Site icon Vistara News

Borewell: 40 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದ ಕಂದಮ್ಮ; ರಕ್ಷಣೆಗೆ ಹರಸಾಹಸ

Child Falls Into Borewell

Child Falls Into 50-Foot Borewell In Delhi, Rescue Efforts On

ನವದೆಹಲಿ: ದೇಶದಲ್ಲಿ ಬೋರ್‌ವೆಲ್‌ಗಳಿಗೆ ಮಕ್ಕಳು ಬಿದ್ದು ಮೃತಪಡುವ (Borewell Tragedy) ಪ್ರಕರಣಗಳು ಆಗಾಗ ಸಂಭವಿಸುವ ಕಾರಣ ತೆರೆದ ಕೊಳವೆಬಾವಿಗಳನ್ನು ಮುಚ್ಚಿಸಬೇಕು, ಬೋರ್‌ವೆಲ್‌ ಸುತ್ತ ಯಾರೂ ಬರದಂತೆ ಬೇಲಿ ಹಾಕಬೇಕು ಎಂಬ ನಿಯಮವಿದೆ. ಆದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಗಾಗ ಮಕ್ಕಳು ಬೋರ್‌ವೆಲ್‌ಗೆ ಬೀಳುವ ಪ್ರಕರಣಗಳು ಸುದ್ದಿಯಾಗುತ್ತಲೇ ಇರುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ದೆಹಲಿಯಲ್ಲಿ (Delhi) 40 ಅಡಿ ಆಳದ ಬೋರ್‌ವೆಲ್‌ಗೆ ಮಗುವೊಂದು ಬಿದ್ದಿದ್ದು, ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ.

ದೆಹಲಿಯ ಕೇಶೋಪುರ ಮಂಡಿಯಲ್ಲಿರುವ ಜಲಮಂಡಳಿಯ ನೀರು ಸಂಸ್ಕರಣಾ ಘಟಕದ ಬಳಿಯೇ ಇರುವ 40 ಅಡಿ ಆಳದ ಬೋರ್‌ವೆಲ್‌ಗೆ ಮಗು ಬಿದ್ದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಸಿಬ್ಬಂದಿ ಹಾಗೂ ದೆಹಲಿ ಅಗ್ನಿಶಾಮಕ ದಳದ ಸಿಬ್ಬಂದಿಯು ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇನ್ನು ಜೆಸಿಬಿ ಮೂಲಕ ಕೊಳವೆಬಾವಿ ಸುತ್ತಲೂ ಅಗೆಯಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಗೆ ಸ್ಥಳೀಯರು ಕೂಡ ನೆರವು ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.

“ತಡರಾತ್ರಿ 1 ಗಂಟೆ ಸುಮಾರಿಗೆ ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಕರೆ ಬಂದಿದೆ. ಕೇಶೋಪುರ ಮಂಡಿಯ ಬಳಿಯ ಕೊಳವೆಬಾವಿಯಲ್ಲಿ ವ್ಯಕ್ತಿಯೊಬ್ಬರು ಬಿದ್ದಿದ್ದಾರೆ ಎಂಬುದಾಗಿ ಮಾಹಿತಿ ನೀಡಲಾಗಿದೆ. ಹಾಗಾಗಿ, ಪೊಲೀಸರು ಹಾಗೂ ಎನ್‌ಡಿಆರ್‌ಎಫ್‌ ಸಿಬ್ಬಂದಿಯು ಸ್ಥಳಕ್ಕೆ ಆಗಮಿಸಿ, ಕಾರ್ಯಾಚರಣೆ ನಡೆಸುತ್ತಿದ್ದಾರೆ. ಒಂದೂವರೆ ಅಡಿ ಅಗಲ, 40 ಅಡಿ ಆಳದ ಬೋರ್‌ವೆಲ್‌ಗೆ ವ್ಯಕ್ತಿಯೊಬ್ಬರು ಬಿದ್ದಿದ್ದಾರೆ ಎಂಬುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆದಾಗ್ಯೂ, ಬೋರ್‌ವೆಲ್‌ಗೆ ಬಿದ್ದವರು ಮಗುವಾ? ವ್ಯಕ್ತಿಯಾ ಎಂಬುದು ಇದುವರೆಗೂ ದೃಢವಾಗಿಲ್ಲ” ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Borewell Child Rescue: 40 ಅಡಿ ಬೋರ್‌ವೆಲ್‌ಗೆ ಬಿದ್ದೂ ಬದುಕಿ ಬಂದ ಮಗು! ಹೇಗಿತ್ತು ರಕ್ಷಣಾ ಕಾರ್ಯಾಚರಣೆ?

ದೆಹಲಿ ಜಲಮಂಡಳಿ ಅಧಿಕಾರಿಗಳ ಪ್ರಕಾರ, ಯಾರೋ ದುಷ್ಕರ್ಮಿಗಳು ಕಚೇರಿಯಲ್ಲಿ ಕಳ್ಳತನ ಮಾಡಲು ರಾತ್ರಿ ಬಂದಿರಬೇಕು. ಆಗ ಒಬ್ಬ ಬೋರ್‌ವೆಲ್‌ಗೆ ಬಿದ್ದಿರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಸ್ಥಳೀಯ ನಿವಾಸಿಗಳ ಪ್ರಕಾರ, ಬೋರ್‌ವೆಲ್‌ಗೆ ಮಗುವೇ ಬಿದ್ದಿದೆ ಎಂದು ತಿಳಿದುಬಂದಿದೆ. ಬೋರ್‌ವೆಲ್‌ಗೆ ಬಿದ್ದಿರುವ ಮಗು ಬದುಕಿಬರಲಿ ಎಂದು ಪ್ರಾರ್ಥನೆ ಕೂಡ ಸಲ್ಲಿಸಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version