ಜೈಪುರ: ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಭಾರತದ ಯೋಧರು ಚೀನಾ ಸೈನಿಕರಿಗೆ ದೊಣ್ಣೆಗಳಿಂದ ಹೊಡೆಯುತ್ತಿರುವ ವಿಡಿಯೊ ಕೆಲ ದಿನಗಳ ಹಿಂದಷ್ಟೇ ವೈರಲ್ ಆಗಿತ್ತು. ಅಷ್ಟೇ ಏಕೆ, 2020ರಲ್ಲಿ ನಡೆದ ಗಲ್ವಾನ್ ಸಂಘರ್ಷದ ವೇಳೆಯೂ ಭಾರತದ ಯೋಧರು ಕಮ್ಯುನಿಸ್ಟ್ ಸೈನಿಕರ ಮೇಲೆ ಹಲ್ಲೆ ನಡೆಸಿದ ವಿಡಿಯೊಗಳು ಲಭ್ಯವಾಗಿದ್ದವು. ನಮ್ಮ ಸೈನಿಕರು ಹೀಗೆ ವೀರಾವೇಶದಿಂದ ಹೋರಾಡಿದರೂ, “ಗಡಿಯಲ್ಲಿ ಭಾರತದ ಯೋಧರು ಚೀನಾ ಸೈನಿಕರಿಂದ ಪೆಟ್ಟು ತಿನ್ನುತ್ತಿದ್ದಾರೆ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಅಲ್ಲದೆ, ಸೈನಿಕರಿಗೆ ರಾಹುಲ್ (Rahul Gandhi On Army) ಅವಮಾನ ಮಾಡಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿವೆ.
ಭಾರತ್ ಜೋಡೋ ಯಾತ್ರೆಯ ಮಧ್ಯೆಯೇ ರಾಜಸ್ಥಾನದ ಜೈಪುರದಲ್ಲಿ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿದರು. ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. “ಗಡಿಯಲ್ಲಿ ಚೀನಾ ಯುದ್ಧಕ್ಕೆ ಸನ್ನದ್ಧವಾಗುತ್ತಿದೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಗಾಢ ನಿದ್ದೆಯಲ್ಲಿದೆ ಎಂಬಂತೆ ಕಾಣುತ್ತಿದೆ. ಭಾರತದ ಯೋಧರು ಚೀನಾ ಸೈನಿಕರಿಂದ ಗಡಿಯಲ್ಲಿ ಪೆಟ್ಟು ತಿನ್ನುತ್ತಿದ್ದಾರೆ” ಎಂದು ಹೇಳಿದರು.
ಚೀನಾ ಸೈನಿಕರಿಗೆ ಭಾರತದ ಯೋಧರು ತಕ್ಕ ಪಾಠ ಕಲಿಸಿದರೂ ರಾಹುಲ್ ಗಾಂಧಿ ಮಾತ್ರ ನಮ್ಮ ಸೈನಿಕರು ಪೆಟ್ಟು ತಿನ್ನುತ್ತಿದ್ದಾರೆ ಎಂದು ಹೇಳಿರುವುದು ಸರಿಯಲ್ಲ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಂತೂ ರಾಹುಲ್ ಗಾಂಧಿ ಅವರನ್ನು “ದೇಶದ್ರೋಹಿ” ಎಂದು ಜರಿದಿದ್ದಾರೆ.
ಇದನ್ನೂ ಓದಿ | Rahul Gandhi | ಚೀನಾ ಯುದ್ಧಕ್ಕೆ ಸಿದ್ಧವಾಗುತ್ತಿದೆ, ಸರ್ಕಾರ ಮಲಗಿದೆ, ಗಡಿ ಬಿಕ್ಕಟ್ಟಿನ ಬೆನ್ನಲ್ಲೇ ರಾಹುಲ್ ಗಾಂಧಿ ಟೀಕೆ