ಚೆನ್ನೈ: ನಗರದ ಅಮೆರಿಕ ದೂತಾವಾಸದ ಮುಖ್ಯಸ್ಥರಾಗಿ (ಕಾನ್ಸುಲ್ ಜನರಲ್) ಕ್ರಿಸ್ಟೋಫರ್ ಡಬ್ಲ್ಯು. ಹಾಡ್ಜಸ್ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾನ್ಸುಲ್ ಜನರಲ್ ಹಾಡ್ಜಸ್ ಅವರು, ಅಮೇರಿಕ-ಭಾರತದ ಸಹಭಾಗಿತ್ವದ ಮಹತ್ವದ ಹೊತ್ತಿನಲ್ಲಿ ದಕ್ಷಿಣ ಭಾರತದಲ್ಲಿ ಅಮೆರಿಕವನ್ನು ಪ್ರತಿನಿಧಿಸುತ್ತಿರುವ ಗೌರವ ನನ್ನದು. ನಾವು ಸ್ಥಳೀಯ ಮತ್ತು ಪ್ರಾದೇಶಿಕವಾಗಿ ಮಾಡುವ ಕೆಲಸಗಳು ಉಭಯ ದೇಶಗಳ ನಡುವೆ ಶ್ರೀಮಂತ ವಾಣಿಜ್ಯ, ಶೈಕ್ಷಣಿಕ ಸಂಬಂಧಗಳು ಮತ್ತು ಬಾಹ್ಯಾಕಾಶ ವಲಯವೂ ಸೇರಿ ದ್ವಿಪಕ್ಷೀಯ ಸಹಭಾಗಿತ್ವವನ್ನು ವಿಸ್ತಾರಗೊಳಿಸುವಲ್ಲಿ ಕೊಡುಗೆ ನೀಡುತ್ತವೆ. ನಮ್ಮ ನಡುವಿನ ಬಾಂಧವ್ಯವನ್ನು ಇನ್ನಷ್ಟು ಹತ್ತಿರ ತರಲು ಕಾನ್ಸುಲರ್ ಸೇವೆಗಳನ್ನು ಒದಗಿಸುವುದಕ್ಕೆ ಹೆಮ್ಮೆಯಿದೆ ಎಂದು ತಿಳಿಸಿದರು.
ಅಮೆರಿಕ- ಭಾರತದ ಸಂಬಂಧವು ಎರಡು ಸರ್ಕಾರಗಳ ನಡುವೆ ಮಾತ್ರವಲ್ಲ, ಉಭಯ ದೇಶಗಳ ಜನರ ನಡುವಿನ ಸಂಬಂಧ ಎಂಬುದನ್ನು ನಮ್ಮ ಪ್ರಯತ್ನಗಳು ಎತ್ತಿ ತೋರುತ್ತವೆ. ನಮ್ಮ ಪ್ರಾಂತ್ಯದಲ್ಲಿ ಬರುವ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೊಬಾರ್, ಲಕ್ಷದ್ವೀಪ ಮತ್ತು ಪುದುಚೇರಿಗಳಲ್ಲಿ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ | CM Siddaramaiah : ಆ. 3ರಂದು ಮೋದಿ ಭೇಟಿಯಾಗಲಿರುವ ಸಿದ್ದರಾಮಯ್ಯ; ಕಾಂಗ್ರೆಸ್ ಸಭೆ ಜತೆಗೆ ಪ್ರಧಾನಿ ಮೀಟಿಂಗ್
