Site icon Vistara News

ಚೀನಾ ಮತ್ತೆ ‌ಕಿರಿಕ್: ಆಯಕಟ್ಟಿನ ಪ್ಯಾಂಗಾಂಗ್ ಸರೋವರಕ್ಕೆ 2ನೇ ಸೇತುವೆ

ಮತ್ತೆ ಚೀನಾ ಕಿರಿಕ್

ಲಡಾಖ್‌: ಸ್ವಲ್ಪ ಕಾಲ ತಣ್ಣಗಿದ್ದ ಚೀನಾ ಮತ್ತೆ ಕಿರಿಕ್ ಶುರು ಮಾಡಿದೆ. ಭಾರತವು ತನಗೆ ಸೇರಿದ ಜಾಗವೆಂದು ಪ್ರತಿಪಾದಿಸುತ್ತಿರುವ ಪ್ರದೇಶದಲ್ಲಿ ಪ್ಯಾಂಗಾಂಗ್ ಸರೋವರಕ್ಕೆ ಅಡ್ಡಲಾಗಿ ಈಗ ಮತ್ತೊಂದು ಸೇತುವೆಯನ್ನು ನಿರ್ಮಿಸಲು ಮುಂದಾಗಿದೆ. ಇತ್ತೀಚೆಗಷ್ಟೇ ಒಂದು ಸೇತುವೆಯ ನಿರ್ಮಾಣವನ್ನು ಚೀನಾ ಪೂರ್ಣಗೊಳಿಸಿತ್ತು. ಈ ಸೇತುವೆ ಪೂರ್ಣಗೊಂಡರೆ ಭಾರಿ ಶಸ್ತ್ರಸಜ್ಜಿತ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸುತ್ತದೆ.

ಮೊದಲ ಸೇತುವೆಗೆ ಸಮಾನಾಂತರವಾಗಿ ಎರಡನೇ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಮೊದಲನೆಯ ಸೇತುವೆ ಕಿರಿದಾಗಿದ್ದು, ಈ ವರ್ಷ ಏಪ್ರಿಲ್‌ನಲ್ಲಿ ಪೂರ್ಣಗೊಂಡಿದೆ. ಈ ಪ್ರದೇಶದ ಅಧಿಕ ರೆಸಲ್ಯೂಶನ್ ಇರುವ ಉಪಗ್ರಹ ಚಿತ್ರಣವನ್ನು ವಿಶ್ಲೇಷಿಸಿದ ತಜ್ಞರ ಪ್ರಕಾರ, ಎರಡನೇ ಸೇತುವೆ ನಿರ್ಮಿಸಲು ಅಗತ್ಯವಿರುವ ಕ್ರೇನ್‌ಗಳಂತಹ ಉಪಕರಣಗಳನ್ನು ಸಾಗಿಸಲು ಮೊದಲ ಸೇತುವೆಯನ್ನು ಬಳಸಲಾಗುತ್ತಿದೆ.

ಆಯಕಟ್ಟಿನ ಪ್ಯಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಗಳನ್ನು ಸಂಪರ್ಕಿಸುವ ಮೊದಲ ಸೇತುವೆಯ ನಿರ್ಮಾಣದ ಬಗ್ಗೆ ಜನವರಿಯಲ್ಲಿ ವರದಿಗಳು ಪ್ರಕಟವಾಯಿತು. ಭಾರತಕ್ಕೆ ಸೇರಿದ ಪ್ರದೇಶವನ್ನು ಕಳೆದ 60 ವರ್ಷಗಳಿಂದ ಚೀನಾ ಅಕ್ರಮವಾಗಿ ವಶದಲ್ಲಿಟ್ಟುಕೊಂಡಿದ್ದು, ಅಲ್ಲಿ ಈ ಸೇತುವೆಯನ್ನು ನಿರ್ಮಿಸಿದೆ ಎಂದು ವಿದೇಶಾಂಗ ಸಚಿವಾಲಯವು ಹೇಳಿದೆ. ಭಾರತವು ಚೀನಾದ ಈ ಅಕ್ರಮ ಸ್ವಾಧೀನತೆಯನ್ನು ಯಾವತ್ತೂ ಒಪ್ಪಿಕೊಂಡಿಲ್ಲ ಎಂದು ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

