Site icon Vistara News

CJI Chandrachud: ಸಿಜೆಐ ಚಂದ್ರಚೂಡ್‌ ಕುರಿತು ಟ್ರೋಲ್‌, ರಾಷ್ಟ್ರಪತಿಗೆ ಪತ್ರ ಬರೆದ ಪ್ರತಿಪಕ್ಷಗಳು

Chief Justice said that RamJanmabhumi case verdict was 'judgment of court'

ನವದೆಹಲಿ: ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ (CJI Chandrachud) ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಮಾಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಹಾಗೆಯೇ, ಟ್ರೋಲ್‌ ಮಾಡುತ್ತಿರುವವರ ಕುರಿತು ಕಠಿಣ ಕ್ರಮ ತೆಗೆದುಕೊಳ್ಳಬೇಕು, ಪ್ರಕರಣದಲ್ಲಿ ಮಧ್ಯಪ್ರವೇಶಿಸಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪ್ರತಿಪಕ್ಷಗಳ ನಾಯಕರು ಪತ್ರ ಬರೆದಿದ್ದಾರೆ.

“ಮಹಾರಾಷ್ಟ್ರ ಸರ್ಕಾರದ ಪರ ಮಾತನಾಡುವ ಉತ್ಸಾಹದಲ್ಲಿ ಸಿಜೆಐ ಚಂದ್ರಚೂಡ್‌ ಅವರನ್ನು ಜಾಲತಾಣಗಳಲ್ಲಿ ಟ್ರೋಲ್‌ ಮಾಡುತ್ತಿರುವುದು ಅಪಾಯಕಾರಿಯಾಗಿದೆ. ಸಿಜೆಐ ನೇತೃತ್ವದ ನ್ಯಾಯಪೀಠವು ಮಹಾರಾಷ್ಟ್ರದ ಗವರ್ನರ್‌ ಅವರು ಸರ್ಕಾರ ಪತನವಾಗುವ ನಡೆದುಕೊಂಡ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿಯೇ ಹೀಗೆ ಮಾಡಲಾಗುತ್ತಿದೆ. ಆಕ್ಷೇಪಾರ್ಹ ಪದಗಳ ಬಳಕೆಗಳಿಂದ ಸಿಜೆಐ ಅವರನ್ನು ಟ್ರೋಲ್‌ ಆರ್ಮಿ ಹೀಯಾಳಿಸುತ್ತಿದೆ. ಹಾಗಾಗಿ, ಇಂತಹ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪತ್ರ ಬರೆದವರು ಯಾರು?

ಕಾಂಗ್ರೆಸ್‌ ಸಂಸದ ವಿವೇಕ್‌ ತಂಖಾ ಅವರು ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರಕ್ಕೆ ಕಾಂಗ್ರೆಸ್‌ ಸಂಸದರಾದ ದಿಗ್ವಿಜಯ ಸಿಂಗ್‌, ಶಶಿಕಾಂತ್‌ ಗೋಹಿಲ್‌, ಪ್ರಮೋದ್‌ ತಿವಾರಿ, ಆಮೀ ಯಗ್ನಿಕ್‌, ರಂಜೀತ್‌ ರಂಜನ್‌, ಇಮ್ರಾನ್‌ ಪ್ರತಾಪ್‌ಗಢಿ, ಆಪ್‌ನ ರಾಘವ್‌ ಛಡ್ಡಾ, ಶಿವಸೇನೆ (ಉದ್ಧವ್‌ ಠಾಕ್ರೆ ಬಣ)ಯ ಪ್ರಿಯಾಂಕಾ ಚತುರ್ವೇದಿ, ಸಮಾಜವಾದಿ ಪಕ್ಷದ ಜಯಾ ಬಚ್ಚನ್‌ ಹಾಗೂ ರಾಮ್‌ ಗೋಪಾಲ್‌ ಯಾದವ್‌ ಅವರು ಸಹಿ ಹಾಕಿದ್ದಾರೆ.

