Site icon Vistara News

Chhattisgarh Polls: ಸ್ತ್ರೀಯರಿಗೆ 12 ಸಾವಿರ ರೂ., 500 ರೂ.ಗೆ ಎಲ್‌ಪಿಜಿ ಸಿಲಿಂಡರ್; ಇದು ‘ಮೋದಿ’ ಗ್ಯಾರಂಟಿ

Amit Shah

Chhattisgarh Polls: Amit Shah releases BJP's manifesto 'Modi ki Guarantee 2023'

ರಾಯ್‌ಪುರ: ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗೆ (Chhattisgarh Polls) ದಿನಗಣನೆ ಆರಂಭವಾಗಿದ್ದು, ಎಲ್ಲ ಪಕ್ಷಗಳೂ ರಣತಂತ್ರ ರೂಪಿಸುತ್ತಿವೆ. ಅದರಲ್ಲೂ, ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರು ರಾಜ್ಯದಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಹಲವು ಭರವಸೆಗಳನ್ನು ನೀಡಿದ್ದಾರೆ. ಪ್ರಣಾಳಿಕೆಗೆ ‘ಮೋದಿ ಕಿ ಗ್ಯಾರಂಟಿ 2023’ (Modi ki Guarantee 2023) ಎಂದು ಕರೆದಿದ್ದು, ಮಹಿಳೆಯರಿಗೆ ವಾರ್ಷಿಕ 12 ಸಾವಿರ ರೂ., 18 ಲಕ್ಷ ಮನೆ ನಿರ್ಮಾಣ ಸೇರಿ ಹಲವು ಭರವಸೆ ನೀಡಿದ್ದಾರೆ.

ಮದುವೆಯಾದ ಎಲ್ಲ ಮಹಿಳೆಯರಿಗೆ ವರ್ಷಕ್ಕೆ 12 ಸಾವಿರ ರೂ., ಒಂದು ಎಕರೆಯಲ್ಲಿ ಬೆಳೆಯುವ 21 ಕ್ವಿಂಟಾಲ್‌ ಭತ್ತಕ್ಕೆ ತಲಾ 3,100 ರೂ. ನೀಡುವ ಕೃಷಿ ಉನ್ನತ ಯೋಜನೆ, ಖಾಲಿ ಇರುವ ಒಂದು ಲಕ್ಷ ಹುದ್ದೆಗಳ ಭರ್ತಿ, ಪ್ರಧಾನಮಂತ್ರಿ ಆವಾಸ್‌ ಯೋಜನೆ ಅಡಿಯಲ್ಲಿ 18 ಲಕ್ಷ ಮನೆಗಳ ನಿರ್ಮಾಣ, ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರು ಪೂರೈಕೆ, ಜಮೀನು ರಹಿತ ಕೃಷಿ ಕಾರ್ಮಿಕರಿಗೆ ವಾರ್ಷಿಕ 10 ಸಾವಿರ ರೂ. ಧನಸಹಾಯ ಸೇರಿ ಹಲವು ಕೊಡುಗೆಗಳನ್ನು ಅಮಿತ್‌ ಶಾ ಘೋಷಿಸಿದ್ದಾರೆ.

“ಛತ್ತೀಸ್‌ಗಢದ ಸಂಪೂರ್ಣ ಅಭಿವೃದ್ಧಿಗೆ ಬಿಜೆಪಿ ಆದ್ಯತೆ ನೀಡುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ಪ್ರಗತಿಗೆ ಬಿಜೆಪಿ ಕಾರ್ಯಯೋಜನೆ ರೂಪಿಸಿದೆ. ಅದಕ್ಕಾಗಿ, ರಾಜ್ಯದ ಸಂಪೂರ್ಣ ಅಭಿವೃದ್ಧಿಗಾಗಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುತ್ತಿದೆ” ಎಂದು ಅಮಿತ್‌ ಶಾ ಹೇಳಿದರು. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ, ಜನರ ಮನಗೆದ್ದಿತ್ತು. ಇದರ ಬೆನ್ನಲ್ಲೇ, ಬಿಜೆಪಿ ಕೂಡ ಛತ್ತೀಸ್‌ಗಢದಲ್ಲಿ ಹಲವು ಗ್ಯಾರಂಟಿಗಳನ್ನು ಘೋಷಿಸಿದೆ.

ಇದನ್ನೂ ಓದಿ: Rajasthan Election: ರಾಜಸ್ಥಾನದ ಭವಿಷ್ಯ ನಿರ್ಧರಿಸಲಿದೆ ಈ 5 ಅಂಶಗಳು

ರಾಜಸ್ಥಾನ, ಹಿಮಾಚಲ ಪ್ರದೇಶ, ಕರ್ನಾಟಕದ ನಂತರ ಕಾಂಗ್ರೆಸ್‌ ಬಲಿಷ್ಠವಾಗಿರುವ ಏಕೈಕ ರಾಜ್ಯವೆಂದರೆ ಅದು ಛತ್ತೀಸ್‌ಗಢ. ವಿಧಾನಸಭೆಯ 90 ಸದಸ್ಯ ಬಲದ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದು, ಭೂಪೇಶ್‌ ಬಘೇಲ್‌ ಮುಖ್ಯಮಂತ್ರಿಯಾಗಿದ್ದಾರೆ. ಬಿಜೆಪಿಗೆ ಪುಟಿದೇಳುವ ಉತ್ಸಾಹ ಇದೆ. ಆದರೂ, ಇಲ್ಲಿ ಕಾಂಗ್ರೆಸ್‌ ಬಲ ಹೆಚ್ಚಿದೆ. ನಕ್ಸಲ್‌ ಪೀಡಿತ ರಾಜ್ಯದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ಮತದಾನ ನವೆಂಬರ್‌ 7 ಹಾಗೂ ಎರಡನೇ ಹಂತದ ಮತದಾನ ನವೆಂಬರ್‌ 17ರಂದು ನಡೆಯಲಿದೆ. ಡಿಸೆಂಬರ್‌ 3ರಂದು ಫಲಿತಾಂಶ ಪ್ರಕಟವಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version