Site icon Vistara News

ಶ್ರೀಲಂಕಾ ಬಂದರು ತಲುಪಿದ ಚೀನಾ ಬೇಹುಗಾರಿಕೆ ನೌಕೆ; ಅದಕ್ಕೂ ಮೊದಲೇ ವಿಮಾನ ಕಳಿಸಿದ ಭಾರತ

China

ಕೊಲಂಬೊ: ಚೀನಾದ ಬೇಹುಗಾರಿಕಾ ನೌಕೆ ಯುವಾನ್​ ವಾಂಗ್​ 5 ಇಂದು (ಆಗಸ್ಟ್​ 16) ಮುಂಜಾನೆ ಶ್ರೀಲಂಕಾದ ಹಂಬನ್​ಟೋಟ ಬಂದರಿಗೆ ತಲುಪಿದೆ. ಈ ನೌಕೆಯನ್ನು ಚೀನಾ ಸಂಶೋಧನಾ ಮತ್ತು ಸಮೀಕ್ಷಾ ನೌಕೆ ಎಂದು ಹೇಳಿಕೊಂಡಿದೆ. ಆದರೆ ವಾಸ್ತವದಲ್ಲಿ ಇದು ಚೀನಾದ ಪೀಪಲ್​ ಲಿಬರೇಶನ್​ ಆರ್ಮಿಗೆ ಸೇರಿದ ಒಂದು ಬೇಹುಗಾರಿಕಾ ಹಡಗು. ಶ್ರೀಲಂಕಾದಲ್ಲಿ ಚೀನಾವೇ ನಿರ್ಮಿಸಿರುವ ಹಂಬನ್​ಟೋಟ ಬಂದರಿನಲ್ಲಿ ಇದು ಶಾಶ್ವತವಾಗಿ ಲಂಗರು ಹಾಕಲಿದೆ. ಹೀಗೆ ಬಂದ ಹಡಗಿನಲ್ಲಿ ಸುಮಾರು 2000 ನಾವಿಕರು ಇದ್ದಾರೆ ಎಂದು ವರದಿಯಾಗಿದೆ.

ಭಾರತ ವಿರೋಧಿಸಿತ್ತು
ಶ್ರೀಲಂಕಾಕ್ಕೆ ಚೀನಾದ ಬೇಹುಗಾರಿಕೆ ಶಿಪ್​ ಬರುವುದನ್ನು ಭಾರತ ವಿರೋಧಿಸಿತ್ತು. ಈ ಬಗ್ಗೆ ಶ್ರೀಲಂಕಾ ಸರ್ಕಾರದೊಂದಿಗೆ ಮಾತುಕತೆಯನ್ನೂ ನಡೆಸಿತ್ತು. ಆಪದ್ಬಾಂಧವ ಭಾರತ ಮನವಿ ಮಾಡಿದ್ದರಿಂದ, ಚೀನಾದ ನೌಕೆ ಬರುವುದನ್ನು ತಾತ್ಕಾಲಿಕವಾಗಿ ತಡೆದಿತ್ತು. ಆದರೆ ಆಗಸ್ಟ್​ 3ರಂದು ಯುವಾನ್​ ವಾಂಗ್​ 5 ಪ್ರವೇಶಕ್ಕೆ ಸಮ್ಮತಿ ನೀಡಿದ್ದ ಶ್ರೀಲಂಕಾ, ‘ಚೀನಾದ ಹಡಗು ಯಾಕೆ ಪ್ರವೇಶ ಮಾಡಬಾರದು ಎಂಬ ನಮ್ಮ ಪ್ರಶ್ನೆಗೆ ಭಾರತ ತೃಪ್ತಿದಾಯಕ ಉತ್ತರ ನೀಡಿಲ್ಲ. ಹಾಗಾಗಿ ಅನುಮತಿ ಕೊಟ್ಟಿದ್ದೇವೆ’ ಎಂದು ಹೇಳಿತ್ತು.

ಏರ್​ಕ್ರಾಫ್ಟ್​ ಕಳಿಸಿದ ಭಾರತ
ಚೀನಾದ ಬೇಹುಗಾರಿಕೆ ನೌಕೆ ಯುವಾನ್​ ವಾಂಗ್​ 5 ಮುಖ್ಯ ಉದ್ದೇಶ ಭಾರತದ ಮೇಲೆ ಕಣ್ಣಿಡುವುದೇ ಆಗಿದೆ. ಉಪಗ್ರಹಗಳು ಮತ್ತು ಬ್ಯಾಲಿಸ್ಟಿಕ್​ ಕ್ಷಿಪಣಿಗಳ ಮೇಲೆ ತೀಕ್ಷ್ಣ ನಿಗಾ ಇಡಬಲ್ಲ ಈ ಹಡಗು ಚೀನಾ ಪ್ರವೇಶ ಮಾಡುವ ಒಂದು ದಿನದ ಮೊದಲು ಅಂದರೆ ಆಗಸ್ಟ್​ 15ರಂದು ಶ್ರೀಲಂಕಾಕ್ಕೆ ಭಾರತ ಒಂದು ಡಾರ್ನಿಯರ್ 228 ಎಂಬ ವಿಮಾನವನ್ನು ಉಡುಗೊರೆ ರೂಪದಲ್ಲಿ ಕೊಟ್ಟಿದೆ. ಇದೊಂದು ಕಡಲ ಗಸ್ತು ವಿಮಾನವಾಗಿದ್ದು, ಆಕಾಶದಿಂದಲೇ ಭೂಪರಿಶೀಲನೆ ಮಾಡಬಲ್ಲದು.