ಭಾರತದ ಸುತ್ತ ಚೀನಾ ಸಾಲದ ಸುಳಿ: ಭೌಗೋಳಿಕ ರಾಜಕೀಯ ಹಿಡಿತಕ್ಕೆ ಹೊಸ ಮಾರ್ಗ

ಇಂಟೆಲ್ ಲ್ಯಾಬ್‌ನ ವಿಶ್ಲೇಷಕ ಡೇಮಿಯನ್ ಸೈಮನ್- @detresfa_ ಎಂಬ ತಮ್ಮ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಿದ್ದು, ಉಪಗ್ರಹ ಚಿತ್ರಣದ ವಿಶ್ಲೇಷಣೆಯು ಮೊದಲ ಸೇತುವೆಯ ಕೆಲಸವನ್ನು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನು ಅವರು “ಸರ್ವಿಸ್ ಬ್ರಿಡ್ಜ್‌” ಎಂದು ಕರೆದಿದ್ದಾರೆ. ಏಪ್ರಿಲ್ ವೇಳೆಗೆ ಇದರ ಕಾಮಗಾರಿ ಪೂರ್ಣಗೊಳಿಲಾಗಿದೆ. “ಈ ಹಿಂದೆ ಈ ಸೈಟ್‌ನಲ್ಲಿ ಕ್ರೇನ್‌ಗಳನ್ನು ಗಮನಿಸಲಾಗಿದೆ. ಸಂಪೂರ್ಣ ಯೋಜನೆಗೆ ನಡೆದಿರುವ ಸಿದ್ಧತೆಗಳನ್ನು ಇದು ಸೂಚಿಸುತ್ತದೆ” ಎಂದು ಅವರು ಬಣ್ಣಿಸಿದ್ದಾರೆ.

ಲಡಾಖ್ ಸಮೀಪದ ಪವರ್ ಗ್ರಿಡ್‌ಗೆ ಚೀನಾ ಹ್ಯಾಕರ್‌ಗಳಿಂದ ಕನ್ನ: ʻಡ್ರ್ಯಾಗನ್‌ʼ ಕಳ್ಳಾಟ ಬಯಲು!

ಎರಡನೇ ಸೇತುವೆಯ ಕಾಮಗಾರಿ ಮುಂದುವರಿದ ಹಂತದಲ್ಲಿದೆ, ಮತ್ತು “ಸೇತುವೆಯ ತೂಬುಗಳು ಮತ್ತು ಕಂಬಗಳ ಅಡಿಪಾಯವನ್ನು ನಿರ್ಮಿಸಲಾಗುತ್ತಿದೆ. ಮೊದಲ ಸೇತುವೆಯ ಪಕ್ಕದಲ್ಲೇ ಇವುಗಳು ಗೋಚರಿಸುತ್ತಿವೆ ಎಂದು ಸೈಮನ್ ತಿಳಿಸಿದ್ದಾರೆ. ಉಪಗ್ರಹ ಚಿತ್ರಣದ ವಿಶ್ಲೇಷಣೆಯ ಪ್ರಕಾರ, ಎರಡನೇ ಸೇತುವೆಯ ಅಡಿಯಲ್ಲಿ ದೋಣಿಗಳ ಸಂಚಾರಕ್ಕೆ ಅಗತ್ಯವಿರುವ ಸ್ಥಳಾವಕಾಶವನ್ನು ಒದಗಿಸಲಾಗಿದೆ” ಎಂದು ಅವರು ಮಾಹಿತಿ ನಿಡಿದ್ದಾರೆ.

