ಲಖನೌ: ಉತ್ತರ ಪ್ರದೇಶದ ಮಥುರಾ ರೈಲು ನಿಲ್ದಾಣದಿಂದ ಕಳ್ಳತನವಾಗಿದ್ದ ಮಗುವೊಂದು ರೈಲು ನಿಲ್ದಾಣದಿಂದ ೧೦೦ ಕಿ.ಮೀ. ದೂರದಲ್ಲಿರುವ ಬಿಜೆಪಿ ನಾಯಕಿಯ ಮನೆಯಲ್ಲಿ ಪತ್ತೆಯಾಗಿದೆ. ಇದರಿಂದಾಗಿ ಪೊಲೀಸರು ಮಕ್ಕಳ ಕಳ್ಳತನ ಜಾಲವೊಂದನ್ನು ಭೇದಿಸಿದಂತಾಗಿದೆ.
ಕಳೆದ ವಾರ ಮಥುರಾ ರೈಲು ನಿಲ್ದಾಣದಲ್ಲಿ ಪೋಷಕರ ಜತೆ ಮಲಗಿದ್ದ ಏಳು ತಿಂಗಳ ಮಗುವನ್ನು ಕಳ್ಳತನ ಮಾಡಲಾಗಿತ್ತು. ಆದರೆ, ಇದು ಫಿರೋಜಾಬಾದ್‌ನಲ್ಲಿ ಬಿಜೆಪಿ ಕಾರ್ಪೊರೇಟರ್ ವಿನಿತಾ ಅಗರ್ವಾಲ್ ಅವರ ಮನೆಯಲ್ಲಿ ಪತ್ತೆಯಾಗಿದೆ. ಸುಮಾರು ೧.೮ ಲಕ್ಷ ರೂ. ನೀಡಿ ವಿನಿತಾ ಹಾಗೂ ಅವರ ಪತಿಯು ಮಗುವನ್ನು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ.
ವಿನಿತಾ ಅವರಿಗೆ ಒಬ್ಬ ಮಗಳಿದ್ದು, ಗಂಡು ಮಗು ಬೇಕು ಎಂಬುದು ದಂಪತಿಯ ಆಸೆಯಾಗಿತ್ತು. ಹಾಗಾಗಿ, ಅವರು ಗಂಡು ಮಗುವನ್ನು ಖರೀದಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದಾಗ್ಯೂ, ವಿನಿತಾ, ರೈಲು ನಿಲ್ದಾಣದಲ್ಲಿ ಕಳ್ಳತನ ಮಾಡಿದ್ದವ ಸೇರಿ ಒಟ್ಟು ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಮಗುವನ್ನು ಕದ್ದವನ ಹೆಸರು ದೀಪ್ ಕುಮಾರ್ ಎಂದು ತಿಳಿದುಬಂದಿದೆ. ಹಣಕ್ಕಾಗಿ ರೈಲು ನಿಲ್ದಾಣ, ಆಸ್ಪತ್ರೆ ಸೇರಿ ಹಲವು ಸಾರ್ವಜನಿಕ ಸ್ಥಳಗಳಿಂದ ಮಕ್ಕಳನ್ನು ಕದ್ದು ಮಾರಾಟ ಮಾಡುವುದು ಇವರ ದಂಧೆಯಾಗಿದ್ದು, ದೊಡ್ಡ ಜಾಲವೇ ಬಯಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.