ನವ ದೆಹಲಿ: ಕೊವಿಡ್ 19 ಕಾರಣಕ್ಕೆ ವಿದೇಶಿಯರ ಮೇಲೆ ಹೇರಿದ್ದ ವೀಸಾ ನಿರ್ಬಂಧವನ್ನು ತೆಗೆದುಹಾಕುವುದಾಗಿ ಚೀನಾ (China Lifts Visa Curbs)ಘೋಷಿಸಿದೆ. ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ‘ಅಂತಾರಾಷ್ಟ್ರೀಯ ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರರು ಎಲ್ಲರಿಗೂ ವೀಸಾ ನೀಡುವುದಾಗಿ (ಎಲ್ಲ ಶ್ರೇಣಿಯ)’ ತಿಳಿಸಿದೆ.
ಚೀನಾದ ಈ ನಿರ್ಧಾರ ಭಾರತ ಸೇರಿ, ಎಲ್ಲ ವಿದೇಶಿಗರಿಗೆ ಅನುಕೂಲ ಆಗಲಿದೆ. ಅದರಲ್ಲೂ ಚೀನಾದಲ್ಲಿ ಶಿಕ್ಷಣ ಪಡೆಯುತ್ತಿದ್ದ ಭಾರತೀಯ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲ ಆಗಲಿದೆ. ಚೀನಾದಲ್ಲಿ ಕೊವಿಡ್ 19 ಕಾರಣ ಹೇರಿದ ಲಾಕ್ಡೌನ್ನಿಂದಾಗಿ ಅಲ್ಲಿದ್ದ ಭಾರತೀಯ ವಿದ್ಯಾರ್ಥಿಗಳು ಅನೇಕರು ವಾಪಸ್ ಭಾರತಕ್ಕೆ ಬಂದಿದ್ದರು. ಆದರೆ ಚೀನಾ, ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲಿನ ನಿರ್ಬಂಧ ತೆರವುಗೊಳಿಸದ ಕಾರಣ, ಅವರಿಗೆ ವಾಪಸ್ ಹೋಗಲು ಸಾಧ್ಯವಾಗದೆ, ಶಿಕ್ಷಣ ಅರ್ಧಕ್ಕೆ ನಿಂತಿತ್ತು. ಇದೀಗ ಚೀನಾ, ಮಾರ್ಚ್ 15ರಿಂದ ಅನ್ವಯ ಆಗುವಂತೆ ವೀಸಾ ಮೇಲಿನ ನಿರ್ಬಂಧ ತೆಗೆಯುವುದಾಗಿ ಹೇಳಿದೆ. ವೀಸಾ ನೀಡಲು ಪ್ರಾರಂಭಿಸುವುದಾಗಿ ತಿಳಿಸಿದೆ. ಅಷ್ಟೆಲ್ಲದೆ, ಈ ಹಿಂದೆ ಯಾರಾದರೂ ಚೀನಾದ ವೀಸಾ ತೆಗೆದುಕೊಂಡವರು ಇದ್ದರೆ, ಆ ವೀಸಾ ಇನ್ನೂ ಮಾನ್ಯವಾಗಿದ್ದರೆ ಅದನ್ನು ಬಳಸಬಹುದು ಎಂದೂ ಹೇಳಿದೆ.
2022ರ ಆಗಸ್ಟ್ನಲ್ಲಿ ಒಮ್ಮೆ ಚೀನಾ ಹೀಗೆ ವೀಸಾ ನಿರ್ಬಂಧವನ್ನು ತೆಗೆದು ಹಾಕಿತ್ತು. ಆದರೆ ಅದಾದ ಮೇಲೆ ಮತ್ತೆ ಚೀನಾದಲ್ಲಿ ಕೊವಿಡ್ 19 ಮಿತಿಮೀರಿತ್ತು. ಹೀಗಾಗಿ ಅಂತಾರಾಷ್ಟ್ರೀಯ ಪ್ರಯಾಣವನ್ನೂ ಚೀನಾ ನಿರ್ಬಂಧ ಮಾಡಿತ್ತು.