Site icon Vistara News

Chief Justice: ಅಯೋಧ್ಯೆ ಪ್ರಕರಣದ ತೀರ್ಪು ‘ಜಡ್ಜ್‌ಮೆಂಟ್ ಆಫ್ ಕೋರ್ಟ್’ ಆಗಿತ್ತು ಎಂದ ಸಿಜೆಐ

Chief Justice said that RamJanmabhumi case verdict was 'judgment of court'

ನದದೆಹಲಿ: ಶ್ರೀ ರಾಮಜನ್ಮಭೂಮಿ ವಿವಾದ (Ayodhya dispute) ಕುರಿತು ಸುಪ್ರೀಂ ಕೋರ್ಟ್ (Supreme Court) ಐತಿಹಾಸಿಕ ತೀರ್ಪು (historical Verdict) ನೀಡಿ ನಾಲ್ಕು ವರ್ಷಗಳ ಬಳಿಕ ಮಹತ್ವದ ಸಂಗತಿಯೊಂದನ್ನು ಸಿಜೆಐ ಡಿ ವೈ ಚಂದ್ರಚೂಡ್ (CJI DY Chandrchud) ಅವರ ಈಗ ಹೊರ ಹಾಕಿದ್ದಾರೆ. ವಿವಾದಿತ ಸ್ಥಳದಲ್ಲಿ ಟ್ರಸ್ಟ್‌ನಿಂದ ರಾಮ ಮಂದಿರ ನಿರ್ಮಾಣದ ಪರವಾಗಿ ತೀರ್ಪು ನೀಡಿದ ಐವರು ನ್ಯಾಯಾಧೀಶರು ಸರ್ವಾನುಮತದಿಂದ ತಮ್ಮ ತೀರ್ಪನ್ನು ನೀಡಿದ್ದರು. ಅಂದರೆ, ಈ ತೀರ್ಪು ಯಾರದೇ ಒಬ್ಬ ಕರ್ತೃತ್ವ ಹೊಂದಿರಲಿಲ್ಲ, ಅದು ನ್ಯಾಯಾಲಯದ ಸರ್ವಾನುಮತದ ತೀರ್ಪಾಗಿತ್ತು (Judgment Of The Court) ಎಂದು ಸಿಜೆಐ ಡಿ ವೈ ಚಂದ್ರಚೂಡ ಅವರು ಹೇಳಿದ್ದಾರೆ.

2019ರ ನವೆಂಬರ್ 9, ಒಂದು ಶತಮಾನಕ್ಕೂ ಹೆಚ್ಚು ಹಿಂದಿನ ವಿವಾದಾತ್ಮಕ ಸಮಸ್ಯೆಯನ್ನು ಇತ್ಯರ್ಥಗೊಳಿಸಿದ ದಿನ. ಆಗಿನ ಸಿಜೆಐ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಾಧೀಶರ ಪೀಠವು ದೇವಾಲಯದ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು ಮತ್ತು ಮಸೀದಿಗಾಗಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಪರ್ಯಾಯ ಐದು ಎಕರೆ ಜಾಗವನ್ನು ನೀಡಲಾಗುವುದು ಎಂದು ಹೇಳಿತ್ತು.

ಅಂದು ತೀರ್ಪು ಪ್ರಕಟಿಸಿದ ಸಾಂವಿಧಾನಿಕ ಪೀಠದ ಭಾಗವಾಗಿದ್ದ ಹಾಲಿ ಸಿಜೆಐ ಡಿ ವೈ ಚಂದ್ರಚೂಡ್ ಅವರು ಸುದ್ಧಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ತೀರ್ಪು ಪ್ರಕಟಿಸುವ ಮುನ್ನ ಒಟ್ಟಿಗೆ ಕುಳಿತ ನ್ಯಾಯಮೂರ್ತಿಗಳು, ಈ ತೀರ್ಪು ಜಡ್ಜ್‌ಮೆಂಟ್ ಆಫ್ ದಿ ಕೋರ್ಟ್(ನ್ಯಾಯಾಲಯದ ತೀರ್ಪು) ಆಗಿರಬೇಕೆಂದು ಅವಿರೋಧವಾಗಿ ನಿರ್ಧರಿಸಿದ್ದರು ಎಂದು ತಿಳಿಸಿದ್ದಾರೆ. ತೀರ್ಪು ಬರೆದ ನ್ಯಾಯಮೂರ್ತಿ ಯಾರು ಎಂದು ಕೇಳಿದ ಪ್ರಶ್ನೆಗೆ ಅವರು ಈ ಉತ್ತರ ನೀಡಿದ್ದಾರೆ.

