Site icon Vistara News

Chhattisgarh Naxal Attack : ನಕ್ಸಲರ ಬೆದರಿಕೆ ಪತ್ರ ಕಡೆಗಣನೆ, ಛತ್ತೀಸ್‌ಗಢ ದಾಳಿಯನ್ನು ತಪ್ಪಿಸಬಹುದಿತ್ತೇ?

Chhattisgarh Naxal Attack Ignoring Naxal's threat letter, could Chhattisgarh attack have been avoided?

ದಂತೇವಾಡ: ನಕ್ಸಲರು ಛತ್ತೀಸ್‌ಗಢದಲ್ಲಿ ಕೆಲ ದಿನಗಳ ಹಿಂದೆ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಪತ್ರವೊಂದನ್ನು ಬರೆದಿದ್ದರು. ಇದೀಗ ಬುಧವಾರ ರಾಜ್ಯದ ದಂತೇವಾಡ ಜಿಲ್ಲೆಯ ಅರನ್‌ಪುರ ಎಂಬಲ್ಲಿ ಛತ್ತೀಸ್​ಗಢ ಜಿಲ್ಲಾ ಮೀಸಲು ಪಡೆ (DRG) ಸಿಬ್ಬಂದಿ ಪ್ರಯಾಣ ಮಾಡುತ್ತಿದ್ದ ವಾಹನವನ್ನು ಗುರಿಯಾಗಿಸಿ ಐಇಡಿ (ಸುಧಾರಿತ ಸ್ಫೋಟಕ ಸಾಧನ)ಯನ್ನು ಅಳವಡಿಸಿ ಸ್ಫೋಟಿಸಿ (Naxal Attack) 11 ಯೋಧರ (Chhattisgarh Naxal Attack) ಪ್ರಾಣ ತೆಗೆದಿದ್ದಾರೆ. ಹೀಗಾಗಿ, ನಕ್ಸಲರ ಬೆದರಿಕೆ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ್ದರೆ, ದಾಳಿಯನ್ನು ತಪ್ಪಿಸಬಹುದಿತ್ತೇ ಎಂಬ ಪ್ರಶ್ನೆ ಉಂಟಾಗಿದೆ.

ಅರನ್​ಪುರ ಏರಿಯಾದಲ್ಲಿ ಮಾವೋವಾದಿಗಳು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಛತ್ತೀಸ್​ಗಢ್​ ಜಿಲ್ಲಾ ಮೀಸಲು ಪಡೆ ಸೈನಿಕರು ಅಲ್ಲಿಗೆ ತೆರಳುತ್ತಿದ್ದರು. ಅರಾನ್​ಪುರದಲ್ಲಿ ನಕ್ಸಲ್​ ವಿರುದ್ಧ ಕಾರ್ಯಾಚರಣೆ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡು ಅಲ್ಲಿಗೆ ಹೋಗಿದ್ದರು. ಅಲ್ಲಿ ಕಾರ್ಯಾಚರಣೆ ಮುಗಿಸಿ ವಾಪಸ್​ ಬರುವಾಗ ಈ ದುರ್ಘಟನೆ ನಡೆದೆ. ಅತ್ತ ಅರಾನ್​ಪುರ ಕಾಡು ಪ್ರದೇಶದಲ್ಲಿ ಸೈನಿಕರು ನಕ್ಸಲ್​ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗಲೇ, ಇತ್ತು ಅವರ ವಾಹನ ವಾಪಸ್ ಬರುವ ದಾರಿಯಲ್ಲಿ ಮಾವೋವಾದಿಗಳು ಐಇಡಿ ಅಳವಡಿಸಿ ಇಟ್ಟಿದ್ದರು. ಡಿಆರ್​ಜಿ ವಾಹನ ಆ ಐಇಡಿ ಇದ್ದ ಸ್ಥಳಕ್ಕೆ ಬರುತ್ತಿದ್ದಂತೆ ಅದು ಸ್ಪೋಟಗೊಂಡಿದೆ. ವಾಹನ ಚೂರುಚೂರಾಗಿದ್ದು, ಸೈನಿಕರ ದೇಹ ಛಿದ್ರಗೊಂಡಿದೆ. ಇಂದು ಮೃತಪಟ್ಟಿದ್ದು ಡಿಆರ್​ಜಿಯ ವಿಶೇಷ ತಂಡ. ನಕ್ಸಲರ ವಿರುದ್ಧ ಹೋರಾಡಲು ವಿಶೇಷವಾಗಿ ತರಬೇತಿ ಪಡೆದ ಸ್ಥಳೀಯ ಬುಡಕಟ್ಟು ಸಮುದಾಯದ ಸೈನಿಕರೇ ಹೆಚ್ಚಿನ ಜನರು ಇದರಲ್ಲಿ ಇದ್ದರು ಎಂದು ಮಾಹಿತಿ ಲಭ್ಯವಾಗಿದೆ. ಈ ತಂಡದಲ್ಲಿ ಸ್ಥಳೀಯರನ್ನೇ ನೇಮಿಸಲಾಗುತ್ತದೆ.

