Site icon Vistara News

Supreme Court: ಅನೂರ್ಜಿತ ವಿವಾಹಗಳಿಂದ ಜನಿಸಿದ ಮಕ್ಕಳು ಪೋಷಕರ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರು!

Supreme Court

ನವದೆಹಲಿ: ಅನೂರ್ಜಿತ ವಿವಾಹಗಳಿಂದ (void marriage) ಜನಿಸಿದ ಮಕ್ಕಳು (Children) ತಮ್ಮ ಪೋಷಕರ ಆಸ್ತಿಯಲ್ಲಿ (Property of Parents) ಪಾಲು ಪಡೆಯಲು (Equal Share) ಅರ್ಹರು ಎಂದು ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ ತೀರ್ಪು ನೀಡಿದೆ. ಈ ತೀರ್ಪು ಹಿಂದೂ ಮಿತಾಕ್ಷರ ಕಾನೂನಿನಿಂದ ನಿಯಂತ್ರಿಸಲ್ಪಡುವ ಹಿಂದೂ ಅವಿಭಕ್ತ ಕುಟುಂಬದ ಆಸ್ತಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು 2011ರ ರೇವಣಸಿದ್ದಪ್ಪ ವರ್ಸಸ್ ಮಲ್ಲಿಕಾರ್ಜುನ್ ಪ್ರಕರಣದ ದ್ವಿಸದಸ್ಯ ಪೀಠದ ತೀರ್ಪನ್ನು ಉಲ್ಲೇಖಿಸಿ ತೀರ್ಪು ನೀಡಿದೆ. ಅನೂರ್ಜಿತ ವಿವಾಹಗಳಿಂದ ಜನಿಸಿದ ಮಕ್ಕಳು ತಮ್ಮ ಪೋಷಕರ ಪಿತ್ರಾರ್ಜಿತ ಅಥವಾ ಸ್ವಯಾರ್ಜಿತ ಆಸ್ತಿಯಲ್ಲಿಪಾಲು ಪಡೆಯಲು ಅರ್ಹರು ಎಂದು ಸ್ಪಷ್ಟವಾಗಿ ಹೇಳಿದೆ.

ಹಿಂದೂ ವಿವಾಹ ಕಾಯಿದೆ 1955ರ ಸೆಕ್ಷನ್ 16(3) ರ ವ್ಯಾಖ್ಯಾನದ ಪ್ರಕಾರ ಅನುರ್ಜೂತಿ ವಿವಾಹಗಳಿಂದ ಜನಿಸಿದ ಮಕ್ಕಳಿಗೆ ನ್ಯಾಯಸಮ್ಮತತೆಯನ್ನು ನೀಡಲಾಗುತ್ತದೆ. ಆದರೆ ಸೆಕ್ಷನ್ 16(3) ಹೇಳುವಂತೆ, ಅಂತಹ ಮಕ್ಕಳು ತಮ್ಮ ಪೋಷಕರ ಆಸ್ತಿಯನ್ನು ಮಾತ್ರ ಪಡೆದುಕೊಳ್ಳುತ್ತಾರೆ. ಆದರೆ, ಇತರ ಕೂಡುಪಾಲು(ಹಿಸ್ಸೆ) ಮೇಲೆ ಯಾವುದೇ ಹಕ್ಕನ್ನು ಹೊಂದಿರುವುದಿಲ್ಲ ಎಂದು ವ್ಯಾಖ್ಯಾನಿಸಲಾಗಿತ್ತು. ಈಗ ಕೋರ್ಟ್‌ ತೀರ್ಪಿನಿಂದ ಈ ವ್ಯಾಖ್ಯಾನ ಕೂಡ ಬದಲಾಗಲಿದೆ.

