ನವದೆಹಲಿ: ಭಾರತದಲ್ಲಿ ಅಳಿಸಿ ಹೋಗಿರುವ ಚೀತಾ ಸಂತತಿ ಹೆಚ್ಚಿಸುವುದಕ್ಕಾಗಿ ಕಳೆದ ವರ್ಷ 8 ಚೀತಾಗಳನ್ನು (Cheetah) ನಮೀಬಿಯಾದಿಂದ ತಂದು ಮಧ್ಯಪ್ರದೇಶದ ಕುನೋ ನ್ಯಾಷನಲ್ ಪಾರ್ಕ್‌ನಲ್ಲಿ ಬಿಡಲಾಗಿತ್ತು. ಈ ಪೈಕಿ ಸಾಶಾ ಎಂಬ ಹೆಣ್ಣು ಚಿರತೆ ಕಿಡ್ನಿ ವೈಫಲ್ಯದಿಂದ ಎರಡು ದಿನಗಳ ಹಿಂದೆಯಷ್ಟೇ ಮೃತಪಟ್ಟ ದುಃಖದ ನಡುವೆ, ಖುಷಿಯ ಸುದ್ದಿಯೊಂದು ಹೊರ ಬಿದ್ದಿದೆ. ನಮೀಬಿಯಾದಿಂದ ಬಂದ ಮತ್ತೊಂದು ಚಿರತೆ 4 ಮರಿಗಳಿಗೆ ಜನ್ಮ ನೀಡಿದೆ. ಈ ಖುಷಿಯ ಸಂಗತಿಯನ್ನು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ರಿಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ವಂಡರ್‌ಫುಲ್ ನ್ಯೂಸ್ ಎಂದು ಹೇಳಿದ್ದಾರೆ.
Cheetah: ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರ ಟ್ವೀಟ್
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ 2022ರ ಸೆಪ್ಟೆಂಬರ್ 17ರಂದು ಭಾರತಕ್ಕೆ ಸ್ಥಳಾಂತರಗೊಂಡ ಚೀತಾಗಳ ಪೈಕಿ ಒಂದು ಚೀತಾಗೆ ನಾಲ್ಕು ಮರಿಗಳು ಜನಿಸಿದವು ಎಂದು ಹಂಚಿಕೊಳ್ಳಲು ನಾನು ಸಂತೋಷಪಡುತ್ತೇನೆ ಎಂದು ಭೂಪೇಂದ್ರ ಯಾದವ್ ಅವರು ಟ್ವೀಟ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಇಡೀ ಚೀತಾ ಪ್ರಾಜೆಕ್ಟ್ ತಂಡವನ್ನು ಅಭಿನಂದಿಸಿದ್ದಾರೆ. ಚೀತಾಗಳನ್ನು ಮತ್ತೆ ಭಾರತಕ್ಕೆ ತರಲು ಹಾಗೂ ಈ ಹಿಂದೆಯಾದ ತಪ್ಪುಗಳನ್ನು ಪರಿಸರ ತಪ್ಪುಗಳನ್ನು ಸರಿಪಡಿಸುತ್ತಿರುವ ತಂಡದ ಕೆಲಸ ಶ್ಲಾಘನೀಯ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಟ್ವೀಟ್
ಮಹತ್ವಾಕಾಂಕ್ಷೆಯ ಚೀತಾ ಮರುಪರಿಚಯ ಕಾರ್ಯಕ್ರಮದ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಸೆಪ್ಟೆಂಬರ್ 17 ರಂದು ತಮ್ಮ 72 ನೇ ಹುಟ್ಟುಹಬ್ಬದಂದು ನಮೀಬಿಯಾದಿಂದ ತರಲಾದ 8 ಚೀತಾಗಳನ್ನು ಮಧ್ಯಪ್ರದೇಶದ ಕುನೋ ನ್ಯಾಷನಲ್ ಪಾರ್ಕ್‌ಗೆ ಬಿಟ್ಟಿದ್ದರು. ಇಲ್ಲಿನ ಕ್ವಾರಂಟೈನ್ ಆವರಣದಲ್ಲಿ ಅವುಗಳನ್ನು ಇಡಲಾಗಿತ್ತು. ಸ್ವಲ್ಪ ದಿನಗಳ ಬಳಿಕ ಅವುಗಳನ್ನು ಕಾಡಿಗೆ ಬಿಡಲಾಗಿತ್ತು. ಇದರ ಮಧ್ಯೆಯೇ, ಕಳೆದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದಲೂ 12 ಚೀತಾಗಳನ್ನು ತಂದು ಕುನೋ ನ್ಯಾಷನಲ್ ಪಾರ್ಕ್‌ಗೆ ಬಿಡಲಾಗಿತ್ತು.