ಎರಡನೇ ಸೇತುವೆಯು ಅಂತಿಮವಾಗಿ 10 ಮೀಟರ್ ಅಗಲ ಮತ್ತು 450 ಮೀಟರ್ ಉದ್ದವನ್ನು ಹೊಂದಿರುತ್ತದೆ ಎಂದು ಮಾಪನಗಳು ಸೂಚಿಸುತ್ತವೆ. “ಸೇತುವೆಯ ಎರಡೂ ತುದಿಗಳನ್ನು ಸಂಪರ್ಕಿಸುವ ರಸ್ತೆ ಸಂಪರ್ಕದ ಕೆಲಸ ಸಮಾನಾಂತರವಾಗಿ ಪ್ರಾರಂಭವಾಗಿದೆ” ಎಂದು ಸೈಮನ್ ಹೇಳಿದರು.

ಹೊಸ ಸೇತುವೆಯನ್ನು ಎರಡೂ ದಂಡೆಗಳಿಂದ ಏಕಕಾಲದಲ್ಲಿ ನಿರ್ಮಿಸಲಾಗುತ್ತಿದೆ ಮತ್ತು ಟ್ಯಾಂಕ್‌ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳು ಸೇರಿದಂತೆ ದೊಡ್ಡ ಮತ್ತು ಭಾರವಾದ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸೂಚಿಸುತ್ತದೆ.

ಆಯಕಟ್ಟಿನ ಜಾಗದಲ್ಲಿ
134-ಕಿಮೀ ಉದ್ದದ ಆಯಕಟ್ಟಿನ ಸರೋವರದ ಕಿರಿದಾದ ವಿಭಾಗದಲ್ಲಿ ಎರಡೂ ಸೇತುವೆಗಳಿವೆ. ಮೊದಲ ಸೇತುವೆಯು ಪ್ಯಾಂಗಾಂಗ್ ಸರೋವರದ ಉತ್ತರ ದಂಡೆಯಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಠಾಣೆಯ ದಕ್ಷಿಣಕ್ಕೆ ನಿರ್ಣಾಯಕ ಸ್ಥಳದಲ್ಲಿ ಇದೆ. ಸರೋವರದ ಎರಡು ದಡಗಳು 500 ಮೀಟರ್ ಅಂತರದಲ್ಲಿವೆ. ಎರಡೂ ಸೇತುವೆಗಳು ಸರೋವರದ ಪೂರ್ವ ತುದಿಯಲ್ಲಿರುವ ರುಟೊಗ್‌ನಲ್ಲಿರುವ ಪ್ರಮುಖ ಪಿಎಲ್‌ಎ ನೆಲೆಗೆ ಉತ್ತರ ದಂಡೆಯಲ್ಲಿರುವ ಚೀನೀ ಸೈನಿಕರ ಠಾಣೆಗಳನ್ನು ಜೋಡಿಸಿ, ಅವುಗಳ ನಡುವಿನ ಅಂತರವನ್ನು ಸುಮಾರು 150 ಕಿಮೀಗಳಷ್ಟು ಕಡಿಮೆ ಮಾಡುತ್ತವೆ.

ಪ್ಯಾಂಗಾಂಗ್ ಸರೋವರದಲ್ಲಿ ವರದಿಯಾದ ನಿರ್ಮಾಣ ಚಟುವಟಿಕೆಯ ಬಗ್ಗೆ ಭಾರತೀಯ ಸೇನಾ ವಕ್ತಾರರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸರಕಾರಿ ಅಧಿಕಾರಿಗಳಿಂದಲೂ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಲಡಾಖ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವಿನ ಬಿಕ್ಕಟ್ಟು ಮೂರನೇ ವರ್ಷಕ್ಕೆ ಪ್ರವೇಶಿಸಿದೆ. ಪ್ಯಾಂಗಾಂಗ್ ಸರೋವರದ ದಡದಿಂದ ಮತ್ತು ಗೋಗ್ರಾದಲ್ಲಿ ಮುಂಚೂಣಿಯ ಪಡೆಗಳನ್ನು ಹಿಂತೆಗೆದುಕೊಂಡ ನಂತರ, ಹಲವಾರು ಸುತ್ತಿನ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳ ಹೊರತಾಗಿಯೂ ಘರ್ಷಣೆ ಸಂಭವಿಸುತ್ತಿರುವ ಇತರ ತಾಣಗಳಲ್ಲಿ ಉದ್ವಿಗ್ನತೆ ಶಮನದ ಯತ್ನದಲ್ಲಿ ಎರಡೂ ಪಕ್ಷಗಳು ಯಾವುದೇ ಮುನ್ನಡೆ ಸಾಧಿಸಲು ಸಾಧ್ಯವಾಗಿಲ್ಲ.

