ನವದೆಹಲಿ: ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಛತ್ರಪತಿ ಶಿವಾಜಿ ಮಹಾರಾಜರ (Chhatrapati Shivaji Row) ಕುರಿತು ನೀಡಿದ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ. ಅದರಲ್ಲೂ, ಕೋಶ್ಯಾರಿ ಅವರನ್ನು ರಾಜ್ಯದಿಂದಲೇ ಬೇರೆಡೆ ಕಳುಹಿಸಿ ಎಂದು ಶಿವಸೇನೆ ಏಕನಾಥ್ ಶಿಂಧೆ ಬಣ ಆಕ್ರೋಶ ವ್ಯಕ್ತಪಡಿಸಿದೆ. ಇದು ಬಿಜೆಪಿಗೆ ನುಂಗಲಾರದ ತುತ್ತಾದ ಕಾರಣ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ತೇಪೆ ಹಚ್ಚಲು ಮುಂದಾಗಿದ್ದಾರೆ.
“ಛತ್ರಪತಿ ಶಿವಾಜಿ ಮಹಾರಾಜರು ನಮಗೆ ದೇವರ ಸಮಾನ. ಅವರನ್ನು ನಮ್ಮ ತಂದೆ-ತಾಯಿಗಿಂತ ಹೆಚ್ಚು ಪೂಜ್ಯನೀಯವಾಗಿ ಕಾಣುತ್ತೇವೆ” ಎಂದು ಗಡ್ಕರಿ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಅಲ್ಲದೆ, ಅವರು ಹೇಳಿದ ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಆ ಮೂಲಕ ರಾಜ್ಯಪಾಲರು ಉಂಟುಮಾಡಿದ ವಿವಾದವನ್ನು ತಣ್ಣಗಾಗಿಸಲು ಪ್ರಯತ್ನಿಸಿದ್ದಾರೆ.
“ಶಿವಾಜಿ ಮಹಾರಾಜರು ಹಳೆಯ ಕಾಲದ ಐಕಾನ್” ಎಂದು ಭಗತ್ ಸಿಂಗ್ ಕೋಶ್ಯಾರಿ ಕೆಲ ದಿನದ ಹಿಂದೆ ಹೇಳಿದ್ದರು. ಇದನ್ನು ಖಂಡಿಸಿದ ಶಿವಸೇನೆ ಏಕನಾಥ್ ಶಿಂಧೆ ಬಣವು, “ಇತಿಹಾಸ ಗೊತ್ತಿರದ ಕೋಶ್ಯಾರಿ ಅವರನ್ನು ಮಹಾರಾಷ್ಟ್ರದಿಂದಲೇ ಬೇರೆಡೆ ಕಳುಹಿಸಿ” ಎಂದು ಬಿಜೆಪಿಯನ್ನು ಆಗ್ರಹಿಸಿತ್ತು.
ಇದನ್ನೂ ಓದಿ | Chhatrapati Shivaji Row | ಮಹಾರಾಷ್ಟ್ರ ರಾಜ್ಯಪಾಲರ ಅವಾಂತರ, ಬಿಜೆಪಿಗೆ ಗಂಡಾಂತರ