ನವದೆಹಲಿ: ದೇಶದಲ್ಲಿ ವಸಾಹತು ಕಾಲದ ಕ್ರಿಮಿನಲ್ ಕಾನೂನುಗಳ (Criminal Laws) ಸಂಪೂರ್ಣ ತಿದ್ದುಪಡಿ ದಿಸೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದ್ದು, ಭಾರತೀಯ ದಂಡ ಸಂಹಿತೆ (IPC-1860), ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆ (CrPC-1973) ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳನ್ನು (Indian Evidence Act-1872) ತಿದ್ದುಪಡಿಗೊಳಿಸಲಾಗಿದೆ. ಇವುಗಳ ಬದಲಾಗಿ ಮೂರು ಹೊಸ ಕಾನೂನುಗಳು (New Laws) ಜುಲೈ 1ರಿಂದಲೇ ದೇಶಾದ್ಯಂತ ಜಾರಿಗೆ ಬರಲಿವೆ. ಇದರ ಬೆನ್ನಲ್ಲೇ, ಹೊಸ ಕಾನೂನುಗಳ ಜಾರಿಯ ಕುರಿತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಿಜೆಐ ಡಿ.ವೈ.ಚಂದ್ರಚೂಡ್ (CJI Chandrachud) ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಭಾರತವು ಬದಲಾಗುತ್ತಿದೆ ಎಂಬುದಕ್ಕೆ ಹೊಸ ಕಾನೂನುಗಳ ಜಾರಿಯೇ ಸಾಕ್ಷಿಯಾಗಿದೆ. ಭಾರತ ಹೊಸ ಹಾದಿಯತ್ತ ಸಾಗುತ್ತಿದೆ. ಆಧುನಿಕ ಭಾರತದ ಸವಾಲುಗಳನ್ನು ಎದುರಿಸಲು ಹಾಗೂ ಭವಿಷ್ಯದ ದೃಷ್ಟಿಯಿಂದ ಕಾನೂನುಗಳ ಬದಲಾವಣೆಯು ಪ್ರಮುಖವಾಗಿದೆ. ಇದರಿಂದ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಆಗುತ್ತದೆ. ಹಾಗಾಗಿ, ಹೊಸ ಕಾನೂನುಗಳ ಜಾರಿಯು ಭಾರತವು ಬದಲಾಗುತ್ತಿದೆ ಎಂಬುದಕ್ಕೆ ಕುರುಹು” ಎಂದು ಹೊಸ ಕಾನೂನುಗಳನ್ನು ಶ್ಲಾಘಿಸಿದರು.
#WATCH | Delhi: CJI DY Chandrachud says, "…I think the enactment of these (Bharatiya Nyaya Sanhita, Bharatiya Nagarik Suraksha Sanhita and Bharatiya Sakshya Act) laws by parliament is a clear indicator that India is changing, India is on the move and that India needs new legal… pic.twitter.com/M1ZXOnXTfN
— ANI (@ANI) April 20, 2024
“ದೇಶದ ಕಾನೂನು ವ್ಯವಸ್ಥೆ, ಕ್ರಿಮಿನಲ್ ಕಾನೂನುಗಳ ಬದಲಾವಣೆಯು ಅತ್ಯಗತ್ಯವಾಗಿತ್ತು. ಇದರ ದಿಸೆಯಲ್ಲಿ ಹೊಸ ಕಾನೂನುಗಳನ್ನು ಜಾರಿಗೊಳಿಸುತ್ತಿರುವುದು, ಮಹತ್ವದ ಬದಲಾವಣೆ ಮಾಡುತ್ತಿರುವುದು ಸಂತಸವಾಗಿದೆ. ಅದರಲ್ಲೂ, ಸಂತ್ರಸ್ತರನ್ನು ರಕ್ಷಿಸಿ, ಅಪರಾಧ ಎಸಗುವವರ ವಿರುದ್ಧ ಕೂಲಂಕಷ ತನಿಖೆಗೆ ಹೊಸ ಕಾನೂನುಗಳು ಸಹಕಾರಿಯಾಗಿವೆ” ಎಂದು ಬಣ್ಣಿಸಿದರು.
ಐಪಿಸಿಯನ್ನು ಭಾರತೀಯ ನ್ಯಾಯ ಸಂಹಿತೆ-2023, ಸಿಆರ್‌ಪಿಸಿಯನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಭಾರತೀಯ ಸಾಕ್ಷ್ಯ ವಿಧೇಯಕ-2023 ಎಂಬುದಾಗಿ ಮಾರ್ಪಡಿಸಲಾಗಿದೆ. ಹೊಸ ಕಾನೂನುಗಳು ಜುಲೈ 1ರಿಂದ ಜಾರಿಗೆ ಬರಲಿವೆ.
