Site icon Vistara News

DMK Advertisement: ಡಿಎಂಕೆ ಜಾಹೀರಾತಿನಲ್ಲಿ ಚೀನಾ ಧ್ವಜ; ಭಾರಿ ವಿವಾದ, ಮೋದಿ ಆಕ್ರೋಶ

DMK Advertisement

China Flag In DMK's Advertisement; PM Narendra Modi Condemns

ಚೆನ್ನೈ: ಕರ್ನಾಟಕದ ವಿಧಾನಸೌಧದಲ್ಲಿ ‘ಪಾಕಿಸ್ತಾನ್‌ ಜಿಂದಾಬಾದ್’‌ ಎಂಬುದಾಗಿ ಘೋಷಣೆ ಕೂಗಿದ್ದಾರೆ ಎನ್ನಲಾದ ಪ್ರಕರಣ ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆಯು ಪತ್ರಿಕೆಗಳಿಗೆ ನೀಡಿದ ಜಾಹೀರಾತಿನಲ್ಲಿ (DMK Advertisement) ಚೀನಾ ಧ್ವಜವನ್ನು (China Flag) ಮುದ್ರಿಸುವ ಮೂಲಕ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi), ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ (K Annamalai) ಸೇರಿ ಬಿಜೆಪಿ ನಾಯಕರು ಡಿಎಂಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕುಲಶೇಖರಪಟ್ಟಣಂನಲ್ಲಿ ಇಸ್ರೋ ರಾಕೆಟ್‌ ಲಾಂಚ್‌ ನಿರ್ಮಾಣ ಮಾಡುತ್ತಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌ ಸೇರಿ ಹಲವು ನಾಯಕರ ಫೋಟೊಗಳು ಇರುವ ಜಾಹೀರಾತನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗಿದೆ. ಆದರೆ, ಫೋಟೊದ ಹಿಂದೆ ಇರುವ ರಾಕೆಟ್‌ ತುದಿಯಲ್ಲಿ ಚೀನಾ ಧ್ವಜವನ್ನು ಮುದ್ರಿಸಲಾಗಿದೆ. ಇದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.

ಪ್ರಧಾನಿ ಮೋದಿ ಆಕ್ರೋಶ

ಡಿಎಂಕೆ ಜಾಹೀರಾತು ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಯಾರೋ ಮಾಡಿದ ಕೆಲಸದ ಶ್ರೇಯಸ್ಸನ್ನು ತಾವು ಮಾಡಿದ್ದೇವೆ ಎಂಬುದಾಗಿ ಬಿಂಬಿಸಿಕೊಳ್ಳುವುದು ಡಿಎಂಕೆಗೆ ಅಭ್ಯಾಸವಾಗಿದೆ. ಇದೂ ಹೋಗಲಿ, ಈಗ ಡಿಎಂಕೆ ನಾಯಕರು ಮಿತಿಯನ್ನು ಮೀರಿದ್ದಾರೆ. ಇಸ್ರೋ ಲಾಂಚ್‌ಪ್ಯಾಡ್‌ ನಿರ್ಮಾಣದ ಶ್ರೇಯಸ್ಸನ್ನು ತೆಗೆದುಕೊಳ್ಳುವ ಸಲುವಾಗಿ ಡಿಎಂಕೆಯು ಚೀನಾ ಸ್ಟಿಕ್ಕರ್‌ ಅಂಟಿಸಿದೆ. ಇದು ದೇಶದ ವಿಜ್ಞಾನಿಗಳಿಗೆ ಡಿಎಂಕೆ ಮಾಡಿರುವ ಅವಮಾನವಾಗಿದೆ” ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: Sedition Case : ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ನಿಜವೇ?; ನಾಸಿರ್‌ ಹುಸೇನ್‌ ಹೇಳೋದೇನು?

“ಜನ ನೀಡಿದ ತೆರಿಗೆ ಹಣದಲ್ಲಿ ದೇಶದ ಬಾಹ್ಯಾಕಾಶ ವಿಜ್ಞಾನಿಗಳು ಅಮೋಘವಾದುದನ್ನು ಸಾಧಿಸುತ್ತಿದ್ದಾರೆ. ಆದರೆ, ಭಾರತದ ಬಾಹ್ಯಾಕಾಶ ಸಂಶೋಧನೆ ಕಂಡರೆ ಡಿಎಂಕೆಗೆ ಆಗಿಬರುತ್ತಿಲ್ಲ. ಹಾಗಾಗಿಯೇ, ಚೀನಾ ಧ್ವಜದ ಸ್ಟಿಕ್ಕರ್‌ ಅಂಟಿಸಿದ್ದಾರೆ. ಜಗತ್ತಿನ ಎದುರು ಭಾರತದ ವಿಜ್ಞಾನಿಗಳ ಸಾಧನೆಯನ್ನು ನೋಡಲು ಬಯಸದವರು ಮಾತ್ರ ಹೀಗೆ ಮಾಡಲು ಸಾಧ್ಯ. ದೇಶದ ವಿಜ್ಞಾನಿಗಳು, ಬಾಹ್ಯಾಕಾಶ ಕ್ಷೇತ್ರದ ಸಾಧನೆ, ನಿಮ್ಮ ತೆರಿಗೆ ಹಣಕ್ಕೆ ಅಪಮಾನ ಮಾಡಿದವರನ್ನು ಮನೆಗೆ ಕಳುಹಿಸುವ ಸಮಯ ಬಂದಿದೆ” ಎಂದು ಮೋದಿ ಕುಟುಕಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version