Site icon Vistara News

ಗೋ ಮೂತ್ರ ಕೊಡಿ, ಲೀಟರ್‌ಗೆ 4 ರೂ. ತಗೊಳ್ಳಿ: ಛತ್ತೀಸ್‌ಗಢ ಸರಕಾರದ ಆಫರ್‌

cow urine

ರಾಯ್‌ಪುರ: ನಿಮ್ಮಲ್ಲಿ ಗೋವುಗಳಿವೆಯಾ? ಅದರ ಮೂತ್ರವನ್ನು ಮಾರಾಟ ಮಾಡಿದರೆ ನಿಮಗೆ ಲೀಟರ್‌ಗೆ ನಾಲ್ಕು ರೂ. ಸಿಗಲಿದೆ!

ಹೌದು ಇಂಥಹುದೊಂದು ಯೋಜನೆ ಆರಂಭವಾಗಲಿರುವುದು ಛತ್ತೀಸ್‌ಗಢ ರಾಜ್ಯದಲ್ಲಿ. ಅಲ್ಲಿನ ಗೋದಾನ ನ್ಯಾಯ ಯೋಜನೆಯ ಅಡಿಯಲ್ಲಿ ಮುಂದಿನ ಜುಲೈ ೨೮ರಂದು ನಡೆಯುವ ಹರೇಲಿ ಹಬ್ಬದೊಂದಿಗೆ ಖರೀದಿ ಆರಂಭವಾಗಲಿದೆ.

ಇಲ್ಲಿನ ಪಶುಪಾಲಕರಿಗೆ ಆದಾಯ ತಂದು ಕೊಡುವ ಉದ್ದೇಶದಿಂದ ಎರಡು ವರ್ಷಗಳ ಹಿಂದೆ ಗೋದಾನ ನ್ಯಾಯ ಯೋಜನೆಯಡಿ ಸೆಗಣಿ ಖರೀದಿ ಆರಂಭ ಮಾಡಲಾಗಿತ್ತು. ಇದರಿಂದ ಗ್ರಾಮೀಣ ಆರ್ಥಿಕತೆ ವಿಚಾರದಲ್ಲಿ ಸಾಕಷ್ಟು ಲಾಭವಾಗಿತ್ತು. ಇದೀಗ ಗೋ ಮೂತ್ರ ಖರೀದಿಯನ್ನು ಆರಂಭ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಎರಡು ಕಡೆ ಸಂಗ್ರಹ
ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲಿರುವ ಎರಡು ಕಡೆ ಜೀವ ರಕ್ಷಕ ಗೋತಾಣಗಳಲ್ಲಿ ಗೋಮೂತ್ರ ಖರೀದಿಗೆ ಅವಕಾಶ ನೀಡಲಾಗುತ್ತದೆ. ಇದು ಮೊದಲನೇ ಹಂತ. ಮುಂದಿನ ಹಂತಗಳಲ್ಲಿ ಹೆಚ್ಚವರಿ ಗೋತಾಣಗಳನ್ನು ನಿಗದಿ ಮಾಡಿ ಗೋಮೂತ್ರ ಖರೀದಿ ಮಾಡಲಾಗುವುದು ಎಂದು ಸರಕಾರ ಹೇಳಿದೆ.
ಈ ರೀತಿ ಮೂತ್ರವನ್ನು ಖರೀದಿ ಮಾಡುವುದು ಪಶು ಸಂಗೋಪನಾ ಇಲಾಖೆ. ಅದರೆ, ಸ್ಥಳೀಯ ಮಟ್ಟದಲ್ಲೇ ಗೋತಾಣ ಮ್ಯಾನೇಜ್‌ಮೆಂಟ್‌ ಕಮಿಟಿಗಳು ಬೆಲೆಯನ್ನು ನಿಗದಿ ಮಾಡಲು ಅಧಿಕಾರ ನೀಡಲಾಗಿದೆ.

ನಿಗದಿಪಡಿಸಿದ ಗೋತಾಣಗಳಲ್ಲಿ ಮೂತ್ರ ಖರೀದಿಗೆ ಸಿದ್ಧತೆ ಮಾಡಿಕೊಳ್ಳುವಂತೆ ಗೋದಾನ ನ್ಯಾಯ ಮಿಷನ್‌ನ ಆಡಳಿತ ನಿರ್ದೇಶಕರಾದ ಡಾ. ಅಯ್ಯಾಜ್‌ ತಂಬೋಳಿ ಹೇಳಿದ್ದಾರೆ. ಗೋಮೂತ್ರ ಖರೀದಿ ಹೊಣೆಯನ್ನು ಸ್ಥಳೀಯ ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡಲಾಗಿದೆ. ಅವರಿಗೆ ಶೀಘ್ರವೇ ತರಬೇತಿಯನ್ನು ಕೂಡಾ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದಕ್ಕೆ ಬಳಕೆ?
ಗೋತಾಣಗಳಲ್ಲಿ ಸಂಗ್ರಹಿಸುವ ಗೋಮೂತ್ರವನ್ನು ಕೀಟ ನಿಯಂತ್ರಣ ಮತ್ತು ಇತರ ಅಗತ್ಯಗಳಿಗೆ ಬಳಸಲಾಗುವುದು ಎಂದು ತಿಳಿದುಬಂದಿದೆ. ಖರೀದಿಸುವ ಮೂತ್ರದ ಗುಣ ಮಟ್ಟ ಹೇಗಿರಬೇಕು, ಎಷ್ಟು ಪಿಎಚ್‌ ಮೌಲ್ಯ ಹೊಂದಿರಬೇಕು ಎನ್ನುವ ಬಗ್ಗೆ ಚರ್ಚೆಗಳು ನಡೆದು ಅಂತಿಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ| ಗೋ ಮೂತ್ರ, ಪಂಚಗವ್ಯ ಮೂಲಕ ಕ್ಯಾನ್ಸರ್‌ಗೆ ಚಿಕಿತ್ಸೆ

Exit mobile version