ಚೆನ್ನೈನಲ್ಲಿನ ಅಮೆರಿಕ ದೂತಾವಾಸದ ಕಾನ್ಸುಲ್ ಜನರಲ್ ಆಗಿ ಅಧಿಕಾರವಹಿಸಿಕೊಳ್ಳುವ ಮುನ್ನ ಹಾಡ್ಜಸ್ ಅವರು, ಕೋ ಆರ್ಡಿನೇಟರ್ ಫಾರ್ ಆಫ್ಘನ್ ರಿಲೊಕೇಷನ್ ಎಫರ್ಟ್ಸ್ (ಕೇರ್) ಕಚೇರಿಯ ಹಿರಿಯ ಸಲಹೆಗಾರರಾಗಿದ್ದರು. ಅದಕ್ಕೂ ಮುನ್ನ ಬ್ಯೂರೋ ಫಾರ್ ನಿಯರ್ ಈಸ್ಟ್ರನ್ ಅಫೇರ್ಸ್‌ನಲ್ಲಿ ಅಸಿಸ್ಟೆನ್ಸ್ ಕೋ ಆರ್ಡಿನೇಷನ್ ಆ್ಯಂಡ್ ಪ್ರೆಸ್ ಆ್ಯಂಡ್ ಪಬ್ಲಿಕ್ ಡಿಪ್ಲೊಮಸಿ ವಿಭಾಗದ ಡೆಪ್ಯುಟಿ ಅಸಿಸ್ಟೆಂಟ್ ಸೆಕ್ರೆಟರಿಯಾಗಿ ಹಾಗೂ ಇಸ್ರೇಲಿ-ಪ್ಯಾಲೆಸ್ಟಿನಿಯನ್ ವ್ಯವಹಾರಗಳ ಉಪ ಸಹಾಯಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಅವರು ಕಡೆಯದಾಗಿ ವಿದೇಶದಲ್ಲಿ ಕಾರ್ಯನಿರ್ವಹಿಸಿದ್ದು, ಜೆರೂಸಲೇಂನ ರಾಯಭಾರ ಕಚೇರಿಯಲ್ಲಿ ಅಸಿಸ್ಟೆಂಟ್ ಡೆಪ್ಯುಟಿ ಚೀಫ್ ಆಫ್ ಮಿಷನ್ ಮತ್ತು ಚೀಫ್ ಆಫ್ ದಿ ಪ್ಯಾಲೆಸ್ತೇನಿಯನ್ ಅಫೇರ್ಸ್ ಯೂನಿಟ್‌ನಲ್ಲಿ ಸೇವೆ ಸಲ್ಲಿಸಿದ್ದರು.
ಹಾಡ್ಜಸ್ ಅವರು 2000ರಲ್ಲಿ ವಿದೇಶಾಂಗ ಸೇವೆಗೆ ಸೇರ್ಪಡೆಯಾದರು. ಅವರು ಜೆರೂಸಲೇಂ, ಹನೊಯ್, ವಿಯೆಟ್ನಾಂ ಮತ್ತು ಅಕ್ಕ್ರಾ, ಘಾನಾದಲ್ಲಿ ಪಬ್ಲಿಕ್ ಅಫೇರ್ಸ್ ಆಫೀಸರ್ ಆಗಿ ಸೇವೆ ಸಲ್ಲಿಸಿದರು. ಅಲ್ಲದೆ ಆಸ್ಟ್ರಿಯಾ, ಜರ್ಮನಿ, ಸ್ವಿಟ್ಜರ್‌ಲೆಂಡ್ ಮತ್ತು ಲಿಷೆನ್ ಸ್ಟೀನ್‌ಗಳಲ್ಲಿ ಆಫೀಸ್ ಆಫ್ ದಿ ಸೆಂಟ್ರಲ್ ಯೂರೋಪಿಯನ್ ಅಫೇರ್ಸ್‌ನಲ್ಲಿ ಡೆಪ್ಯುಟಿ ಡೈರೆಕ್ಟರ್ ಆಗಿ ದುಡಿದಿದ್ದಾರೆ. ಸುವಾ, ಫಿಜಿ ಮತ್ತು ಫ್ರಾಂಕ್ ಫರ್ಟ್, ಜರ್ಮನಿಗಳಲ್ಲೂ ಕೆಲಸ ಮಾಡಿದ್ದಾರೆ.