ನಮೀಬಿಯಾದ ಹೆಣ್ಣು ಚೀತಾ ಸಾಶಾ ಸಾವು
ನಮೀಬಿಯಾದಿಂದ ಭಾರತಕ್ಕೆ ತರಲಾದ 8 ಚೀತಾಗಳ(Cheetah Died) ಪೈಕಿ ಒಂದು ಹೆಣ್ಣು ಚೀತಾ ಸೋಮವಾರ ಮೃತಪಟ್ಟಿದೆ. ಮೃತ ಚೀತಾ ಸಾಶಾಗೆ (Sasha) ಕಳೆದ ಜನವರಿಯಿಂದ ಕಿಡ್ನಿ ಸೋಂಕಿನಿಂದ ಬಳಲುತ್ತಿತ್ತು. ಅಂದಿನಿಂದಲೂ ಈ ಚೀತಾವನ್ನು ತೀವ್ರ ವೈದ್ಯಕೀಯ ನಿಗಾದಲ್ಲಿಡಲಾಗಿತ್ತು. ಅಂತಿಮವಾಗಿ ಚೀತಾ ಸೋಮವಾರ ಕೊನೆಯುಸಿರೆಳೆದಿದೆ. ಉಳಿದ ಚೀತಾಗಳು ಆರೋಗ್ಯವಾಗಿವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Cheetah Reintroduction : ಸೌದಿ ದೊರೆ ಕೊಟ್ಟಿದ್ದ ಚೀತಾ ಸಾವು
ಭಾರತದಲ್ಲಿ ಚೀತಾ ಸಂತತಿ ಅವಸಾನ ಕಂಡಿದ್ದವು. ಭಾರತದಲ್ಲಿ ಮತ್ತೆ ಚೀತಾ ಸಂತತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತವು ಚೀತಾ ಮರುಪರಿಚಯ ಕಾರ್ಯಕ್ರಮವನ್ನು ರೂಪಿಸಿತ್ತು. ಅದರನ್ವಯ ಕಳೆದ ವರ್ಷದ ನಮೀಬಿಯಾದಿಂದ ಒಟ್ಟು 8 ಚೀತಾಗಳನ್ನು ತಂದು ಮಧ್ಯ ಪ್ರದೇಶ ಕುನೊ ನ್ಯಾಷನಲ್ ಪಾರ್ಕ್‌ನಲ್ಲಿ ಬಿಡಲಾಗಿತ್ತು. ಈಗ ಮೃತಪಟ್ಟಿರುವ ಸಾಶಾ, ಐದು ಹೆಣ್ಣು ಚಿರತೆಗಳ ಪೈಕಿ ಒಂದಾಗಿದೆ. ಭಾರತಕ್ಕೆ ಮತ್ತೆ ಚೀತಾಗಳನ್ನು ಪರಿಚಯಿಸುವ ಕಾರ್ಯಕ್ರಮವು ಭಾರೀ ಸುದ್ದಿಯಾಗಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹೆಮ್ಮೆ ಪಟ್ಟಿದ್ದರು. ಏತನ್ಮಧ್ಯೆ, ನಮೀಬಿಯಾದಿಂದ ತರಲಾಗಿರುವ ಚೀತಾಗಳು ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುವ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದರು.