಲಾಗಿತ್ತು. ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಇವುಗಳನ್ನು ಸ್ಥಳಾಂತರಿಸಲಾಗಿತ್ತು.
ಮರಣೋತ್ತರ ಪರೀಕ್ಷೆ ಬಳಿಕ ಉದಯ್ ಸಾವಿಗೆ ಕಾರಣ ತಿಳಿಯಲಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಬೆಳಿಗ್ಗೆ 9 ಗಂಟೆಯ ಸುಮಾರಿಗೆ ದಿನನಿತ್ಯದ ತಪಾಸಣೆಯ ಸಮಯದಲ್ಲಿ, ಉದಯ್ ಆಲಸ್ಯ ಸ್ಥಿತಿಯಲ್ಲಿ ಕುಳಿತಿರುವುದು ಕಂಡುಬಂತು. ತಜ್ಞ ವೈದ್ಯರು ಆರೈಕೆ ನೀಡಿದಾಗ ಉದಯ್ ಎದ್ದು ಸ್ವಲ್ಪ ಓಡಾಡಿತು. ವನ್ಯಜೀವಿ ವೈದ್ಯಕೀಯ ತಂಡ ಚೀತಾವನ್ನು ಪರಿಶೀಲಿಸಿದಾಗ ಉದಯ್ ಅಸ್ವಸ್ಥಗೊಂಡಿರುವುದು ಕಂಡುಬಂತು. ಕೂಡಲೇ ಚೀತಾ ಸಂರಕ್ಷಣಾ ನಿಧಿಯ ವೈದ್ಯರು ಮತ್ತು ತಜ್ಞರು ತಕ್ಷಣವೇ ಕ್ವಾರಂಟೈನ್‌ಗೆ ಅದನ್ನು ಸ್ಥಳಾಂತರಿಸಿದರು. ಎರಡು ಗಂಟೆಗಳ ನಂತರ ಅದು ಪ್ರಜ್ಞೆಯನ್ನು ಕಳೆದುಕೊಂಡಿತು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್‌ಗೆ ಸ್ಥಳಾಂತರಿಸಲಾಯಿತು. ಭಾನುವಾರ ಸಂಜೆ ಚಿಕಿತ್ಸೆ ನೀಡುತ್ತಿದ್ದಾಗಲೇ ಉದಯ್ ಮೃತಪಟ್ಟಿದೆ ಎಂದು ಅರಣ್ಯದ ಮುಖ್ಯ ವನ್ಯಜೀವಿ ವಾರ್ಡನ್ ಜೆಎಸ್ ಚೌಹಾಣ್ ಹೇಳಿದ್ದಾರೆ.
ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಒಂದು ತಿಂಗಳಲ್ಲಿ ಸಾವನ್ನಪ್ಪಿದ ಎರಡನೇ ಚಿರತೆ ಉದಯ್. ಕಳೆದ ತಿಂಗಳು, ನಮೀಬಿಯಾದಿಂದ ತಂದ ಮೊದಲ ಬ್ಯಾಚ್‌ನಲ್ಲಿದ್ದ ಚೀತಾ ಸಶಾ ಮೂತ್ರಪಿಂಡದ ವೈಫಲ್ಯದಿಂದ ಸಾವನ್ನಪ್ಪಿತ್ತು. ಫೆಬ್ರವರಿ 18ರಂದು ದಕ್ಷಿಣ ಆಫ್ರಿಕಾದ ವಾಟರ್‌ಬರ್ಗ್‌ನಿಂದ ಉದಯ್ ಅನ್ನು ಭಾರತಕ್ಕೆ ಸ್ಥಳಾಂತರಿಸಲಾಗಿತ್ತು. ಕಳೆದ ಮಂಗಳವಾರ ಅದನ್ನು ಕ್ವಾರಂಟೈನ್ ಆವರಣದಿಂದ ಮುಕ್ತ ಆವರಣಕ್ಕೆ ವರ್ಗಾಯಿಸಲಾಗಿತ್ತು. ಇತ್ತೀಚೆಗೆ ಪರಿಸರ ಮತ್ತು ಅರಣ್ಯ ಸಚಿವಾಲಯ ಈ ಚೀತಾಗೆ ಉದಯ್ ಎಂದು ಹೆಸರಿಸಿತ್ತು.
