Site icon Vistara News

Chitta Ranjan Dash: ಆರ್‌ಎಸ್‌ಎಸ್‌ನ ಸ್ವಯಂಸೇವಕನಾಗಿದ್ದೆ; ಈಗಲೂ ಮರಳಲು ಸಿದ್ಧ ಎಂದ ಹೈಕೋರ್ಟ್‌ ನಿವೃತ್ತ ಜಡ್ಜ್‌ ಚಿತ್ತರಂಜನ್‌ ದಾಸ್‌

Chitta Ranjan Dash

Chitta Ranjan Dash

ಕೋಲ್ಕತ್ತಾ: ಸೋಮವಾರ (ಮೇ 20) ನಿವೃತ್ತರಾದ ಕೋಲ್ಕತ್ತಾ ಹೈಕೋರ್ಟ್‌ನ ನ್ಯಾಯಾಧೀಶ ನ್ಯಾಯಮೂರ್ತಿ ಚಿತ್ತ ರಂಜನ್ ದಾಸ್‌ (Chitta Ranjan Dash) ಅವರು, ತಾವು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸದಸ್ಯ ಎಂದು ಹೇಳಿದ್ದಾರೆ. ಯಾವುದೇ ಸಹಾಯಕ್ಕಾಗಿ ಅಥವಾ ಅವರು ನನಗೆ ಗೊತ್ತಿರುವ ಯಾವುದೇ ಕೆಲಸಕ್ಕಾಗಿ ತಮ್ಮನ್ನು ಕರೆದರೆ ‘ಆರ್‌ಎಸ್‌ಎಸ್‌ಗೆ ಮರಳಲು ಸಿದ್ಧ’ ಎಂದು ಘೋಷಿಸಿದ್ದಾರೆ. ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ.

“ನಾನು ಆರ್‌ಎಸ್‌ಎಸ್‌ಗೆ ತುಂಬಾ ಋಣಿಯಾಗಿದ್ದೇನೆ. ಧೈರ್ಯದಿಂದ ಮಾತನಾಡಲು, ನೇರವಾಗಿರಲು, ಇತರರಿಗೆ ಸಮಾನವಾದ ದೃಷ್ಟಿಕೋನವನ್ನು ಹೊಂದಲು ಆರ್‌ಎಸ್‌ಎಸ್‌ ನನಗೆ ಕಲಿಸಿದೆ. ನಾನು ಬಾಲ್ಯ ಮತ್ತು ಯೌವನವನ್ನು ಆರ್‌ಎಸ್‌ಎಸ್‌ನೊಂದಿಗೆ ಕಳೆದಿದ್ದೇನೆ. ವೃತ್ತಿಯ ಕಾರಣದಿಂದ ನಾನು ಸುಮಾರು ವರ್ಷ ಆರ್‌ಎಸ್‌ಎಸ್‌ನಿಂದ ದೂರ ಉಳಿದಿದ್ದೆ. ಈಗ ಮರಳಲು ಸಿದ್ಧʼʼ ಎಂದು ಅವರು ಹೇಳಿದ್ದಾರೆ.

ಚಿತ್ತ ರಂಜನ್ ದಾಸ್‌ ಅವರು 1962ರಲ್ಲಿ ಒಡಿಶಾದ ಸೋನೆಪುರದಲ್ಲಿ ಜನಿಸಿದರು. ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಉಲ್ಲುಂಡಾದಲ್ಲಿ ಪೂರೈಸಿದರು. ಬಳಿಕ ಧೆಂಕನಲ್ ಮತ್ತು ಭುವನೇಶ್ವರದಲ್ಲಿ ತಮ್ಮ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದರು. 1985ರಲ್ಲಿ ಕಟಕ್‌ನಲ್ಲಿ ಕಾನೂನು ಪದವಿ ಪಡೆದರು. ಅವರು 1986ರಲ್ಲಿ ವಕೀಲರಾಗಿ ಹೆಸರು ನೋಂದಾಯಿಸಿಕೊಂಡರು ಮತ್ತು 1992ರಲ್ಲಿ ರಾಜ್ಯ ಸರ್ಕಾರದ ಹೆಚ್ಚುವರಿ ಸ್ಥಾಯಿ ಸಲಹೆಗಾರರಾಗಿ ಆಯ್ಕೆಯಾದರು.