ಎರಡು ದಿನಗಳ ಶ್ರೀಲಂಕಾ ಪ್ರವಾಸದಲ್ಲಿರುವ ಭಾರತದ ನೌಕಾಪಡೆ ವೈಸ್​ ಅಡ್ಮೈರಲ್​ ಎಸ್​.ಎನ್​.ಘೋರ್ಮಡೆ, ಕೊಲಂಬೊದಲ್ಲಿರುವ ಭಾರತೀಯ ಹೈಕಮಿಷನರ್​ ಗೋಪಾಲ್​ ಬಾಗ್ಲೆ ಮತ್ತಿತರ ಸಿಬ್ಬಂದಿ ಸೇರಿ, ಕಟುನಾಯಕೆ ವಾಯುನೆಲೆಯಲ್ಲಿ ಈ ವಿಮಾನವನ್ನು ಶ್ರೀಲಂಕಾಕ್ಕೆ ಹಸ್ತಾಂತರ ಮಾಡಿದರು. ಈ ಸಮಾರಂಭದಲ್ಲಿ ಶ್ರೀಲಂಕಾ ನೂತನ ಅಧ್ಯಕ್ಷ ರನಿಲ್​ ವಿಕ್ರಮಸಿಂಘೆ ಕೂಡ ಉಪಸ್ಥಿತರಿದ್ದರು.

4 ಹೈ ಪವರ್‌ ಪ್ಯಾರಾಬೋಲಿಕ್‌ ಟ್ರ್ಯಾಕಿಂಗ್‌ ಆಂಟೆನ್ನಾಗಳನ್ನು ಹೊಂದಿರುವ ಚೀನಾದ ಈ ನೌಕೆಯು ಭಾರತ ಉಪಖಂಡದ ಮೇಲಿರುವ ತನ್ನ ಸ್ಯಾಟ್‌ಲೈಟ್‌ಗಳಿಂದ ಭಾರತದ ದಕ್ಷಿಣದಲ್ಲಿರುವ ಅನೇಕ ವ್ಯೂಹಾತ್ಮಕ ಪ್ರಾಮುಖ್ಯದ ಸ್ಥಳಗಳ ಮೇಲೆ ಕಣ್ಣಿಡಬಲ್ಲುದು. ವಿಶಾಖಪಟ್ಟಣದ ಸಬ್‌ಮರೀನ್‌ ನೆಲೆ, ಶ್ರೀಹರಿಕೋಟದ ರಾಕೆಟ್‌ ಉಡಾವಣೆ ಕೇಂದ್ರ, ಕಲ್ಪಾಕಂ, ಕೂಡಂಕುಳಂ, ಒಡಿಶಾದ ಚಂಡೀಪುರ ಡಿಆರ್‌ಡಿಒ ಪ್ರಯೋಗ ಕೇಂದ್ರ, ಕೈಗಾ ಮುಂತಾದ ಪರಮಾಣು ವಿದ್ಯುತ್‌ ನೆಲೆಗಳು ಕೂಡ ಈ ನೌಕೆಯ ಸ್ಯಾಟ್‌ಲೈಟ್‌ ವೀಕ್ಷಣೆಯ ವಲಯದಲ್ಲಿ ಬರಲಿವೆ. ಚೀನಾದ ಮುಖ್ಯ ನೆಲದಿಂದ ಉಡಾಯಿಸಿಬಿಟ್ಟ ಖಂಡಾಂತರ ಬ್ಯಾಲಿಸ್ಟಿಕ್‌ ಕ್ಷಿಪಣಿಗಳ ಸ್ಯಾಟ್‌ಲೈಟ್‌ ಟ್ರ್ಯಾಕಿಂಗ್‌ ನಡೆಸಬಲ್ಲದು. ಭಾರತದ ಪೂರ್ವ- ಪಶ್ಚಿಮ- ದಕ್ಷಿಣ ಕರಾವಳಿಯಲ್ಲಿ ಓಡಾಡುವ ವ್ಯೂಹಾತ್ಮಕ ಪ್ರಾಮುಖ್ಯದ ನೌಕೆಗಳ ಮೇಲೆ ಕಣ್ಣಿಡುತ್ತದೆ. ಮಾತ್ರವಲ್ಲ ಭಾರತದ ಸಬ್‌ಮರೀನ್‌ಗಳನ್ನೂ ಟ್ರ್ಯಾಕ್‌ ಮಾಡಬಲ್ಲದು. ಇದೇ ಕಾರಣಕ್ಕೆ ಭಾರತ ಈ ನೌಕೆ ಶ್ರೀಲಂಕಾ ಪ್ರವೇಶಿಸುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿತ್ತು.

ಇದನ್ನೂ ಓದಿ: ಭಾರತದಿಂದ ಸಿಕ್ಕಿಲ್ಲ ತೃಪ್ತಿದಾಯಕ ಉತ್ತರ; ಚೀನಾ ಬೇಹುಗಾರಿಕೆ ನೌಕೆ ಪ್ರವೇಶಕ್ಕೆ ಸಮ್ಮತಿಸಿದ ಶ್ರೀಲಂಕಾ

Exit mobile version