ಅಹ್ಮದಾಬಾದ್: ಈ ಹಿಂದೆ ಪಂಜಾಬ್ನಲ್ಲಿ ವಿಧಾನಸಭೆ ಚುನಾವಣೆ ಪೂರ್ವ ಆಮ್ ಆದ್ಮಿ ಪಕ್ಷ ಅಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಮಾಡುವ ಜವಾಬ್ದಾರಿಯನ್ನು ಜನತೆಗೇ ವಹಿಸಿತ್ತು. ಸಾಮಾನ್ಯವಾಗಿ ಯಾವುದೇ ರಾಜಕೀಯ ಪಕ್ಷದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆ ಪಕ್ಷದ ವರಿಷ್ಠರೇ ಮಾಡುತ್ತಾರೆ. ಆದರೆ ಆಮ್ ಆದ್ಮಿ ಪಕ್ಷ ಪಂಜಾಬ್ ಮೂಲಕ ಒಂದು ಹೊಸ ಸಂಪ್ರದಾಯ ಕಂಡುಕೊಂಡಿದೆ. ಜನರ ಬಹುಮತ ಯಾರಿಗೆ ಬರುತ್ತದೆಯೋ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡುವುದಾಗ ಆ ಪಕ್ಷ ಹೇಳಿತ್ತು. ಅಂತೆಯೇ ಭಗವಂತ್ ಮಾನ್ಗೇ ಜನರು ಮತ ಹಾಕಿದ್ದರು. ಈ ನಿಟ್ಟಿನಲ್ಲಿ ಮಾನ್ ಅವರನ್ನೇ ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿ, ನಂತರ ಅಲ್ಲಿನ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು, ಮಾನ್ ಸಿಎಂ ಕೂಡ ಆಗಿದ್ದಾರೆ.
ಅದೇ ತಂತ್ರವನ್ನು ಆಮ್ ಆದ್ಮಿ ಪಕ್ಷ ಈಗ ಗುಜರಾತ್ನಲ್ಲೂ ಮಾಡುತ್ತಿದೆ. ವರ್ಷದ ಕೊನೆಯಲ್ಲಿ ಗುಜರಾತ್ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಆಪ್ ಈಗಾಗಲೇ ಅಲ್ಲಿ ಪ್ರಚಾರದಲ್ಲಿ ತೊಡಗಿದೆ. ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಪದೇಪದೆ ಗುಜರಾತ್ಗೆ ಭೇಟಿ ಕೊಡುತ್ತಿದ್ದಾರೆ. ನರೇಂದ್ರ ಮೋದಿಯವರ ತವರು ರಾಜ್ಯವೂ ಆಗಿರುವುದರಿಂದ ಗುಜರಾತ್ನ್ನು ಅರವಿಂದ್ ಕೇಜ್ರಿವಾಲ್ ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಬಾರಿ ಹೇಗಾದರೂ ಗುಜರಾತ್ ಗೆದ್ದು, ತಾವು ಬಿಜೆಪಿಗೆ ಸರಿಸಮಾನಾಗಿ ಸ್ಪರ್ಧೆ ಕೊಡುತ್ತೇವೆ ಎಂದು ತೋರಿಸಬೇಕು ಎಂದು ಅವರು ಎಲ್ಲ ರೀತಿಯ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಉಚಿತ ವಿದ್ಯುತ್, ಅತ್ಯುತ್ತಮ ಆರೋಗ್ಯ ವ್ಯವಸ್ಥೆ, ಉತ್ತಮ ಶಿಕ್ಷಣ ಕಲ್ಪಿಸುವುದು ಸೇರಿ ವಿವಿಧ ಪ್ರಣಾಳಿಕೆಗಳನ್ನೂ ಬಿಡುಗಡೆ ಮಾಡಿದ್ದಾರೆ.
