Site icon Vistara News

ಬೆಟ್ಟಿಂಗ್‌ ಆ್ಯಪ್‌ನಿಂದ ಕಾಂಗ್ರೆಸ್‌ ಸಿಎಂಗೆ 508 ಕೋಟಿ ರೂ. ಲಂಚ; ಇ.ಡಿ ಸ್ಫೋಟಕ ಹೇಳಿಕೆ

Bhupesh Baghel

ರಾಯ್‌ಪುರ: ಛತ್ತೀಸ್‌ಗಢದಲ್ಲಿ ವಿಧಾನಸಭೆ ಚುನಾವಣೆಗೆ (Chhattisgarh Polls) ಕೆಲವೇ ದಿನಗಳು ಬಾಕಿ ಇರುವ ಮಧ್ಯೆಯೇ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರಿಗೆ ಸಂಕಷ್ಟ ಎದುರಾಗಿದೆ. ಮಹಾದೇವ್‌ ಆನ್‌ಲೈನ್‌ ಬೆಟ್ಟಿಂಗ್‌ ಆ್ಯಪ್ ಪ್ರಮೋಟರ್‌ಗಳಿಂದ (Mahadev Betting App Promoters) ಇದುವರೆಗೆ ಭೂಪೇಶ್‌ ಬಘೇಲ್‌ (Bhupel Bhaghel) ಅವರಿಗೆ ಸುಮಾರು 508 ಕೋಟಿ ರೂ. ಲಂಚ ನೀಡಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ED) ಹೇಳಿದ್ದಾರೆ. ಚುನಾವಣೆ ಹೊತ್ತಿನಲ್ಲೇ ಇ.ಡಿ ಪ್ರಸ್ತಾಪಿಸಿದ ವಿಷಯವೀಗ ಚರ್ಚೆಗೆ ಗ್ರಾಸವಾಗಿದೆ.

ಅಕ್ರಮವಾಗಿ ಹಣದ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಇ.ಡಿ ಅಧಿಕಾರಿಗಳು ಈಗಾಗಲೇ ಮಹಾದೇವ್‌ ಬೆಟ್ಟಿಂಗ್‌ ಆ್ಯಪ್ ಪ್ರವರ್ತಕರನ್ನು ವಿಚಾರಣೆ ನಡೆಸುತ್ತಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢದಲ್ಲಿ ಇ.ಡಿ ಅಧಿಕಾರಿಗಳು ದಾಳಿ ನಡೆಸಿ 5.39 ಕೋಟಿ ರೂಪಾಯಿಯನ್ನು ವಶಪಡಿಸಿಕೊಂಡಿದೆ. ಅಷ್ಟೇ ಅಲ್ಲ, 15 ಕೋಟಿ ರೂ. ಇರುವ ಬ್ಯಾಂಕ್‌ ಖಾತೆಯನ್ನೂ ಜಪ್ತಿ ಮಾಡಿದೆ. ಆಸಿಂ ದಾಸ್‌ ಎಂಬಾತನನ್ನು ಕೂಡ ಇ.ಡಿ ಬಂಧಿಸಿದೆ. ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರೇ ಲಂಚ ಸ್ವೀಕರಿಸಿದ್ದಾರೆ ಎಂದು ಇ.ಡಿ ತಿಳಿಸಿದೆ.

“ಆಸಿಂ ದಾಸ್‌ನನ್ನು ವಿಚಾರಣೆ ನಡೆಸಲಾಗಿದೆ. ಆತನ ಮೊಬೈಲ್‌ಅನ್ನೂ ಪರಿಶೀಲನೆ ನಡೆಸಲಾಗಿದೆ. ಮಹಾದೇವ್‌ ಆ್ಯಪ್ ಪ್ರಮೋಟರ್‌ಗಳಿಂದ ಇದುವರೆಗೆ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರಿಗೆ ಸುಮಾರು 508 ಕೋಟಿ ರೂ. ಸಂದಾಯವಾಗಿದೆ ಎಂಬ ವಿಷಯವನ್ನು ಆಸಿಂ ದಾಸ್‌ ತಿಳಿಸಿದ್ದಾನೆ. ಪ್ರಕರಣದ ಕುರಿತು ಇನ್ನಷ್ಟು ತನಿಖೆ ನಡೆಸಲಾಗುತ್ತಿದೆ” ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ. ಛತ್ತೀಸ್‌ಗಢದಲ್ಲಿ ನವೆಂಬರ್‌ 7 ಹಾಗೂ ನವೆಂಬರ್‌ 17ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ.

ಇದನ್ನೂ ಓದಿ: Ranbir Kapoor: ಮಹಾದೇವ್ ಬೆಟ್ಟಿಂಗ್ ಆ್ಯಪ್ ಕೇಸ್ ಸಂಬಂಧ ನಟ ರಣಬೀರ್ ಕಪೂರ್‌ಗೆ ಇಡಿ ಸಮನ್ಸ್

ಏನಿದು ಪ್ರಕರಣ?

ಮಹಾದೇವ್‌ ಬೆಟ್ಟಿಂಗ್‌ ಆ್ಯಪ್ ಪ್ರವರ್ತಕರು ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ತಿಂಗಳಿಂದ ಇ.ಡಿ ತನಿಖೆ ನಡೆಸುತ್ತಿದೆ. ಅದರಲ್ಲೂ, ಮಹಾದೇವ್‌ ಬೆಟ್ಟಿಂಗ್‌ ಆ್ಯಪ್ ಪ್ರವರ್ತಕರಲ್ಲಿ ಒಬ್ಬರಾದ ಸೌರಭ್ ಚಂದ್ರಕರ್ ಅವರು 2023ರ ಫೆಬ್ರವರಿಯಲ್ಲಿ ಯುಎಇನಲ್ಲಿ 200 ಕೋಟಿ ರೂ. ವ್ಯಯಿಸಿ ವಿವಾಹ ಮಾಡಿಕೊಂಡ ಬಳಿಕ ಪ್ರಕರಣ ಗಂಭೀರವಾಗಿದೆ. ಚಂದ್ರಕರ್ ಅವರು ಮದುವೆಗೆ ವೆಚ್ಚ ಮಾಡಿದ ಅಷ್ಟೂ 200 ಕೋಟಿ ರೂಪಾಯಿಯನ್ನು ನಗದಿನಲ್ಲಿ ಪಾವತಿಸಿದ್ದು ಬಯಲಾದ ಬಳಿಕ ತನಿಖೆ ನಡೆಸಲಾಗುತ್ತಿದೆ.

ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಹವಾಲ ಹಗರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ನ ಖ್ಯಾತ ನಟ ರಣಬೀರ್ ಕಪೂರ್, ನಟಿ ಶ್ರದ್ಧಾ ಕಪೂರ್‌, ಹಾಸ್ಯ ಕಲಾವಿದ ಕಪಿಲ್‌ ಶರ್ಮಾ, ಹುಮಾ ಖುರೇಷಿ, ಹೀನಾ ಖಾನ್‌ ಅವರಿಗೂ ಇ.ಡಿ ಸಮನ್ಸ್‌ ನೀಡಿತ್ತು.

Exit mobile version