ಹೊಸದಿಲ್ಲಿ: ಚೀನಾದ ಜತೆ ಸ್ನೇಹ ಹಸ್ತ ಚಾಚಿದವರು ಯಾರೂ ಉದ್ಧಾರವಾಗಿದ್ದು ಕಂಡುಬರುತ್ತಿಲ್ಲ. ಆಪ್ತ ಗೆಳೆಯನಂತೆ ಹತ್ತಿರ ಬರುವ ಇದು ಬೆರಳು ತೋರಿಸಿದರೆ ಹಸ್ತ ನುಂಗಿದರು ಎಂಬಂತೆ ನಡೆದುಕೊಳ್ಳುತ್ತದೆ. ಶ್ರೀಲಂಕಾದ ವಿಚಾರದಲ್ಲೂ ಆಗಿದ್ದು ಅದೇ. ಸಂಕಷ್ಟದಲ್ಲಿರುವ ರಾಷ್ಟ್ರಕ್ಕೆ ಸಾಲ ನೀಡುವ ನೆಪದಲ್ಲಿ ಅದನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತು. ಬಳಿಕ ಅಲ್ಲಿ ತನ್ನ ಸಾಮ್ರಾಜ್ಯ ಸ್ಥಾಪನೆಗೆ ಎಲ್ಲ ಸಂಚುಗಳನ್ನು (China tactic) ರೂಪಿಸಿತು. ಈಗ ಪಾಕಿಸ್ತಾನದಲ್ಲೂ ಅದೇ ನಡೆಯುತ್ತಿದೆ. ಚೀನಾ ಈಗ ಅಲ್ಲಿ ಸೇನಾ ಹೊರಠಾಣೆ ಸ್ಥಾಪನೆಗೆ ಮುಂದಾಗಿದೆ.
ಪಾಕಿಸ್ತಾನದಲ್ಲಿ ಚೀನಾದ ಪ್ರಜೆಗಳ ಮೇಲೆ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಗಳ ಹಿನ್ನೆಲೆಯನ್ನು ಇಟ್ಟುಕೊಂಡು ತನ್ನ ನಾಗರಿಕರ ರಕ್ಷಣೆಗಾಗಿ ಮಿಲಿಟರಿ ಔಟ್‌ಪೋಸ್ಟ್‌ಗಳನ್ನು ನಿರ್ಮಿಸಲು ಅವಕಾಶ ನೀಡುವಂತೆ ಚೀನಾವು ಪಾಕಿಸ್ತಾನದ ಮೇಲೆ ಒತ್ತಡ ಹೇರುತ್ತಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಚೀನಾ ಆಕ್ರಮಿತ ಪ್ರದೇಶಗಳಲ್ಲಿ 60ರ ದಶಕದಿಂದಲೇ ಸೇತುವೆ ನಿರ್ಮಾಣ
ಕರಾಚಿ, ಬಲೂಚಿಸ್ತಾನ್ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್‌ನಲ್ಲಿ ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್‌ನ (ಬಿಆರ್‌ಐ) ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆಗಳ ಅಡಿಯಲ್ಲಿ ಕೈಗೊಳ್ಳಲಾಗುತ್ತಿರುವ ಹಲವಾರು ಯೋಜನೆಗಳಲ್ಲಿ ಸಾವಿರಾರು ಚೀನೀ ಸಿಬ್ಬಂದಿ ಪಾಕಿಸ್ತಾನದಲ್ಲಿ ಕೆಲಸ ಮಾಡುತ್ತಿದ್ದಾರೆ.
ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಉಗ್ರಗಾಮಿ ಗುಂಪಿನ ಮಹಿಳಾ ಆತ್ಮಾಹುತಿ ಬಾಂಬರ್ ಕರಾಚಿ ವಿಶ್ವವಿದ್ಯಾಲಯದ ಆವರಣದಲ್ಲಿ ವ್ಯಾನ್‌ಗೆ ಅಪ್ಪಳಿಸಿ ಮೂವರು ಚೀನಾದ ಪ್ರಜೆಗಳು ಮತ್ತು ಅವರ ಪಾಕಿಸ್ತಾನಿ ಚಾಲಕನನ್ನು ಕೊಂದು ಹಾಕಿದ ಒಂದು ತಿಂಗಳ ನಂತರ ಚೀನಾ ಈ ಪ್ರಸ್ತಾವ ಮುಂದಿಟ್ಟಿದೆ.