ಈ ತಿಂಗಳ ಆರಂಭದಲ್ಲಿ, ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ಪಿಎಲ್‌ಎ ಯೊಂದಿಗೆ “ನಂಬಿಕೆ ಮತ್ತು ಶಾಂತಿಯನ್ನು ಮರುಸ್ಥಾಪಿಸುವ” ಗುರಿಯನ್ನು ಹೊಂದಿರುವುದಾಗಿ ಹೇಳಿಕೆ ನೀಡಿದ್ದರು. ಆದರೆ “ಇದು ಏಕಮುಖ ವ್ಯವಹಾರವಾಗಿರಲು ಸಾಧ್ಯವಿಲ್ಲ” ಎಂಬ ಎಚ್ಚರಿಕೆಯನ್ನೂ ನೀಡಿದ್ದರು. ಉಭಯ ದೇಶಗಳ ನಡುವಿನ ಗಡಿರೇಖೆಯ ವಿವರಣೆ ಮತ್ತು ಗಡಿರೇಖೆಗೆ ಆಧಾರವಾಗಿರುವ ಅಥವಾ ಗಡಿ ಗುರುತಿಸುವ ಚೌಕಟ್ಟಿಗೆ ಬರುವ ಪ್ರಕ್ರಿಯೆಯನ್ನು ವಿಳಂಬಿಸುವುದರ ಹಿಂದಿನ ಚೀನಾದ ಉದ್ದೇಶವನ್ನು ಅವರು ಪ್ರಶ್ನಿಸಿದ್ದಾರೆ.

ಏಪ್ರಿಲ್ 2020 ರ ಹಿಂದಿನ ಯಥಾಸ್ಥಿತಿಯನ್ನು ಪುನಃಸ್ಥಾಪಿಸುವುದು ಸೇನೆಯ “ಗುರಿ ಮತ್ತು ಉದ್ದೇಶ” ಎಂದು ಪಾಂಡೆ ಹೇಳಿದರು, ಎಲ್‌ಎಸಿ ಉದ್ದಕ್ಕೂ ಸೇನೆಯ ಕಾವಲು ದೃಢವಾಗಿದೆ ಮತ್ತು ಯಾವುದೇ ಅನಿಶ್ಚಿತತೆಯನ್ನು ಎದುರಿಸಲು ಸಾಕಷ್ಟು ಪಡೆಗಳು ಲಭ್ಯವಿದೆ. ಭಾರತೀಯ ಸೈನಿಕರು ಪ್ರಮುಖ ಸ್ಥಾನಗಳನ್ನು ಹೊಂದಿದ್ದಾರೆ ಮತ್ತು ಯಥಾಸ್ಥಿತಿಯನ್ನು ಬದಲಾಯಿಸಲು ಪಿಎಲ್‌ಎ ಯ ಯಾವುದೇ ಪ್ರಯತ್ನವನ್ನು ತಡೆಯಲು ಅವರ ನಿಲುವು “ದೃಢ ಸಂಕಲ್ಪ” ಬದ್ಧರಾಗಿದ್ದಾರೆ ಎಂದು ಜ. ಮನೋಜ್ ಪಾಂಡೆ ಹೇಳಿದ್ದಾರೆ.