ಐದು ನ್ಯಾಯಮೂರ್ತಿಗಳ ಪೀಠವು ತೀರ್ಪು ಪ್ರಕಟಿಸುವ ಮೊದಲು ನಾವೆಲ್ಲರೂ ಮಾಡುವಂತೆ ತೀರ್ಪಿನ ಬಗ್ಗೆ ಚರ್ಚಿಸಲು ಕುಳಿತಾಗ, ಇದು ನ್ಯಾಯಾಲಯದ ತೀರ್ಪು ಎಂದು ನಾವೆಲ್ಲರೂ ಸರ್ವಾನುಮತದಿಂದ ನಿರ್ಧರಿಸಿದೆವು. ಆದ್ದರಿಂದ, ವೈಯಕ್ತಿಕವಾಗಿ ಈ ತೀರ್ಪು ಯಾವುದೇ ನ್ಯಾಯಮೂರ್ತಿಗೆ ಸೇರಿಲ್ಲ. ಅರ್ಥಾತ್ ಯಾರೋ ಒಬ್ಬ ನ್ಯಾಯಮೂರ್ತಿಗಳು ಈ ತೀರ್ಪಿನ ಕರ್ತೃತ್ವವನ್ನು ಹೊಂದಿಲ್ಲ ಎಂದು ಹೇಳಿದರು.

ಈ ಪ್ರಕರಣವು ಸಂಘರ್ಷದ ಸುದೀರ್ಘ ಇತಿಹಾಸವನ್ನು ಹೊಂದಿದೆ, ರಾಷ್ಟ್ರದ ಇತಿಹಾಸದ ಆಧಾರದ ಮೇಲೆ ವೈವಿಧ್ಯಮಯ ದೃಷ್ಟಿಕೋನಗಳನ್ನು ಹೊಂದಿತ್ತು. ಸಾಂವಿಧಾನಿಕ ಪೀಠದ ಭಾಗವಾಗಿದ್ದ ಎಲ್ಲರೂ ಇದು ನ್ಯಾಯಾಲಯದ ತೀರ್ಪು ಎಂದು ನಿರ್ಧರಿಸಿದರು. ನ್ಯಾಯಾಲಯವು ಒಂದೇ ಧ್ವನಿ ಮತ್ತು ಕಲ್ಪನೆಯ ಮೂಲಕ ಮಾತನಾಡುತ್ತದೆ. ಹಾಗೆ ಮಾಡುವುದರಿಂದ ಅಂತಿಮ ಫಲಿತಾಂಶದಲ್ಲಿ ಮಾತ್ರವಲ್ಲದೆ ತೀರ್ಪಿನಲ್ಲಿ ಸೂಚಿಸಲಾದ ಕಾರಣಗಳಲ್ಲಿ ನಾವೆಲ್ಲರೂ ಒಟ್ಟಿಗೆ ನಿಂತಿದ್ದೇವೆ ಎಂಬ ಸ್ಪಷ್ಟ ಸಂದೇಶವನ್ನು ಕಳುಹಿಸುವುದಾಗಿದೆ ಎಂದು ಸಿಜೆಐ ಡಿ ವೈ ಚಂದ್ರಚೂಡ್ ಹೇಳಿದ್ದಾರೆ.

ದೇಶವನ್ನು ಸುದೀರ್ಘವಾಗಿ ಧ್ರುವೀಕರಣಗೊಳಿಸಿದ ಮತ್ತು ಭಾರತೀಯ ಸಮಾಜದ ಜಾತ್ಯತೀತ ಚಿತ್ರಣವನ್ನು ಹಾಳುಗೆಡವಿದ್ದ ಪ್ರಕರಣದ ಕುರಿತು ಸರ್ವಾನುಮತದ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ಪೀಠವು 2019 ರಲ್ಲಿ ಭಗವಾನ್ ರಾಮನು ಈ ಸ್ಥಳದಲ್ಲಿ ಜನಿಸಿದನು ಎಂಬ ಹಿಂದೂಗಳ ನಂಬಿಕೆ ನಿರ್ವಿವಾದ ಎಂದು ಹೇಳಿತ್ತು ಮತ್ತು ಅವರು ಸಾಂಕೇತಿಕವಾಗಿ ಭೂಮಿಯ ಮಾಲೀಕರು ಅವರೇ ಎಂದು ತಿಳಿಸಿತ್ತು. ಆದರೂ, 16ನೇ ಶತಮಾನದ ಮೂರು ಗುಮ್ಮಟಗಳ ರಚನೆಯನ್ನು ಹಿಂದೂ ಕರಸೇವಕರು ಅಲ್ಲಿ ರಾಮ ಮಂದಿರವನ್ನು ನಿರ್ಮಿಸಲು ಬಯಸಿ ಧ್ವಂಸಗೊಳಿಸಿದ್ದು ತಪ್ಪು ಎಂಬುದು ಸ್ಪಷ್ಟವಾಗಿದೆ, ಅದನ್ನು ಸರಿಪಡಿಸಬೇಕು ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿತ್ತು.

ಈ ಸುದ್ದಿಯನ್ನೂ ಓದಿ: Ram Mandir: ರಾಮ ಮಂದಿರ ಕಟ್ಟಿರುವುದು ಸಂತೋಷದ ವಿಷಯ ಎಂದ ಸಿದ್ದರಾಮಯ್ಯ!

Exit mobile version