ಉದಯ್ ದೀರ್ಘಕಾಲದ ಒತ್ತಡದಿಂದ ಬಳಲುತ್ತಿತ್ತು ಎಂದು ದಕ್ಷಿಣ ಆಫ್ರಿಕಾದ ಚಿರತೆ ತಜ್ಞ ವಿನ್ಸೆಂಟ್ ವ್ಯಾನ್ ಡೆರ್ ಮೆರ್ವೆ ಹೇಳಿದ್ದಾರೆ. ಮೆರ್ವೆ ಮೆಟಾಪೋಪ್ಯುಲೇಷನ್ ಯೋಜನೆಯ ಮುಖ್ಯಸ್ಥ ಮತ್ತು ಸ್ಥಳಾಂತರಕ್ಕಾಗಿ ಚೀತಾಗಳನ್ನು ಸೆರೆಹಿಡಿದವರು ಇವರು. ಇತರ 11 ಚೀತಾಗಳಂತೆ ಇದೂ ಸಂಪೂರ್ಣ ವನ್ಯ ಜೀವಿಯಾಗಿತ್ತು. ಟ್ರಾನ್ಸ್‌ಲೊಕೇಶನ್ ಪ್ರಾಜೆಕ್ಟ್‌ಗಾಗಿ ಜುಲೈ 2022ರಲ್ಲಿ ಬೊಮಾಗೆ ಸ್ಥಳಾಂತರಗೊಳ್ಳುವ ಮೊದಲು ಅದು ತುಂಬಾ ಆರೋಗ್ಯವಾಗಿತ್ತು. ಸೆರೆಯಲ್ಲಿ 10 ತಿಂಗಳು ಕಳೆದ ಬಳಿಕ ಅದು ಫಿಟ್‌ನೆಸ್ ಕಳೆದುಕೊಂಡಿತು ಮತ್ತು ದೀರ್ಘಕಾಲದ ಒತ್ತಡದಿಂದ ಬಳಲುತ್ತಿತ್ತು ಎಂದು ಮೆರ್ವೆ ಹೇಳಿದ್ದಾರೆ. ಈ ಪ್ರಾಣಿಗಳು ತಾವು ಮೂಲತಃ ಸೇರಿರುವ ಕಾಡಿಗೆ ಹಿಂತಿರುಗಬೇಕು. ಅವುಗಳು ಪಂಜರದಲ್ಲಿ ಸಂತೃಪ್ತವಾಗಿಲ್ಲ ಎಂದಿದ್ದಾರೆ ಅವರು.
ಉದಯ್ ಸಾವಿನ ನಂತರ, ಸಿಯಾಯಾಗೆ ಜನಿಸಿದ ನಾಲ್ಕು ಮರಿಗಳನ್ನು ಹೊರತುಪಡಿಸಿ 18 ಚಿರತೆಗಳು ರಾಷ್ಟ್ರೀಯ ಉದ್ಯಾನವನದಲ್ಲಿ ಉಳಿದಿವೆ. ಕಳೆದ ವರ್ಷ ಸೆಪ್ಟೆಂಬರ್ 17ರಂದು ಪ್ರಧಾನಿ ಮೋದಿ ನಮೀಬಿಯಾದಿಂದ ತರಿಸಿದ ಎಂಟು ಚಿರತೆಗಳನ್ನು ಬಿಡುಗಡೆ ಮಾಡಿದ್ದರು. 1952ರಲ್ಲಿ ಭಾರತದಲ್ಲಿ ಅಳಿವನ್ನಪ್ಪಿದ್ದ ಚೀತಾ ಸಂತತಿಯನ್ನು ಪುನಃಸ್ಥಾಪಿಸಲು ಈ ಸ್ಥಳಾಂತರ ಯೋಜನೆ ನಡೆದಿತ್ತು.
ಇದನ್ನೂ ಓದಿ: Cheetah Died: ನಮೀಬಿಯಾದಿಂದ ಬಂದ 8 ಚೀತಾಗಳ ಪೈಕಿ ಹೆಣ್ಣು ಚೀತಾ ಸಾಶಾ ಸಾವು, ಕಾರಣವೇನು?