Site icon Vistara News

Childrens Day: ʼಚಾಚಾ ನೆಹರೂʼಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ; ಖರ್ಗೆ, ಸೋನಿಯಾರಿಂದ ಪುಷ್ಪನಮನ

jawaharlal nehru

ಹೊಸದಿಲ್ಲಿ: ಇಂದು ಜವಾಹರಲಾಲ್ ನೆಹರು (Jawaharlal Nehru) ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮಂಗಳವಾರ ನೆಹರೂಗೆ ಗೌರವ ನಮನ ಸಲ್ಲಿಸಿದ್ದಾರೆ.

“ನಮ್ಮ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಜಿ ಅವರ ಜನ್ಮದಿನದಂದು ಅವರಿಗೆ ನಮನಗಳು” ಎಂದು ಸೋಶಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

ನೆಹರೂ ಜನ್ಮದಿನದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮುಂತಾದ ಗಣ್ಯರು ಇಂದು ರಾಷ್ಟ್ರ ರಾಜಧಾನಿಯ ಶಾಂತಿವನಕ್ಕೆ ಭೇಟಿ ನೀಡಿ ನೆಹರೂಗೆ ಪುಷ್ಪನಮನ ಸಲ್ಲಿಸಿದರು.

“ಭಾರತವನ್ನು ಶೂನ್ಯದಿಂದ ಉತ್ತುಂಗಕ್ಕೆ ಕೊಂಡೊಯ್ದ, ಆಧುನಿಕ ಭಾರತದ ಸೃಷ್ಟಿಕರ್ತ, ಪ್ರಜಾಪ್ರಭುತ್ವದ ನಿರ್ಭೀತ ಕಾವಲುಗಾರ ಮತ್ತು ನಮ್ಮ ಸ್ಫೂರ್ತಿಯ ಮೂಲ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸುತ್ತೇನೆ. ಅವರ ಪ್ರಗತಿಪರ ಆಲೋಚನೆಗಳು ಭಾರತದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಮುನ್ನಡೆಸಿದವು. ಎಲ್ಲಾ ಸವಾಲುಗಳ ನಡುವೆಯೂ ಮತ್ತು ಯಾವುದೇ ತಾರತಮ್ಯವಿಲ್ಲದೆ ಮತ್ತು ಯಾವಾಗಲೂ ದೇಶವನ್ನು ಮೊದಲ ಸ್ಥಾನದಲ್ಲಿರಿಸಿ ಪ್ರತಿ ಕ್ಷಣದಲ್ಲಿ ಒಟ್ಟಿಗೆ ಬದುಕಲು ದೇಶದ ಜನರನ್ನು ಪ್ರೋತ್ಸಾಹಿಸಿದರು” ಎಂದು ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Xನಲ್ಲಿ ಹಾಕಿದ ಪೋಸ್ಟ್‌ನಲ್ಲಿ ರಾಹುಲ್‌ ಗಾಂಧಿ ಅವರು, “ಪಂಡಿತ್ ಜವಾಹರಲಾಲ್ ನೆಹರು ಅವರು ಸ್ವಾತಂತ್ರ್ಯ, ಪ್ರಗತಿ, ನ್ಯಾಯದ ಒಂದು ಚಿಂತನೆ. ಭಾರತ ಮಾತೆಗೆ ಇಂದು ʼಜವಾಹರ್ ಆಫ್ ಹಿಂದ್’ ಅವರ ಮೌಲ್ಯಗಳು ಪ್ರತಿ ಹೃದಯದಲ್ಲಿ ಸ್ಥಾಪನೆಯಾಗುವ ಅಗತ್ಯವಿದೆ” ಎಂದು ಪೋಸ್ಟ್‌ ಮಾಡಿದ್ದಾರೆ.

ನೆಹರೂ ಅವರು 1889ರಲ್ಲಿ ಪ್ರಯಾಗರಾಜ್‌ನಲ್ಲಿ ಜನಿಸಿದರು. ದೇಶದ ಸ್ವಾತಂತ್ರ್ಯ ಹೋರಾಟದ ಪ್ರಮುಖರಲ್ಲಿ ಒಬ್ಬರಾಗಿದ್ದ ಅವರನ್ನು ಪ್ರೀತಿಯಿಂದ ‘ಚಾಚಾ ನೆಹರು’ ಎಂದು ಕರೆಯಲಾಗುತ್ತಿತ್ತು. ಮಕ್ಕಳನ್ನು ಅತೀವ ಪ್ರೀತಿ ಮತ್ತು ವಾತ್ಸಲ್ಯದಿಂದ ಕಾಣುತ್ತಿದ್ದ ನೆಹರೂ ಅವರ ಮರಣದ ನಂತರ ಅವರ ಜನ್ಮದಿನವನ್ನು ʼಮಕ್ಕಳ ದಿನʼ (Childrens Day) ಎಂದು ಆಚರಿಸಲು ನಿರ್ಧರಿಸಲಾಯಿತು. ದೇಶದಲ್ಲಿ ಪ್ರಜಾಸತ್ತಾತ್ಮಕ ಬೇರುಗಳನ್ನು ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಇದನ್ನೂ ಓದಿ: Children’s Day: ಮಕ್ಕಳ ದಿನಕ್ಕೆ ಮಕ್ಕಳು ನೋಡಲೇಬೇಕಾದ ಅತ್ಯುತ್ತಮ ಮಕ್ಕಳ ಸಿನಿಮಾಗಳು!

Exit mobile version