ಅರುಣಾಚಲ ಪ್ರದೇಶ, ಲಡಾಖ್ನ ಗಡಿಗಳಲ್ಲಿ ಸದಾ ಉಪಟಳ ನೀಡುವ ಚೀನಾ ಇದೀಗ ಉತ್ತರಾಖಂಡ್ನ ವಾಸ್ತವಿಕ ನಿಯಂತ್ರಣ ರೇಖೆ (LAC-Line of Actual Control)ಯಿಂದ 11 ಕಿಮೀ ದೂರದಲ್ಲಿ ಗಡಿ ರಕ್ಷಣಾ ಹಳ್ಳಿ (Border Defence Villages)ಗಳನ್ನು ನಿರ್ಮಾಣ ಮಾಡುತ್ತಿದೆ. ಈ ಹಳ್ಳಿಗಳಲ್ಲಿ ಸುಮಾರು 250 ಮನೆಗಳು ಇವೆ ಎಂದು ಇಂಡಿಯಾ ಟುಡೆ ಮಾಧ್ಯಮ ವರದಿ ಮಾಡಿದೆ. ಇವಿಷ್ಟೇ ಅಲ್ಲ, ಈ ಉತ್ತರಾಖಂಡ್ನ ಎಲ್ಎಸಿಯಿಂದ (Uttarakhand LAC) 35ಕಿಮೀ ದೂರದಲ್ಲಿ 55-56 ಮನೆಗಳನ್ನು ನಿರ್ಮಾಣ ಮಾಡುತ್ತಿದೆ ಎನ್ನಲಾಗಿದೆ. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ)ಯೇ ಖುದ್ದಾಗಿ ನಿಂತು ಈ ಹಳ್ಳಿಗಳ ನಿರ್ಮಾಣ ಮಾಡಿಸುತ್ತಿದೆ.
ಉತ್ತರಾಖಂಡ್ ಮತ್ತು ಚೀನಾ ಗಡಿ ಸುಮಾರು 350 ಕಿಮೀ ಉದ್ದವಿದೆ. ಈ ಗಡಿ ಭಾಗದಲ್ಲಿರುವ ಹಲವು ಗ್ರಾಮಗಳ ಜನರು ಇಲ್ಲೇನೂ ದುಡಿಮೆಯಿಲ್ಲದೆ, ಜೀವನ ಸಾಗಿಸಲು ಸಾಧ್ಯವಾಗದೆ ಬೇರೆಡೆಗೆ ವಲಸೆ ಹೋಗಿದ್ದಾರೆ. ಭಾರತ ಮತ್ತು ಚೀನಾ ನಡುವಿನ ಈ ಗಡಿ ಭಾಗದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಸುತ್ತಲಿನ ಸ್ಥಳಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ ಎಂದು ಈ ಹಿಂದೆ ಭಾರತೀಯ ಸೇನೆ ಹೇಳಿತ್ತು.
ಇದನ್ನೂ ಓದಿ: BRO Road At LAC: ಚೀನಾಗೆ ತಿರುಗೇಟು ನೀಡಲು ಲಡಾಕ್ ಗಡಿಯಲ್ಲಿ ಭಾರತ 135 ಕಿ.ಮೀ ಹೆದ್ದಾರಿ ನಿರ್ಮಾಣ
2020ರಲ್ಲಿ ಗಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಸೈನಿಕರು ಹೊಡೆದಾಡಿಕೊಂಡು, ಭಾರತದ 20ಕ್ಕೂ ಹೆಚ್ಚು ಯೋಧರು ಮೃತಪಟ್ಟಿದ್ದಾರೆ. ಆಗಿನಿಂದಲೂ ಎರಡೂ ದೇಶಗಳ ನಡುವಿನ ಮಿಲಿಟರಿ ಸಂಬಂಧವಷ್ಟೇ ಅಲ್ಲ, ರಾಜತಾಂತ್ರಿಕ ಸಂಬಂಧವೂ ಹದಗೆಟ್ಟಿದೆ. ಎಲ್ಲ ಗಡಿಭಾಗಗಳಲ್ಲೂ ಚೀನಾ ಉಪಟಳ ಮಿತಿಮೀರುತ್ತಿದೆ. ಗಡಿ ಸಮೀಪವೇ ಬಂದು ಹಳ್ಳಿಗಳ-ಹೆದ್ದಾರಿಗಳನ್ನು ನಿರ್ಮಾಣ ಮಾಡುತ್ತಿದೆ. ಆ ಹಳ್ಳಿಗಳ ಜನರನ್ನು ಗಡಿ ರಕ್ಷಣೆಗೆ ಬಳಸಿಕೊಳ್ಳುತ್ತಿದೆ. ಅದರಲ್ಲೂ ಅರುಣಾಚಲ ಪ್ರದೇಶದಲ್ಲಂತೂ ಈಗಾಗಲೇ ಹಲವು ಹಳ್ಳಿಗಳನ್ನು ಚೀನಾ ನಿರ್ಮಾಣ ಮಾಡಿದ್ದಾಗಿ ವರದಿಯಾಗಿದೆ.