ಹಿಂದೂ ಉತ್ತರಾಧಿಕಾರ ಕಾಯಿದೆ ಸೆಕ್ಷನ್ 6ರ ಪ್ರಕಾರ, ಹಿಂದೂ ಮಿತಾಕ್ಷರ ಆಸ್ತಿಯಲ್ಲಿ ಕೂಡುಪಾಲು(ಹಿಸ್ಸೆ) ಆಸಕ್ತಿಯು ಆಸ್ತಿಯ ವಿಭಜನೆಯು, ಅವರ ಸಾವಿನ ಬಳಿಕ ತಕ್ಷಣವೇ ನಡೆದಿದ್ದರೆ ಅವರಿಗೆ ಹಂಚಿಕೆಯಾಗುವ ಆಸ್ತಿಯ ಪಾಲು ಎಂದು ವ್ಯಾಖ್ಯಾನಿಸಲಾಗಿದೆ. ರದ್ದುಗೊಳಿಸಬಹುದಾದ ವಿವಾಹವನ್ನು ಕಾನೂನಿನಲ್ಲಿ ಜಾರಿಗೊಳಿಸಲಾಗುವುದಿಲ್ಲ ಅಥವಾ ಕಾನೂನುಬಾಹಿರವಾಗಿದೆ ಮತ್ತು ತೀರ್ಪಿನ ಮೂಲಕ ರದ್ದುಗೊಳಿಸಬೇಕು ಎಂದು ಕೋರ್ಟ್ ಹೇಳಿದೆ.

ಈ ಸುದ್ದಿಯನ್ನೂ ಓದಿ: Supreme Court: ಉದ್ಯೋಗಿಯ ಗುತ್ತಿಗೆ ಅವಧಿ ಮುಗಿದ್ರೂ ಹೆರಿಗೆ ರಜೆ ಸೌಲಭ್ಯ ಅನ್ವಯ ಎಂದ ಸುಪ್ರೀಂ ಕೋರ್ಟ್

2011ರ ತೀರ್ಪು ಹೇಳಿದ್ದೇನು?

ಅನುರ್ಜೂತ ವಿವಾಹ ಸಂಬಂಧದಲ್ಲಿ ಮಗುವಿನ ಜನನವನ್ನು ಪೋಷಕರ ಸಂಬಂಧದಿಂದ ಸ್ವತಂತ್ರವಾಗಿ ನೋಡಬೇಕು. ಅಂತಹ ಸಂಬಂಧದಲ್ಲಿ ಜನಿಸಿದ ಮಗು ಮುಗ್ಧವಾಗಿರುತ್ತದೆ. ಆ ಮಗು, ಕಾನೂನುಬದ್ಧ ಮದುವೆಯಿಂದ ಜನಿಸಿದ ಇತರ ಮಕ್ಕಳಿಗೆ ನೀಡಲಾಗುವ ಎಲ್ಲಾ ಹಕ್ಕುಗಳಿಗೆ ಅರ್ಹವಾಗಿರುತ್ತದೆ. ಇದುವೇ ಸೆಕ್ಷನ್ 16(3) ರಲ್ಲಿನ ತಿದ್ದುಪಡಿಯ ತಿರುಳು ಆಗಿದೆ ಎಂದು ನ್ಯಾಯಮೂರ್ತಿ (ನಿವೃತ್ತ) ಜಿಎಸ್ ಸಿಂಘ್ವಿ ಮತ್ತು ಎಕೆ ಗಂಗೂಲಿ ಅವರ ವಿಭಾಗೀಯ ಪೀಠವು ತಮ್ಮ 2011 ರ ತೀರ್ಪಿನಲ್ಲಿ ಹೇಳಿತ್ತು. ಇದೇ ತೀರ್ಪನ್ನು ಆಧಾರವಾಗಿಟ್ಟುಕೊಂಡು ಸುಪ್ರೀಂ ಕೋರ್ಟ್ ಈಗ, ಅನೂರ್ಜಿತ ವಿವಾಹಗಳಿಂದ ಜನಿಸಿದ ಮಕ್ಕಳು ತಮ್ಮ ಪೋಷಕರ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರು ಎಂದು ಹೇಳಿದೆ.

Exit mobile version