ರಾಯ್ಪುರ: ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ತಮ್ಮ ಕೈಯಿಗೆ ಚಾಟಿ ಏಟು ಪಡೆದಿದ್ದಾರೆ. ವ್ಯಕ್ತಿಯೊಬ್ಬ ಮುಖ್ಯಮಂತ್ರಿಯ ಬಲಗೈಗೆ ಚಾಟಿಯಿಂದ ಹೊಡೆಯುತ್ತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂದಹಾಗೇ, ಇದು ಹಲ್ಲೆ ಎಂದುಕೊಳ್ಳಬೇಡಿ, ಇದೊಂದು ಧಾರ್ಮಿಕ ಆಚರಣೆಯಷ್ಟೇ !
ಛತ್ತೀಸ್ಗಢದ ದುರ್ಗ್ ಜಿಲ್ಲೆಯಲ್ಲಿ ಇಂದು ಗೌರಾ-ಗೌರಿ ಪೂಜೆ ಇತ್ತು. ಬುಡಕಟ್ಟು ಜನಾಂಗದವರು ಶಿವ-ಪಾರ್ವತಿಯನ್ನು ಪೂಜಿಸುವ ಹಬ್ಬ ಇದು. ಈ ಆಚರಣೆಯಲ್ಲಿ ಪಾಲ್ಗೊಳ್ಳುವುದಕ್ಕೋಸ್ಕರ ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ಅವರು ದುರ್ಗ್ ಜಿಲ್ಲೆಯ ಜಂಜಗಿರಿ ಮತ್ತು ಕುಮ್ಹಾರಿ ಬಸ್ತಿ ಪ್ರದೇಶಗಳಿಗೆ ತೆರಳಿದ್ದರು. ಅದರಲ್ಲಿ ಮೊದಲು ಜಂಜ್ಗಿರಿ ಹಳ್ಳಿಗೆ ತಲುಪಿದ ಭೂಪೇಶ್ ಬಾಘೆಲ್ ಅಲ್ಲಿನ ಜನರಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದರು. ನಂತರ ಗೌರಾ-ಗೌರಿ ಪೂಜೆ ನಡೆಯುತ್ತಿರುವ ಸ್ಥಳಕ್ಕೆ ತೆರಳಿದರು. ಅಲ್ಲಿ ಬೀರೇಂದ್ರ ಠಾಕೂರ್ ಎಂಬುವರು ಮುಖ್ಯಮಂತ್ರಿ ಕೈಯಿಗೆ ಚಾಟಿ ಏಟುಗಳನ್ನು ಕೊಟ್ಟಿದ್ದಾರೆ. ಸಿಎಂಗೆ ಹೊಡೆಯುವುದಕ್ಕೂ ಮೊದಲು ಬೀರೇಂದ್ರ ಅವರು ಭೂಪೇಶ್ ಬಾಘೆಲ್ ಪಾದ ಸ್ಪರ್ಶಿಸಿ ನಮಿಸಿಕೊಂಡಿದ್ದರು. ಅಂದಹಾಗೇ. ಭೂಪೇಶ್ ಬಾಘೆಲ್ ರಾಜ್ಯದ ಅಭಿವೃದ್ಧಿ-ಸಮೃದ್ಧಿಗಾಗಿ ಈ ಆಚರಣೆ ನಡೆಸಿದ್ದಾರೆ. ಬಾಘೆಲ್ ಪ್ರತಿವರ್ಷವೂ ಗೌರಾ-ಗೌರಿ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಗೊತ್ತಾಗಿದೆ.
ಅದಕ್ಕೂ ಮುನ್ನ ಅಕ್ಟೋಬರ್ 24ರಂದು ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ದೀಪಾವಳಿ ಆಚರಣೆಗಾಗಿ ಕುಟುಂಬದವರ ಜತೆ ಕುರುದ್ಧಿಹ್ಗೆ ತೆರಳಿದ್ದರು. ಅಲ್ಲಿ ಲಕ್ಷ್ಮೀಪೂಜೆಯಲ್ಲಿ ಭಾಗವಹಿಸಿದ್ದರು. ಹಾಗೇ, ಮಹಿಳೆಯರಿಂದ ಪ್ರದರ್ಶಿತಗೊಂಡ ಸಾಂಪ್ರದಾಯಿಕ ‘ಸೂವಾ ನೃತ್ಯ’ವನ್ನೂ ಆನಂದಿಸಿದ್ದರು.
ಇದನ್ನೂ ಓದಿ: Star Week | ದೀಪಾವಳಿ ಪಾರ್ಟಿಗೆ ಬಾಲಿವುಡ್ ತಾರೆಯರ ಪ್ರಭಾವಳಿ