Site icon Vistara News

Naxals Attack: ಛತ್ತೀಸ್‌ಗಢದಲ್ಲಿ ಮಾವೋವಾದಿಗಳ ಅಟ್ಟಹಾಸ; ಇಬ್ಬರು ಯೋಧರು ಹುತಾತ್ಮ

Naxals Attack

Chhattisgarh: Two CRPF jawans killed by Naxalites in IED blast in Sukma district

ರಾಯ್‌ಪುರ: ಛತ್ತೀಸ್‌ಗಢದಲ್ಲಿ ಮತ್ತೆ ಮಾವೋವಾದಿಗಳು ಅಟ್ಟಹಾಸ (Naxals Attack) ಮೆರೆದಿದ್ದಾರೆ. ಸುಕ್ಮಾ ಜಿಲ್ಲೆಯಲ್ಲಿ ಮಾವೋವಾದಿಗಳು ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟಿಸಿದ ಕಾರಣ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಸುಕ್ಮಾ ಜಿಲ್ಲೆಯ (Sukma District) ಸಿಲ್ಗರ್‌ ಹಾಗೂ ತೆಕುಲಗುಡೆಮ್‌ ಪ್ರದೇಶದ ಮಧ್ಯೆ ಮಾವೋವಾದಿಗಳು ಐಇಡಿ ಇರಿಸಿದ್ದರು. ಸಿಆರ್‌ಪಿಎಫ್‌ ವಾಹನವು ಪ್ರದೇಶದಲ್ಲಿ ಗಸ್ತು ತಿರುಗುವಾಗ ಅದನ್ನು ಸ್ಫೋಟಿಸಲಾಗಿದೆ. ಇದರಿಂದಾಗಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.

ಸೇನೆಯ ಟ್ರಕ್‌ ಮೂಲಕ ಯೋಧರು ಕಾಡಿನ ಪ್ರದೇಶದಲ್ಲಿ ಗಸ್ತು ತಿರುಗುತ್ತಾರೆ ಎಂಬ ಮಾಹಿತಿಯು ನಕ್ಸಲರಿಗೆ ಮೊದಲೇ ಗೊತ್ತಿತ್ತು. ಹಾಗಾಗಿ, ಅವರು ಐಇಡಿ ಇರಿಸಿದ್ದರು. ವಾಹನವು ತೆರಳುವಾಗಲೇ ಅದನ್ನು ಸ್ಫೋಟಿಸಿದ್ದಾರೆ. ದುರಂತದಲ್ಲಿ ಸಿಆರ್‌ಪಿಎಫ್‌ ಪೇದೆ ಶೈಲೇಂದ್ರ (29) ಹಾಗೂ ಟ್ರಕ್‌ ಚಾಲಕ ವಿಷ್ಣು (35) ಎಂಬುವರು ಹುತಾತ್ಮರಾಗಿದ್ದಾರೆ. ಸ್ಫೋಟದ ಬಳಿಕ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಇಡೀ ಪ್ರದೇಶವನ್ನು ಸುತ್ತುವರಿದಿದ್ದಾರೆ. ನಕ್ಸಲರ ಹತ್ಯೆಗಾಗಿ ಕಾರ್ಯಾಚರಣೆ ಕೂಡ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

6 ತಿಂಗಳಲ್ಲಿ 126 ನಕ್ಸಲರ ಹತ್ಯೆ

ಪ್ರಸಕ್ತ ವರ್ಷದಲ್ಲಿ ಭದ್ರತಾ ಸಿಬ್ಬಂದಿಯು ನಕ್ಸಲರ ವಿರುದ್ಧ ಭಾರಿ ಸಮರ ಸಾರಿದ್ದಾರೆ. ಶುಕ್ರವಾರ ಹತ್ಯೆಗೈದ 12 ನಕ್ಸಲರು ಸೇರಿ ಪ್ರಸಕ್ತ ವರ್ಷದ ಆರು ತಿಂಗಳಲ್ಲಿ 126 ಮಾವೋವಾದಿಗಳನ್ನು ಭದ್ರತಾ ಸಿಬ್ಬಂದಿಯು ಹತ್ಯೆ ಮಾಡಿದ್ದಾರೆ. 2023ರಲ್ಲಿ ಭದ್ರತಾ ಸಿಬ್ಬಂದಿಯು 22 ಮಾವೋವಾದಿಗಳನ್ನು ಎನ್‌ಕೌಂಟರ್‌ ಮಾಡಿದ್ದರು. ಲೋಕಸಭೆ ಚುನಾವಣೆಗೆ ವೇಳೆಯೇ ತೆಲಂಗಾಣ ಗಡಿ ಹಾಗೂ ಛತ್ತೀಸ್‌ಗಢದ ಸುಕ್ಮಾ, ಬಿಜಾಪುರ ಸೇರಿ ಹಲವೆಡೆ ಮಾವೋವಾದಿಗಳ ಉಪಟಳ ಜಾಸ್ತಿ ಇರುತ್ತದೆ. ಹಾಗಾಗಿ, ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದರು ಎಂದು ತಿಳಿದುಬಂದಿದೆ.

ಭದ್ರತಾ ಪಡೆ ಸೋಮವಾರವಷ್ಟೇ (ಜೂನ್‌ 17) ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ 4 ಮಾವೋವಾದಿಗಳನ್ನು ಹೊಡೆದುರುಳಿಸಿತ್ತು. ಹತ್ಯೆಗೀಡಾದವರ ಪೈಕಿ ಒಬ್ಬ ಮಹಿಳಾ ಮಾವೋವಾದಿಯೂ ಇದ್ದಳು. ಅಷ್ಟೇ ಅಲ್ಲ, ಜೂನ್‌ 15ರಂದು ಕೂಡ ಛತ್ತೀಸ್‌ಗಢದ ಅಬುಜ್ಮಾರ್ಹ್‌ನಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ 8 ಮಾವೋವಾದಿಗಳು ಹತರಾಗಿದ್ದರು. ಕಾರ್ಯಾಚರಣೆಯ ವೇಳೆ ಒಬ್ಬ ಯೋಧ ಗಾಯಗೊಂಡಿದ್ದರು.

ಇದನ್ನೂ ಓದಿ: Naxals: ಮತ್ತೆ ಮೂವರು ನಕ್ಸಲರ ಹತ್ಯೆ, ಎನ್‌ಕೌಂಟರ್‌ನಲ್ಲಿ ಈ ವರ್ಷ ಶತಕ ಬಾರಿಸಿದ ಭದ್ರತಾ ಸಿಬ್ಬಂದಿ!

Exit mobile version