ಈಗಿರುವ ಭಾರತೀಯ ದಂಡ ಸಂಹಿತೆಯಲ್ಲಿ 420 ಸೆಕ್ಷನ್ ಅನ್ನು ವಂಚನೆ ಅಪರಾಧಕ್ಕೆ ಅನ್ವಯಿಸಲಾಗುತ್ತದೆ. ಆದರೆ, ಭಾರತೀಯ ನ್ಯಾಯ ಸಂಹಿತೆಯ ಈ ಅಪರಾಧಕ್ಕೆ 316(2), (3) ಮತ್ತು (4) ಸೆಕ್ಷನ್‌ಗಳು ಇರಲಿವೆ. ವಂಚನೆ ಅಪರಾಧಕ್ಕಾಗಿ ಈ ಸೆಕ್ಷನ್‌ಗಳಡಿ ಅಪರಾಧಿಗೆ ಮೂರು ವರ್ಷ, ಐದು ವರ್ಷ ಅಥವಾ ಏಳು ವರ್ಷಗಳವರೆಗೆ ದಂಡ ಸಹಿತ ಜೈಲು ಶಿಕ್ಷೆಯನ್ನು ವಿಸ್ತರಿಸಬಹುದಾಗಿದೆ.
ದೇಶದ್ರೋಹ ಕಾನೂನು ಬದಲು
ಬ್ರಿಟಿಷರ ಕಾಲದಲ್ಲಿ ಜಾರಿಗೆ ತಂದ ದೇಶದ್ರೋಹದ ಕಾನೂನು ನೂತನ ಕ್ರಿಮಿನಲ್ ಕಾನೂನಿನಲ್ಲಿ ಇರುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಹಿತಿ ನೀಡಿದ್ದಾರೆ. ದೇಶದ್ರೋಹ ಕಾನೂನಿನಲ್ಲಿ ಬಂಧಿತರಾದವರಿಗೆ ಮೂರು ವರ್ಷದಿಂದ ಜೀವಾವಧಿ ಶಿಕ್ಷೆ ನೀಡಬಹುದಾಗಿದ್ದು, ಈ ಕಾನೂನು ರದ್ದುಗೊಳಿಸಲಾಗುತ್ತದೆ ಎಂದು ಹೇಳಿದರು. ಇದರ ಬದಲಾಗಿ ಹೊಸ ನಿಯಮಗಳು ಜಾರಿಗೆ ಬರಲಿವೆ ಎಂದು ಕೂಡ ತಿಳಿಸಿದರು.
ಅತ್ಯಾಚಾರಿಗಳಿಗೆ 20 ವರ್ಷ ಜೈಲು
ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗುತ್ತಿರುವ ಬೆನ್ನಲ್ಲೇ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವುದು ನೂತನ ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದೆ. “ಹೊಸ ಕಾನೂನುಗಳ ಅಡಿಯಲ್ಲಿ ಅತ್ಯಾಚಾರಿಗಳಿಗೆ ಗರಿಷ್ಠ 20 ವರ್ಷ ಅಥವಾ ಅವರು ಜೀವಿತಾವಧಿವರೆಗೆ ಜೈಲಿನಲ್ಲಿ ಕಾಲ ಕಳೆಯುವ ರೀತಿ ಶಿಕ್ಷೆ ವಿಧಿಸಲಾಗುತ್ತದೆ. ಹಾಗೆಯೇ, ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದವರಿಗೆ ಗಲ್ಲು ಶಿಕ್ಷೆ ವಿಧಿಸುವ, ಅತ್ಯಾಚಾರ ಸಂತ್ರಸ್ತೆಯರ ಮಾಹಿತಿ ಬಹಿರಂಗಪಡಿಸಿದವರಿಗೂ ಶಿಕ್ಷೆ ವಿಧಿಸುವ ಕಾನೂನು ಇರಲಿದೆ” ಎಂದು ಅಮಿತ್ ಶಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Parliament Session: ಅಪರಾಧ ಎಸಗಿ ದೇಶ ಬಿಟ್ಟು ಹೋದವರಿಗೆ ಇನ್ನಿಲ್ಲ ನೆಮ್ಮದಿ; ಬರ್ತಿದೆ ಹೊಸ ಕಾನೂನು!