ಈಗ ಅವರು ಹೊಸದಾಗಿ ಗುಜರಾತ್ನಲ್ಲಿ ನಿಮ್ಮ ಮುಖ್ಯಮಂತ್ರಿಯನ್ನು ನೀವೇ ಆಯ್ಕೆ ಮಾಡಿ ಎಂಬ ಅಭಿಯಾನ ಪ್ರಾರಂಭಿಸಿದ್ದಾರೆ. ಅಂದರೆ ಆಪ್ನಿಂದ ಯಾರು ಮುಖ್ಯಮಂತ್ರಿ ಅಭ್ಯರ್ಥಿಯಾಗಬೇಕು ಎಂದು ಆಯ್ಕೆ ಮಾಡುವ ಹೊಣೆಯನ್ನು ಜನರಿಗೇ ಬಿಟ್ಟಿದ್ದಾರೆ. ಗುಜರಾತ್ನಲ್ಲಿ ಚುನಾವಣೆಯಲ್ಲಿ ಮಾತನಾಡಿದ ಅವರು,‘ಜನರು ಬದಲಾವಣೆ ಬಯಸುತ್ತಿದ್ದಾರೆ. ಹಣದುಬ್ಬರ, ನಿರುದ್ಯೋಗಗಳಿಂದ ಮುಕ್ತಿ ಬಯಸುತ್ತಿದ್ದಾರೆ. ಬಿಜೆಪಿಯವರು ಗುಜರಾತ್ನಲ್ಲಿ ಒಂದು ವರ್ಷದ ಹಿಂದೆ ಮುಖ್ಯಮಂತ್ರಿಯನ್ನು ಬದಲು ಮಾಡಿದ್ದಾರೆ. ಗುಜರಾತ್ನಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ವಿಜಯ್ ರೂಪಾಣಿ ಸಿಎಂ ಆದರು. ನಂತರ ಅವರನ್ನು ಹುದ್ದೆಯಿಂದ ಇಳಿಸಿ ಭೂಪೇಂದ್ರ ಪಟೇಲ್ರನ್ನು ಸಿಎಂ ಮಾಡಲಾಯಿತು. ಈ ಬದಲಾವಣೆ ಮಾಡಿದ್ದಾದರೂ ಏಕೆ? ವಿಜಯ್ ರೂಪಾಣಿ ಮೇಲೆ ಅಸಮಾಧಾನ ಇದ್ದಿದ್ದಕ್ಕೇ ಅಲ್ಲವೇ ಅವರನ್ನು ಸಿಎಂ ಹುದ್ದೆಯಿಂದ ಇಳಿಸಿದ್ದು?’ ಎಂದು ಪ್ರಶ್ನಿಸಿದರು.
‘ನಾವು ಹೀಗೆಲ್ಲ ಮಾಡುವುದಿಲ್ಲ. ಮೊದಲೊಬ್ಬರನ್ನು ಸಿಎಂ ಮಾಡುವುದು, ನಂತರ ಅವರನ್ನು ಬದಲಿಸುವುದೆಲ್ಲ ನಮ್ಮ ಪಕ್ಷಕ್ಕೆ ಒಗ್ಗದ ಕೆಲಸ. ಹೀಗಾಗಿ ಸಿಎಂ ಅಭ್ಯರ್ಥಿ ಆಯ್ಕೆಯನ್ನೇ ಜನರಿಗೆ ಬಿಡುತ್ತೇವೆ. ಅವರು ಯಾರನ್ನು ಹೇಳುತ್ತಾರೋ, ಅವರನ್ನೇ ನಾವು ಮುಖ್ಯಮಂತ್ರಿ ಹುದ್ದೆ ಅಭ್ಯರ್ಥಿಯನ್ನಾಗಿ ಘೋಷಿಸುತ್ತೇವೆ’ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: Election Commission | ಗುಜರಾತ್ ಚುನಾವಣೆ ದಿನಾಂಕ ಘೋಷಣೆ ಏಕಿಲ್ಲ? ನಿಯಮ ಉಲ್ಲಂಘಿಸಿತೇ ಆಯೋಗ?