ನವದೆಹಲಿ: ಸುಪ್ರೀಂ ಕೋರ್ಟ್ (Supreme Court) ತೀರ್ಪುಗಳನ್ನು ಪ್ರಾದೇಶಿಕ ಭಾಷೆಯಲ್ಲೂ ಲಭ್ಯವಾಗುವ ದಿಸೆಯಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂಗಿತ ವ್ಯಕ್ತಪಡಿಸಿದ ಬೆನ್ನಲ್ಲೇ, ಗಣರಾಜ್ಯೋತ್ಸವದ ದಿನದಿಂದಲೇ (ಜನವರಿ 26) ಕನ್ನಡ ಸೇರಿ ಸಂವಿಧಾನ ಅನುಸೂಚಿತ 22 ಭಾಷೆಗಳ ಪೈಕಿ ಕೆಲವು ಭಾಷೆಗಳಲ್ಲಿ (Verdicts in Scheduled Languages) ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳು ಲಭ್ಯವಾಗಲಿವೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ (DY Chandrachud) ಅವರು ಐತಿಹಾಸಿಕ ನಿರ್ಧಾರ ಘೋಷಿಸಿದ್ದಾರೆ.
“ಗಣರಾಜ್ಯೋತ್ಸವದ ದಿನದಿಂದಲೇ ಸುಪ್ರೀಂ ಕೋರ್ಟ್ ಎಲೆಕ್ಟ್ರಾನಿಕ್-ಸುಪ್ರೀಂ ಕೋರ್ಟ್ ರಿಪೋರ್ಟ್ಸ್ (e-SCR) ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಇದರಿಂದಾಗಿ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಿದ 22 ಭಾಷೆಗಳ ಪೈಕಿ ಕೆಲವು ಭಾಷೆಗಳಲ್ಲಿ ತೀರ್ಪುಗಳು ಲಭ್ಯ ಇರಲಿವೆ. ಸರ್ವೋಚ್ಚ ನ್ಯಾಯಾಲಯದ ವೆಬ್‌ಸೈಟ್, ಮೊಬೈಲ್ ಆ್ಯಪ್ ಹಾಗೂ ನ್ಯಾಷನಲ್ ಜುಡಿಶಿಯಲ್ ಡೇಟಾ ಗ್ರಿಡ್ (NJDG) ಜಡ್ಜ್‌ಮೆಂಟ್ ಪೋರ್ಟಲ್‌ನಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ತೀರ್ಪಿನ ಪ್ರತಿಗಳು ಲಭ್ಯವಿರಲಿವೆ” ಎಂದು ಮಾಹಿತಿ ನೀಡಿದರು.
“ಸದ್ಯ ಇ-ಸಿಎಸ್‌ಆರ್ ಯೋಜನೆ ಅಡಿಯಲ್ಲಿ 34 ಸಾವಿರ ತೀರ್ಪುಗಳ ಪ್ರತಿಗಳು ಲಭ್ಯ ಇವೆ. ಇವುಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ 1,091 ತೀರ್ಪುಗಳು ಇವೆ. ಕನ್ನಡದಲ್ಲಿ 17, ಒರಿಯಾ 21, ಮರಾಠಿ 14, ಅಸ್ಸಾಮೀಸ್ 4, ಮಲಯಾಳಂ 29, ನೇಪಾಳಿ 3, ಪಂಜಾಬಿ 4, ತಮಿಳು 52, ತೆಲುಗು 28 ಹಾಗೂ ಉರ್ದುವಿನಲ್ಲಿ 3 ತೀರ್ಪುಗಳು ಇವೆ” ಎಂದು ವಿವರಿಸಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ಅನುಸೂಚಿತ ಭಾಷೆಗಳಲ್ಲೂ ತೀರ್ಪು ಲಭ್ಯ ಇರಿಸುವ ಕುರಿತು ಶ್ರಮಿಸಲಾಗುತ್ತದೆ ಎಂದೂ ತಿಳಿಸಿದ್ದಾರೆ.
ಇದನ್ನೂ ಓದಿ | Narendra Modi: ಕೇಂದ್ರ, ನ್ಯಾಯಾಂಗ ಸಂಘರ್ಷದ ಬೆನ್ನಲ್ಲೇ ಸಿಜೆಐಗೆ ಮೋದಿ ಶ್ಲಾಘನೆ, ಏನಿದಕ್ಕೆ ಕಾರಣ?