ಅವರು 1999ರಲ್ಲಿ ಒಡಿಶಾ ಸುಪೀರಿಯರ್ ಜುಡಿಷಿಯಲ್ ಸರ್ವಿಸ್ (ಹಿರಿಯ ಶಾಖೆ)ಗೆ ನೇರ ನೇಮಕಗೊಂಡರು. 2009ರ ಅಕ್ಟೋಬರ್‌ನಲ್ಲಿ ಒಡಿಶಾ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಬಡ್ತಿ ಪಡೆದರು. ಅದಾಗಿ 15 ವರ್ಷ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅವರು ಕೋಲ್ಕತ್ತಾ ಹೈಕೋರ್ಟ್‌ ನ್ಯಾಯಾಧೀಶರಾಗಿ 2022ರ ಜೂನ್‌ನಲ್ಲಿ ನಿಯುಕ್ತಿಗೊಂಡಿದ್ದರು.

“ನಾನು 37 ವರ್ಷಗಳಿಂದ ಆರ್‌ಎಸ್‌ಎಸ್‌ನಿಂದ ದೂರ ಸರಿದಿದ್ದೇನೆ. ಆದರೆ ನನ್ನ ಸದಸ್ಯತ್ವವನ್ನು ಎಂದಿಗೂ ಯಾವುದೇ ಅನುಕೂಲಕ್ಕಾಗಿ ಬಳಸಿಲ್ಲ. ನಾನು ಎಲ್ಲರನ್ನೂ ಸಮಾನವಾಗಿ ಪರಿಗಣಿಸಿದ್ದೇನೆ. ಯಾವುದೇ ಕೆಲಸಕ್ಕೆ ನನ್ನ ಅಗತ್ಯವಿದ್ದರೆ ನಾನು ಆರ್‌ಎಸ್‌ಎಸ್‌ಗೆ ಹಿಂತಿರುಗಲು ಸಿದ್ಧನಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ, ಆದ್ದರಿಂದ ನಾನು ಆರ್‌ಎಸ್‌ಎಸ್‌ಗೆ ಸೇರಿದವನು ಎಂದು ಹೇಳಿದರೆ ಅದು ತಪ್ಪಲ್ಲ” ಎಂದು ಅವರು ತಿಳಿಸಿದ್ದಾರೆ.

ಚಿತ್ತ ರಂಜನ್‌ ದಾಸ್‌ ಅವರು ತಾವು ತೀರ್ಪು ನೀಡುವ ವೇಳೆ ಆತ ಶ್ರೀಮಂತ, ಬಡವ, ಕಮ್ಯುನಿಸ್ಟ್‌, ಬಿಜೆಪಿ, ಕಾಂಗ್ರೆಸ್ ಅಥವಾ ಟಿಎಂಸಿಯವನು ಎಂದು ಎಂದಿಗೂ ಬೇಧ ಮಾಡಿಲ್ಲ. ಎಲ್ಲರನ್ನೂ ಸಮಾನಾಗಿ ಪರಿಗಣಿಸಿದ್ದೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: Mohan Bhagwat: ಆರ್‌ಎಸ್‌ಎಸ್‌ ಮೀಸಲಾತಿ ಪರ; ಮೋಹನ್‌ ಭಾಗವತ್‌ ದಿಢೀರನೆ ಹೀಗೆ ಹೇಳಿದ್ದೇಕೆ?

ಕೆಲವು ಹೈಕೋರ್ಟ್ ನ್ಯಾಯಾಧೀಶರು ಕಾನೂನಿನೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪದೇ ಪದೆ ಆರೋಪಿಸುವ ಹಿನ್ನಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಕಳೆದ ತಿಂಗಳು ಉದ್ಯೋಗಕ್ಕಾಗಿ ನಗದು ಪ್ರಕರಣದ ತೀರ್ಪು ಪ್ರಕಟವಾದ ಒಂದು ದಿನದ ನಂತರ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ್ದ ಅವರು, “ಬಿಜೆಪಿಯವರು ಎಲ್ಲವನ್ನೂ ಖರೀದಿಸಿದ್ದಾರೆ. ನ್ಯಾಯಾಲಯಗಳೂ ಇದಕ್ಕೆ ಹೊರತಲ್ಲ. ನಾನು ಸುಪ್ರೀಂ ಕೋರ್ಟ್ ಬಗ್ಗೆ ಮಾತನಾಡುತ್ತಿಲ್ಲʼʼ ಎಂದು ಪರೀಕ್ಷವಾಗಿ ಆರೋಪಿಸಿದ್ದರು.

Exit mobile version