ಶಿಷ್ಟಾಚಾರದ ಪ್ರಕಾರ ಭದ್ರತಾಪಡೆಗಳು ಗುಪ್ತಚರ ಮಾಹಿತಿ ತಲುಪಿದ ಬಳಿಕ ಹಾಗೂ, ಸ್ಥಳ ಪರಿಶೀಲನೆಯ ಬಳಿಕವಷ್ಟೇ ಮುಂದೆ ಸಾಗಬೇಕು. ಆದರೆ ಮೂಲಗಳ ಪ್ರಕಾರ ಛತ್ತೀಸ್​ಗಢ ಜಿಲ್ಲಾ ಮೀಸಲು ಪಡೆ (DRG) ಸಿಬ್ಬಂದಿ ಹೋಗುವ ಮಾರ್ಗದಲ್ಲಿ ಮುಂಚಿತವಾಗಿ ಗುಪ್ತಚರ ಮಾಹಿತಿ ಸಂಗ್ರಹಿಸಿರಲಿಲ್ಲ. ಸ್ಥಳ ಪರಿಶೀಲನೆಯೂ ನಡೆದಿರಲಿಲ್ಲ. ನಕ್ಸಲರು ಡಿಆರ್‌ಜಿ ವಾಹನದ ಮೇಲೆ ಮೊದಲಿಂದಲೂ ಕಣ್ಣಿಟ್ಟಿದ್ದರು. ಅದರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಡಿಆರ್‌ಜಿ ಪಡೆ ಹೋಗುವಾಗ ದಾರಿಯನ್ನೂ ಬದಲಿಸಿರಲಿಲ್ಲ. ಇದು ಪ್ಲಾನಿಂಗ್‌ನಲ್ಲಿ ಮತ್ತೊಂದು ನ್ಯೂನತೆಯಾಗಿತ್ತು.

ಸಾಮಾನ್ಯವಾಗಿ ಏಪ್ರಿಲ್-ಜೂನ್‌ ಅವಧಿಯಲ್ಲಿ ಛತ್ತೀಸ್‌ ಗಢದಲ್ಲಿ ನಕ್ಸಲರ ವಾರ್ಷಿಕ ಶಿಬಿರ ಮತ್ತು ತರಬೇತಿ ಚಟುವಟುಕೆಗಳು ನಡೆಯುತ್ತವೆ. ಆಗ ತಮ್ಮ ಕಾರ್ಯಕರ್ತರ ಸಂಖ್ಯೆ ಹೆಚ್ಚಿಸಲು ಚುರುಕಾಗಿರುತ್ತವೆ. ಭದ್ರತಾ ಪಡೆಗಳ ಮೇಲೆ ದಾಳಿಯನ್ನು ನಡೆಸುತ್ತಾರೆ. 2021ರ ಏಪ್ರಿಲ್‌ನಲ್ಲಿ ನಕ್ಸಲರು ನಡೆಸಿದ ದಾಳಿಯಲ್ಲಿ 22 ಭದ್ರತಾ ಸಿಬ್ಬಂದಿ ಸಾವಿಗೀಡಾಗಿದ್ದರು.

2019ರಿಂದೀಚೆಗೆ ನಕ್ಸಲರ ದಾಳಿ ಹೆಚ್ಚಳ:

ಗೃಹ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ 2019ರಿಂದೀಚೆಗೆ ಪ್ರತಿ ವರ್ಷ ನಕ್ಸಲರ ದಾಳಿ ಪ್ರಕರಣಗಳು ಹೆಚ್ಚುತ್ತಿದೆ. 2019ರಲ್ಲಿ 182, 2020ರಲ್ಲಿ 241, 2021ರಲ್ಲಿ 188, 2022ರಲ್ಲಿ 246 ಪ್ರಕರಣಗಳು ನಡೆದಿತ್ತು.

Exit mobile version