ಇಸ್ಲಾಮಾಬಾದ್‌ನ ಮೂಲಗಳನ್ನು ಉಲ್ಲೇಖಿಸಿರುವ ಮಾಧ್ಯಮ ವರದಿ ಪ್ರಕಾರ, ಚೀನಾ ತನ್ನ ನಾಗರಿಕರಿಗೆ ಸರಿಯಾದ ಭದ್ರತೆ ಒದಗಿಸಬೇಕೆಂದು ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದೆ. ಶೀತಲ ಸಮರ ಮತ್ತು ಭಯೋತ್ಪಾದನೆಯ ಮೇಲಿನ ಯುದ್ಧದ ಸಮಯದಲ್ಲಿ ಹಿಂದೆ ಬಳಸಿದ ಅಥವಾ ಅಮೆರಿಕದ ಪ್ರಭಾವಕ್ಕೆ ಒಳಗಾದ ಸ್ಥಳಗಳಲ್ಲಿ ತನ್ನ ನಾಗರಿಕರಿಗೆ ಹೆಚ್ಚಿನ ಭದ್ರತೆ ಒದಗಿಸಲು ಚೀನಾ ಆದ್ಯತೆ ನೀಡುತ್ತಿದೆ.
ಆರ್ಥಿಕ ಬಿಕ್ಕಟ್ಟಿನಿಂದಾಗಿ ಹಣದ ಕೊರತೆಯಿರುವ ಇಸ್ಲಾಮಾಬಾದ್ ದೀರ್ಘಕಾಲದಿಂದ ಬಯಸುತ್ತಿದ್ದ ಸಿಪಿಇಸಿ ಯೋಜನೆಗಳಿಂದ ಸಂಚಿತವಾಗಿರುವ ಸಾಲಗಳನ್ನು ಉರುಳಿಸುವುದಾಗಿ ಭರವಸೆ ನೀಡುವ ಮೂಲಕ ಚೀನಾ ಪಾಕಿಸ್ತಾನವನ್ನು ಮನವೊಲಿಸಲು (China tactic) ಪ್ರಯತ್ನಿಸುತ್ತಿದೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ: ಭಾರತದ ಸುತ್ತ ಚೀನಾ ಸಾಲದ ಸುಳಿ: ಭೌಗೋಳಿಕ ರಾಜಕೀಯ ಹಿಡಿತಕ್ಕೆ ಹೊಸ ಮಾರ್ಗ
ಪಾಕಿಸ್ತಾನದ ಸರ್ವಋತು ಮಿತ್ರರಾಷ್ಟ್ರವಾಗಿದ್ದರೂ ಚೀನಾಗೆ ವಿಶೇಷವಾಗಿ ಪ್ರಕ್ಷುಬ್ಧ ಬಲೂಚಿಸ್ತಾನ್‌ನಲ್ಲಿ ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯಿಂದ (ಬಿಎಲ್‌ಎ) ತೀವ್ರವಾದ ಹಿನ್ನಡೆ ಉಂಟಾಗಿದೆ.
ಇರಾನ್ ಮತ್ತು ಅಫ್ಘಾನಿಸ್ತಾನದ ಗಡಿಯಲ್ಲಿರುವ ಬಲೂಚಿಸ್ತಾನ್ ದೀರ್ಘಾವಧಿಯ ಹಿಂಸಾತ್ಮಕ ದಂಗೆಗೆ ನೆಲೆಯಾಗಿದೆ. ಬಲೂಚ್ ದಂಗೆಕೋರ ಗುಂಪುಗಳು ಈ ಹಿಂದೆ 60 ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆಗಳನ್ನು ಗುರಿಯಾಗಿಸಿಕೊಂಡು ಹಲವಾರು ದಾಳಿಗಳನ್ನು ನಡೆಸಿದ್ದವು.
ಮಹತ್ವಾಕಾಂಕ್ಷೆಯ $60 ಬಿಲಿಯನ್ ಸಿಪಿಇಸಿಯು ಚೀನಾದ ವಾಯುವ್ಯ ಕ್ಸಿನ್‌ಜಿಯಾಂಗ್ ಉಯಿಗುರ್ ಸ್ವಾಯತ್ತ ಪ್ರದೇಶ ಮತ್ತು ಬಲೂಚಿಸ್ತಾನ್‌ನ ಪಶ್ಚಿಮ ಪಾಕಿಸ್ತಾನ ಪ್ರಾಂತ್ಯದ ಗ್ವದಾರ್ ಬಂದರನ್ನು ಸಂಪರ್ಕಿಸುವ 3,000-ಕಿಮೀ ಉದ್ದದ ಮಾರ್ಗ ಮತ್ತು ಮೂಲಸೌಕರ್ಯ ಯೋಜನೆಗಳಾಗಿವೆ. ಸಿಪಿಇಸಿಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಮೂಲಕ ನಿರ್ಮಿಸಲಾಗುತ್ತಿರುವ ಕಾರಣ ಭಾರತವು ಇದಕ್ಕೆ ತೀವ್ರ ಪ್ರತಿಭಟನೆ ಸಲ್ಲಿಸಿದೆ.