ಸಿಜೆಐ ನೇತೃತ್ವದ ನ್ಯಾಯಪೀಠ ಹೇಳಿದ್ದೇನು?

ಕೆಲ ದಿನಗಳ ಹಿಂದೆ ಶಿವಸೇನೆ ಉದ್ಧವ್‌ ಠಾಕ್ರೆ ಬಣ ಹಾಗೂ ಏಕನಾಥ್‌ ಶಿಂಧೆ ಬಣಗಳ ಪ್ರಕರಣದ ವಿಚಾರಣೆ ನಡೆಸಿದ ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠವು ಮಹಾ ವಿಕಾಸ್‌ ಅಘಾಡಿ ಸರ್ಕಾರದ ಪತನದ ವೇಳೆ ಆಗ ರಾಜ್ಯಪಾಲರಾಗಿದ್ದ ಭಗತ್‌ ಸಿಂಗ್‌ ಕೋಶ್ಯಾರಿ ಕಾರ್ಯನಿರ್ವಹಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿತ್ತು. “ಯಾವುದೇ ಮುಖ್ಯಮಂತ್ರಿಗೆ ವಿಶ್ವಾಸಮತ ಸಾಬೀತುಕಪಡಿಸುವಂತೆ ಆದೇಶಿಸುವ ಮೊದಲು ಆ ಸರ್ಕಾರ ಪತನಗೊಳ್ಳುವ ಕುರಿತು ರಾಜ್ಯಪಾಲರು ಯೋಚಿಸಬೇಕು. ಸರ್ಕಾರ ಪತನಗೊಳ್ಳುವ ಪ್ರದೇಶವನ್ನು ರಾಜ್ಯಪಾಲರು ಪ್ರವೇಶಿಸಬಾರದು. ತೀರಾ ಅಪರೂಪದ ಪ್ರಕರಣಗಳಲ್ಲಿ ಮಾತ್ರ ರಾಜ್ಯಪಾಲರು ತಮ್ಮ ಅಧಿಕಾರ ಬಳಸಬೇಕು” ಎಂದು ಹೇಳಿತ್ತು.

ಏನಿದು ಪ್ರಕರಣ?

ಮಹಾರಾಷ್ಟ್ರದಲ್ಲಿ ಕಳೆದ ವರ್ಷದ ಜೂನ್‌ನಲ್ಲಿ ಏಕನಾಥ್‌ ಶಿಂಧೆ ಅವರು ಶಿವಸೇನೆಯಿಂದ ಬಂಡಾಯವೆದಿದ್ದರು. ಇದೇ ವೇಳೆ ಅವರು ಒಂದಷ್ಟು ಶಾಸಕರನ್ನು ರೆಸಾರ್ಟ್‌ನಲ್ಲಿ ಇರಿಸಿಕೊಂಡಿದ್ದರು. ಆಗ ರಾಜ್ಯಪಾಲರಾಗಿದ್ದ ಕೋಶ್ಯಾರಿ ಅವರು ಉದ್ಧವ್‌ ಠಾಕ್ರೆ ಅವರಿಗೆ ವಿಶ್ವಾಸಮತ ಸಾಬೀತುಪಡಿಸುವಂತೆ ಆದೇಶಿಸಿದ್ದರು. ಇದಾದ ಬಳಿಕ ಮೈತ್ರಿ ಸರ್ಕಾರ ಪತನವಾಗಿತ್ತು. ಬಳಿಕ ಏಕನಾಥ್‌ ಶಿಂಧೆ ಅವರು ಸಿಎಂ ಆದರು.

ಇದನ್ನೂ ಓದಿ: Maharashtra Political Crisis: ಶಿವಸೇನೆ ಬಿಕ್ಕಟ್ಟಿನ ವೇಳೆ ರಾಜ್ಯಪಾಲರ ನಡೆ ಏಕಪಕ್ಷೀಯ ಎಂದ ಸುಪ್ರೀಂ ಕೋರ್ಟ್

Exit mobile version