ಕಳೆದ ವಾರ ಪಾಂಡೆ ಅವರು ಭದ್ರತಾ ಪರಿಶೀಲನೆಗಾಗಿ ಲಡಾಖ್ ಸೆಕ್ಟರ್‌ಗೆ ಭೇಟಿ ನೀಡಿದ್ದರು.

ಎರಡು ದೇಶಗಳು ಏಪ್ರಿಲ್-ಮೇ 2020 ರಿಂದ ಗಡಿ ವಿವಾದದಲ್ಲಿ ಸಂಘರ್ಷ ಸ್ಥಿತಿಯಲ್ಲಿವೆ. ಗಾಲ್ವಾನ್ ಕಣಿವೆ, ಪ್ಯಾಂಗಾಂಗ್ ಸರೋವರ ಮತ್ತು ಗೋಗ್ರಾದಲ್ಲಿ ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡ ಹೊರತಾಗಿಯೂ, ಎರಡೂ ಕಡೆಯವರು ಇನ್ನೂ ಸುಮಾರು 60,000 ಸೈನಿಕರನ್ನು ಕಾವಲು ಇರಿಸಿದ್ದಾರೆ. ಲಡಾಖ್ ಸಮರ ನಿರ್ವಹಣಾ ಅಂಗಣದಲ್ಲಿ ಸುಧಾರಿತ ಶಸ್ತ್ರಾಸ್ತ್ರಗಳನ್ನು ನಿಯೋಜಿಸಲಾಗಿದೆ.

ಗಡಿ ಉದ್ವಿಗ್ನತೆಯನ್ನು ತಣ್ಣಗಾಗಿಸಲು ಉಭಯ ಕಡೆಯವರು 15 ಸುತ್ತಿನ ಮಿಲಿಟರಿ ಮಾತುಕತೆಗಳನ್ನು ನಡೆಸಿದ್ದಾರೆ, ಆದರೆ ಕೊಂಗ್ಕಾ ಲಾ ಬಳಿಯ ಗಸ್ತು ಠಾಣೆ -15, ಡೌಲೆಟ್ ಬೇಗ್ ಓಲ್ಡಿ ಸೆಕ್ಟರ್‌ನ ಡೆಪ್ಸಾಂಗ್ ಬಲ್ಜ್ ಮತ್ತು ಡೆಮ್‌ಚೋಕ್ ಸೆಕ್ಟರ್‌ನ ಚಾರ್ಡಿಂಗ್ ನಾಲಾ ಜಂಕ್ಷನ್‌ನಲ್ಲಿನ ಸಮಸ್ಯೆಗಳು ಇನ್ನೂ ಮಾತುಕತೆಯ ಹಂತದಲ್ಲಿವೆ.

ಸೇನಾ ಕಾರ್ಯಾಚರಣೆಗಳ ಮಾಜಿ ಮಹಾನಿರ್ದೇಶಕ, ಲೆಫ್ಟಿನೆಂಟ್ ಜನರಲ್ (ನಿವೃತ್ತ) ವಿನೋದ್ ಭಾಟಿಯಾ ಅವರು, ಈ ನಿರ್ಮಾಣ ಚಟುವಟಿಕೆಯು ಈ ಪ್ರದೇಶದಲ್ಲಿ ತಳವೂರುವ ಚೀನಾದ ಉದ್ದೇಶದ ಸಂಕೇತವಾಗಿದೆ ಮತ್ತು ಎಲ್‌ಎಸಿ ಬಳಿ ಮೂಲಸೌಕರ್ಯವನ್ನು ಹೆಚ್ಚಿಸುವ ಇನ್ನೊಂದು ಕ್ರಮವಾಗಿದೆ ಎಂದು ಹೇಳಿದ್ದಾರೆ. “ಇದು ಸರೋವರದಾದ್ಯಂತ ತ್ವರಿತ ಮಿಲಿಟರಿ ಚಲನೆಯನ್ನು ಸುಗಮಗೊಳಿಸುತ್ತದೆ” ಎಂದು ಅವರು ಹೇಳಿದರು.

Exit mobile version