ರಾಯ್‌ಪುರ: ಛತ್ತೀಸ್‌ಗಢದಲ್ಲಿ ಮಂಗಳವಾರ (ನವೆಂಬರ್ 7) ಮೊದಲ ಹಂತದ ಮತದಾನ ನಡೆಯಲಿದ್ದು, ಇದರೊಂದಿಗೆ ಪಂಚ ರಾಜ್ಯ ಚುನಾವಣೆಗೆ ಮುನ್ನುಡಿ ಬರೆಯಲಾಗುತ್ತದೆ. ಛತ್ತೀಸ್‌ಗಢದಲ್ಲಿ ಮೊದಲ ಹಂತದಲ್ಲಿ 20 ಕ್ಷೇತ್ರಗಳಲ್ಲಿ ಮತದಾನ (Chhattisgarh Polls) ನಡೆಯಲಿದೆ. ಆದರೆ, ಮತದಾನಕ್ಕೂ ಒಂದು ದಿನ ಮೊದಲೇ ಛತ್ತೀಸ್‌ಗಢದ ಕಾಂಕೆರ್ ಜಿಲ್ಲೆಯಲ್ಲಿ ನಕ್ಸಲರು ದಾಳಿ ನಡೆಸಿದ್ದಾರೆ. ನಕ್ಸಲರು ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟಿಸಿದ (Naxals Attack) ಕಾರಣ ಒಬ್ಬ ಬಿಎಸ್‌ಎಫ್ ಯೋಧ ಹಾಗೂ ಇಬ್ಬರು ಚುನಾವಣಾ ಅಧಿಕಾರಿಗಳು ಗಾಯಗೊಂಡಿದ್ದಾರೆ.
ಮೊದಲ ಹಂತದ ಮತದಾನದ ಹಿನ್ನೆಲೆಯಲ್ಲಿ ಬಿಎಸ್‌ಎಫ್ ಹಾಗೂ ಜಿಲ್ಲಾ ಪಡೆಯು ಕ್ಯಾಂಪ್ ಮರ್ಬೆಡಾದಿಂದ ರೆಂಗಾಘಟಿ ರೆಂಗಾಗೊಂಡಿ ಮತಗಟ್ಟೆಗೆ ತೆರಳುವಾಗ ನಕ್ಸಲರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಪ್ರಕಾಶ್ ಚಂದ್ ಎಂಬ ಬಿಎಸ್‌ಎಫ್ ಕಾನ್‌ಸ್ಟೆಬಲ್ ಹಾಗೂ ಇಬ್ಬರು ಅಧಿಕಾರಿಗಳು ಗಾಯಗೊಂಡಿದ್ದಾರೆ. ಛೋಟೆಪೆಥಿಯಾದಲ್ಲಿ ಬಿಎಸ್‌ಎಫ್ ಪೇದೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
Rengagondi, Kanker- pressure IED explosion injures 3 in poll bound #Chhattisgarh . Locals say naxals fired at the polling party escorted by bsf personnel after the IED exploded pic.twitter.com/zFawMRVj7D
— Arunima (@Arunima24) November 6, 2023
20 ಕ್ಷೇತ್ರಗಳಲ್ಲಿ ಮತದಾನ
ಛತ್ತೀಸ್‌ಗಢದ ಬಸ್ತಾರ್ ವಿಭಾಗದ 12 ವಿಧಾನಸಭೆ ಕ್ಷೇತ್ರಗಳು ಸೇರಿ 20 ಕ್ಷೇತ್ರಗಳಲ್ಲಿ ಮಂಗಳವಾರ ಮತದಾನ ನಡೆಯಲಿದೆ. ಬಸ್ತಾರ್ ವಿಭಾಗದಲ್ಲಿ ನಕ್ಸಲರ ಹಾವಳಿ ಜಾಸ್ತಿ ಇರುವ ಕಾರಣ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ನಾರಾಯಣಪುರ, ಕಂಕೆರ್, ಕೇಶ್‌ಕಾಲ್, ಕೊಂಟ, ಬಿಜಾಪುರ ಸೇರಿ 20 ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಮತದಾನ ನಡೆಯಲಿದೆ. ಒಟ್ಟು 90 ವಿಧಾನಸಭೆ ಕ್ಷೇತ್ರಗಳ ಛತ್ತೀಸ್‌ಗಢದಲ್ಲಿ ಎರಡನೇ ಹಂತದ ಮತದಾನವು ನವೆಂಬರ್ 17ರಂದು ನಡೆಯಲಿದೆ. ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: Mahadev App Case: ಛತ್ತೀಸ್‌ಗಢ ಸಿಎಂ ಬಘೇಲ್ ವಿರುದ್ಧ ಲಂಚದ ಪುರಾವೆ ವಿಡಿಯೋ ಬಿಡುಗಡೆ ಮಾಡಿದ ಬಿಜೆಪಿ
ಎರಡು ದಿನದ ಹಿಂದಷ್ಟೇ ಛತ್ತೀಸ್‌ಗಢದಲ್ಲಿ ಬಿಜೆಪಿ ನಾಯಕರೊಬ್ಬರನ್ನು ನಕ್ಸಲರು ಹತ್ಯೆ ಮಾಡಿದ್ದರು. ನಾರಾಯಣಪುರ ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ರತನ್ ದುಬೆ ಅವರನ್ನು ಮಾವೋವಾದಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಕೌಶಾಲ್ನರ್ ಜಿಲ್ಲೆಯಲ್ಲಿ ರತನ್ ದುಬೆ ಅವರು ಚುನಾವಣೆ ಪ್ರಚಾರ ಕೈಗೊಳ್ಳುತ್ತಿರುವಾಗಲೇ ನಕ್ಸಲರು ಗುಂಡು ಹಾರಿಸಿ ಹತ್ಯೆಗೈದಿದ್ದರು. ಘಟನೆ ಕುರಿತು ವರದಿಯಾಗುತ್ತಲೇ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೆ. ಅಲ್ಲದೆ, ಪ್ರಕರಣವನ್ನು ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿದುಬಂದಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